ಯಶವಂತಪುರ-ಗೋವಾ ಎಕ್ಸ್‌ಪ್ರೆಸ್‌ ರೈಲಿಗೆ ಮುಖ್ಯಮಂತ್ರಿ ಚಾಲನೆ

Spread the love

ಯಶವಂತಪುರ-ಗೋವಾ ಎಕ್ಸ್‌ಪ್ರೆಸ್‌ ರೈಲಿಗೆ ಮುಖ್ಯಮಂತ್ರಿ ಚಾಲನೆ

ಬೆಂಗಳೂರು: ಯಶವಂತಪುರ-ಕಾರವಾರ- ವಾಸ್ಕೋ ಮಾರ್ಗಕ್ಕೆ ಹೊಸ ಎಕ್ಸ್‌ಪ್ರೆಸ್ ರೈಲು ಸೇವೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಇಂದು ಯಶವಂತಪುರ ರೈಲು‌ ನಿಲ್ದಾಣದಲ್ಲಿ ಚಾಲನೆ ನೀಡಿದರು.

ಇದೇ ವೇಳೆ ಯಶವಂತಪುರ-ವಿಜಯಪುರ-ಯಶವಂತಪುರ ರೈಲನ್ನು ಎಲ್.ಎಚ್.ಬಿ ಕೋಚ್ ಗಳಾಗಿ ಪರಿವರ್ತನೆ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಯಿತು. ಕೇಂದ್ರದ ರೈಲ್ವೇ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ, ಸಂಸದೆ ಶೋಭಾ ಕರಂದ್ಲಾಜೆ, ರೈಲ್ವೇ ಇಲಾಖೆ ಅಧಿಕಾರಿಗಳು ಉಪಸ್ಥಿತಿ

ಈ ರೈಲು ಸಂಜೆ 6.45ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 10.30ಕ್ಕೆ ಗೋವಾದ ವಾಸ್ಕೋಡಿಗಾಮ ರೈಲು ನಿಲ್ದಾಣ ತಲುಪಲಿದೆ. ಮಧ್ಯಾಹ್ನ 3.20ಕ್ಕೆ ಗೋವಾದಿಂದ ಹೊರಟು ಸಂಜೆ 6 ಗಂಟೆಗೆ ಕಾರವಾರಕ್ಕೆ ಬರಲಿದೆ. ಬೆಳಗ್ಗೆ 8ಕ್ಕೆ ಯಶವಂತಪುರ ತಲುಪಲಿದೆ. ಪ್ರತಿದಿನ ಇದು ಸಂಚರಿಸಲಿದೆ. ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಡುತ್ತಿದ್ದ ಕಾರವಾರ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.

ಮಂಗಳೂರು ತಾಲೂಕಿನ ಪಡೀಲು‌ ಮಾರ್ಗವಾಗಿ ಈ ರೈಲು ಸಂಚರಿಸಲಿದೆ. ಈ‌ ಹಿಂದೆ ರಾತ್ರಿ ಸಂಚರಿಸುತ್ತಿದ್ದ ರೈಲು‌ ಮಂಗಳೂರು‌ ಸಿಟಿ ಮೂಲಕ ಸಂಚರಿಸುತ್ತಿತ್ತು. ಇದರಿಂದ ಸಾಕಷ್ಟು‌ ಸಮಯ ವ್ಯಯವಾಗುತ್ತಿತ್ತು. ಬೆಳಿಗ್ಗೆ 3.36ಕ್ಕೆ ಪಡೀಲು,4.56 ಉಡುಪಿ, 4.46ಕ್ಕೆ ಕುಂದಾಪುರ, 8.25ಕ್ಕೆ ಕಾರವಾರ ತಲುಪಲಿದೆ. ಕರಾವಳಿಗೆ ಇರುವ ಇತರ ರೈಲಿಗಿಂತ ನಾಲ್ಕು ಗಂಟೆ ಬೇಗ ಈ ರೈಲು ತಲುಪಲಿದೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಯಶವಂತಪುರ-ಕಾರವಾರ-ವಾಸ್ಕೋ ಮಾರ್ಗದಲ್ಲಿ ಇಂದಿನಿಂದ ಹೊಸ ಎಕ್ಸ್‌ಪ್ರೆಸ್‌ ರೈಲು ಸಂಚರಿಸಲಿದ್ದು, ಇದಕ್ಕೆ ಚಾಲನೆ ನೀಡಿರುವುದು ಸಂತಸ ತಂದಿದೆ. ಬೆಂಗಳೂರಿಂದ ಸಂಜೆ ಹೊರಟು ಬೆಳಗ್ಗೆ ಕಾರವಾರಕ್ಕೆ ಈ ರೈಲು ತಲುಪಲಿದೆ. ಈ ಹೊಸ ರೈಲು ಸೇವೆಯಿಂದ ಶಿರಾಡಿ‌ಘಾಟ್ ರಸ್ತೆಯ ಮೇಲಿನ ವಾಹನ ಸಂಚಾರ ಒತ್ತಡ ಕಡಿಮೆಯಾಗಲಿದೆ ಎಂದರು. ತಾವು ಮುಖ್ಯಮಂತ್ರಿ ಆದ ಹೊಸದರಲ್ಲಿ ರೈಲ್ವೆ ‌ಯೋಜನೆಗಳಿಗೆ ಭೂಮಿ, ಅರ್ಧ ವೆಚ್ಚ ಕೊಡುವ ಭರವಸೆ ಕೊಟ್ಟಿದ್ದೆ. ಸರ್ಕಾರ ರೈಲ್ವೆ ಯೋಜನೆಗಳಿಗೆ ಸದಾ ಬೆಂಬಲ ಕೊಡಲಿದೆ. ಬರುವ ದಿನಗಳಲ್ಲಿ ಇನ್ನಷ್ಟು ಹೊಸ ರೈಲುಗಳ ಸೇವೆ ಸಿಗಲಿದೆ ಎಂದು ಹೇಳಿದರು.

ರೈಲ್ವೆ ಖಾತೆ ರಾಜ್ಯ ಸಚಿವ ಸಚಿವ ಸುರೇಶ್ ಅಂಗಡಿ ಮಾತನಾಡಿ, ಇಂದು ಯಶವಂತಪುರ-ಕಾರವಾರ-ವಾಸ್ಕೋಗೆ ಹೊಸ ರೈಲು ಸೇವೆ ಆರಂಭಿಸಿದ್ದೇವೆ. ಮಹಿಳಾ ದಿನಾಚರಣೆಯ ಅಂಗವಾಗಿ ಈ ಹೊಸ ರೈಲನ್ನು ಇಬ್ಬರು ಮಹಿಳಾ ಲೋಕೊಪೈಲಟ್ ಗಳು ಚಲಾಯಿಸಲಿದ್ದಾರೆ. ಈ ಹೊಸ ರೈಲಿಗೆ ಸಂಸದೆ ಶೋಭಾ ಕರಂದ್ಲಾಜೆಯವರು ಒತ್ತಾಯ ಮಾಡಿದ್ದರು. ಶೋಭಾ ಅವರು ರಾಣಿ ಚೆನ್ನಮ್ಮ ಥರ ಹೋರಾಡಿ ಈ ಹೊಸ ರೈಲು ಬರಲು ಕಾರಣರಾಗಿದ್ದಾರೆ ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಇನ್ನೂಹಲವು ಜಿಲ್ಲೆಗಳಿಗೆ ರೈಲು ಸೇವೆ ದೊರೆತಿಲ್ಲ. ನಾನು ಪ್ರತಿನಿಧಿಸುವ ಚಿಕ್ಕಮಗಳೂರಿಗೆ ರೈಲು ಬಂದಿದ್ದೇ ನಮ್ಮ ಸರ್ಕಾರ ಬಂದ ಮೇಲೆ. ಹಬ್ಬಗಳು ಬಂದಾಗ ನಮ್ಮ ಭಾಗದ ಜನ‌ರು ಟ್ಯಾಕ್ಸಿ, ಟಿಟಿ ವಾಹನಗಳಲ್ಲಿ ಬಾಡಿಗೆ ಮಾಡಿಕೊಂಡು ಹೋಗುತ್ತಾರೆ. ಕರಾವಳಿ ಜನ‌ ಬೆಂಗಳೂರಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ನಮ್ಮ ಊರುಗಳಿಗೆ ಹೋಗಲು ರೈಲು ಸೇವೆ ಇರಲಿಲ್ಲ. ಇವತ್ತು ನಮ್ಮ ಭಾಗದ ಜನರ ನಿರೀಕ್ಷೆ ಈಡೇರಿದೆ. ಉಡುಪಿ, ಭಟ್ಕಳ, ಕಾರವಾರ ಮಾರ್ಗದಲ್ಲಿ ಈ ಹೊಸ ರೈಲು ಸಂಚರಿಸಲಿದೆ ಎಂದರು.


Spread the love