ಯು.ಎ.ಇ.: ಯು.ಎ.ಇ. ಯಲ್ಲಿ ನೆಲೆಸಿರುವ ಕರ್ನಾಟಕ ಪರ ಸಂಘಟನೆಗಳ ರಕ್ತದಾನ ಅಭಿಯಾನದಲ್ಲಿ ಮುಖ್ಯವಾಗಿ ಪವಿತ್ರ ರಂಜಾನ್ ಮಾಸದಲ್ಲಿ ವಿಶೇಷ ರಕ್ತದಾನ ಶಿಬಿರವನ್ನು ಏರ್ಪಡಿಸಿ ಸಾವಿರಾರು ರಕ್ತದಾನಿಗಳು ರಕ್ತದಾನ ನೀಡುವುದರ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ್ದಿದ್ದಾರೆ.
ಯು.ಎ.ಇ. ಯಲ್ಲಿ ರಂಜಾನ್ ಮಾಸದಲ್ಲಿ ರಕ್ತದ ಬೇಡಿಕೆ ಹೆಚ್ಚು
ಯು.ಎ.ಇ. ಯಲ್ಲಿ ರಂಜಾನ್ ಮಾಸದಲ್ಲಿ ಇನ್ನಿತರ ಮಾಸದಲ್ಲಿ ರಕ್ತ ಕೇಂದ್ರಗಳಲ್ಲಿ ಸಂಗ್ರಹವಾಗುವಷ್ಟು ರಕ್ತ ಶೇಖರಣೆಯಾಗುವುದಿಲ್ಲ. ರಾತ್ರಿಯ ವೇಳೆ ಮಾತ್ರ ದಾನಿಗಳು ಆಗಮಿಸಿ ರಕ್ತದಾನ ನೀಡುತ್ತಾರೆ. ಇನ್ನಿತರ ಮಾಸಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚು ರಕ್ತದ ಬೇಡಿಕೆ ಇದೆ. “ತಲೆಸ್ಮಿಯಾ” ರಕ್ತ ಹಿನತೆಯಿಂದ ಬಳಲುತಿರುವ ಸುಮಾರು ಅರುನೂರರಿಂದ ಏಳುನೂರರವರೆಗೆ ಪುಟ್ಟ ಮಕ್ಕಳಿಂದ ವಯೋವೃದ್ದರವರೆಗೆ ದುಬಾಯಿ ಆರೋಗ್ಯ ಕೇಂದ್ರದಲ್ಲಿಯೆ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿನಿತ್ಯ ಎಪ್ಪತೈದು ಮಂದಿ ದಾನಿಗಳು ನೀಡುವ ರಕ್ತ ಇವರಿಗೆ ನೀಡ ಬೇಕಾಗಿದೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್, ಲ್ಯುಕೆಮಿಯಾ, ಗರ್ಭಿಣಿಯರ ಪ್ರಸವ ಸಮಯದಲ್ಲಿ ರಕ್ತದ ಅವಶ್ಯಕತೆ, ಶಸ್ತ್ರಕ್ರಿಯೇ ಸಂದರ್ಭ ಇತ್ಯಾದಿ ಸಂದರ್ಭಗಳಿಗೆ ಅನುಸಾರವಾಗಿ ರಕ್ತದ ಬೇಡಿಕೆ ಹೆಚ್ಚು ಇದ್ದು ಶಾರ್ಜಾ, ಅಜ್ಮಾನ್ ಹಾಗೂ ಇನ್ನಿತರ ಎಮೀರೆಟ್ಸ್ ಗಳಿಂದ ಬೇಡಿಕೆ ಹೆಚ್ಚು ಇರುತ್ತದೆ.
ಕರ್ನಾಟಕದಿಂದ ಯು.ಎ.ಇ.ಗೆ ಬಂದು ಉಧ್ಯಮಗಳನ್ನು ಸ್ಥಾಪಿಸಿರುವ ಸಂಸ್ಥೆಗಳು ನಿರಂತರವಾಗಿ ರಕ್ತದಾನ ಶಿಬಿರವನ್ನು ನಡೆಸಿಕೊಂಡು ಬರುತ್ತಿದೆ. ಎನ್.ಎಂ.ಸಿ. ಹೆಲ್ತ್ ಕೇರ್ , ಗಲ್ಫ್ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಯು.ಎ.ಇ. ಎಕ್ಸ್ ಚೇಂಜ್ ಮತ್ತು ಇನ್ನಿತರ ಹಲವಾರು ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಕರ್ನಾಟಕದವರು ಪ್ರತಿವರ್ಷ ಆಯೋಜಿಸುತ್ತಿರುವ ರಕ್ತದಾನ ಶಿಬಿರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ರಕ್ತದಾನ ಮಾಡಿಕೊಂಡು ಬರುತಿದ್ದಾರೆ. ಅದೇ ರೀತಿ ಇನ್ನಿತರ ರಾಜ್ಯದವರು ಅವರ ಸಂಘಟನೆಗಳ ಮೂಲಕ ರಕ್ತದಾನ ಅಭಿಯಾನ ನಡೆಸಿಕೊಂಡು ಬರುತ್ತಿದ್ದಾರೆ.
ಭಾರತೀಯರಾಗಿ ಕೊಲ್ಲಿನಾಡಿನಲ್ಲಿ ರಕ್ತದಾನದ ಮೂಲಕ ಮಾನವೀಯತೆ ಮೆರೆದ ಕರ್ನಾಟಕ ಪರ ಸಂಘಟನೆಗಳು
ಯು.ಎ.ಇ. ಯಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘ ಸಂಸ್ಥೆಗಳು ತಮ್ಮ ವಾರ್ಷಿಕ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರವನ್ನು ಕಡ್ಡಾಯವಾಗಿ ನಡೆಸಿಕೊಂಡು ಬರುತ್ತಿದೆ. ಕರ್ನಾಟಕದ ಭಾಷೆ ಮತ್ತು ಸಮುದಾಯ ಸಂಘ ಸಂಸ್ಥೆಗಳ ಸದಸ್ಯರು ನಿರಂತರವಾಗಿ ಸಾವಿರಾರು ಸಂಖ್ಯೆಯಲ್ಲಿ ಪವಿತ್ರ ರಕ್ತದಾನ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡು ರಕ್ತದಾನಿ ಗಳಾಗಿದ್ದಾರೆ.
ಮಂಗ್ಲೂರ್ ಕೊಂಕಣ್ಸ್ ದುಬಾಯಿ 1980 ರಲ್ಲಿ ರಕ್ತದಾನ ಶಿಬಿರವನ್ನು ನಡೆಸಿ ಸರ್ಕಾರದ ದಾಖಲೆಯ ಪುಟದಲ್ಲಿ 1980 ರ ದಶಕದಲ್ಲೇ ದಾಖಲಾಗಿದ್ದಾರೆ. ಜೆಬೆಲ್ ಆಲಿ ಕರ್ನಾಟಕ ಮಿತ್ರರು ಜೆಬೆಲ್ ಆಲಿಯಲ್ಲಿ ರಕ್ತದಾನ ಮಾಡಿ ರಕ್ತದಾನದ ಮಹತ್ವ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಶಾರ್ಜಾ ಕರ್ನಾಟಕ ಸಂಘ ಗಲ್ಫ್ ಮೆಡಿಕಲ್ ಆಸ್ಪತ್ರೆ ಸಹಯೋಗದೊಂದಿಗೆ ಶಾರ್ಜಾ ಮಿನಿಸ್ಟ್ರಿ ಆಪ್ ಹೆಲ್ತ್ ಆಶ್ರಯದಲ್ಲಿ 2006 ರಲ್ಲಿ ಅಜ್ಮಾನ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ನಡೆಸಲಾಯಿತು. ಅಂದಿನ ದಿನದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಭಾರತೀಯರೊಂದಿಗೆ, ಅರಬ್ ಪ್ರಜೆಗಳು, ಪಾಕಿಸ್ಥಾನಿಯರು, ಶ್ರೀಲಂಕಾ, ಬಾಂಗ್ಲಾ, ಫಿಲಿಪೈನ್ಸ್, ಈಜಿಪ್ತ್ ದೇಶಿಯರು ರಕ್ತದಾನ ಮಾಡಿ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಿದ್ದಾರೆ.
ಡಿಸೆಂಬರ್ 2ನೇ ತಾರೀಕು ನಡೆಯುವ ಯು.ಎ.ಇ. ನ್ಯಾಶನಲ್ ಡೇ ಪ್ರಯುಕ್ತ ಮೊಗವೀರ್ಸ್ ಯು.ಎಇ. ಸಂಘಟನೆ ರಕ್ತದಾನ ಶಿಭಿರವನ್ನು ಪ್ರತಿವರ್ಷ ನಡೆಸಿಕೊಂಡು ಬರುತ್ತಿದ್ದು ರಾಷ್ಟ್ರೀಯ ಹಬ್ಬಕ್ಕೆ ತನ್ನ ಕೊಡುಗೆಯನ್ನು ನೀಡುತ್ತಾ ಬರುತ್ತಿದ್ದಾರೆ. ಮೋಗವೀರ್ಸ್ ಯು.ಎ.ಇ. ಉಪಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಸಾಲಿಯಾನ್ ರವರು ಹಲವಾರು ಬಾರಿ ರಕ್ತದಾನ ಮಾಡಿರುವುದರ ಜೊತೆಗೆ ದುಬಾಯಿಯಲ್ಲಿ ಸಂಘ ಸಂಸ್ಥೆಗಳ ರಕ್ತದಾನ ಶಿಬಿರಕ್ಕೆ ವ್ಯವಸ್ಥೆ ಮಾಡಿಕೊಡುವ ಜವಬ್ಧಾರಿ ವಹಿಸಿಕೊಂಡು ರಕ್ತದಾನಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಯು.ಎ.ಇ. ರಕ್ತದಾನ ಅಭಿಯಾನದಲ್ಲಿ ಪಾಲ್ಗೊಂಡಿರುವ ಕರ್ನಾಟಕ ಪರ ಸಂಘ ಸಂಸ್ಥೆಗಳು ಅಬುಧಾಬಿ ಕರ್ನಾಟಕ ಸಂಘ, ದುಬಾಯಿ ಕರ್ನಾಟಕ ಸಂಘ, ಶಾರ್ಜಾ ಕರ್ನಾಟಕ ಸಂಘ, ಅಲ್ ಐನ್ ಕನ್ನಡ ಸಂಘ, ಯು.ಎ.ಇ.ಬಂಟ್ಸ್, ಮೊಗವೀರ್ಸ್ ಯು.ಎ.ಇ., ಅಮ್ಚಿಗೆಲೆ ಸಮಾಜ, ವಿಶ್ವಕರ್ಮ ಸೇವಾ ಸಮಿತಿ ಯು.ಎ.ಇ., ರಾಮಕ್ಷತ್ರೀಯ ಸಂಘ ಯು.ಎ.ಇ., ಬಿಲ್ಲವಾಸ್ ದುಬಾಯಿ, ಬಿಲ್ಲವ ಬಳಗ ದುಬಾಯಿ, ಬಿಲ್ಲವರ ಬಳಗ ಅಬುಧಾಬಿ, ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ, ಪದ್ಮಶಾಲಿ ಸಮುದಾಯ ಯು.ಎ.ಇ., ಮಿತ್ರಕೂಟ ಯು.ಎ.ಇ., ಬ್ರಾಹ್ಮಣ ಸಮಾಜ, ಗಾಣಿಗ ಸಮಾಜ ದುಬಾಯಿ ಯು.ಎ.ಇ., ದೇವಾಡಿಗ ಸಂಘ ದುಬಾಯಿ, ಯು.ಎ.ಇ. ಬಸವ ಸಮಿತಿ ದುಬಾಯಿ, ಧ್ವನಿ ಪ್ರತಿಷ್ಠಾನ ಯು.ಎ.ಇ. ಕುಂದಾಪುರ ದೇವಾಡಿಗ ಮಿತ್ರರು, ವಕ್ಕಲಿಗ ಸಂಘ ಯು.ಎ.ಇ., ಯಕ್ಷ ಮಿತ್ರರು ದುಬಾಯಿ, ತೀಯಾ ಸಮಾಜ ಯು.ಎ.ಇ., ಕನ್ನಡ ಕೂಟ ಯು.ಎ.ಇ., ನಮ ತುಳುವೆರ್ ಯು.ಎ.ಇ., ತುಳು ಪಾತೆರ್ಕಾ ತುಳು ಒರಿಪಕಾ., ಮಂಗ್ಲೂರ್ ಕೊಂಕಣ್ಸ್, ಕೊಂಕಣ್ಸ್ ಬೆಲ್ಸ್ ದುಬಾಯಿ, ಪಾಂಗಳಿಯೇಟ್ಸ್ ದುಬಾಯಿ, ದಾಯಿಜಿ ರಂಗ್ ಮಂದಿರ್, ಕರಾವಳಿ ಮಿಲನ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಯು.ಎ.ಇ. ರಕ್ತದಾನ ಅಭಿಯನದಲ್ಲಿ ಭಾಗವಹಿಸುತ್ತಾ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಹ ರಕ್ತದಾನ ಮಾಡುತ್ತಿರುವುದು ರಕ್ತದಾನ ಅಭಿಯಾನಕ್ಕೆ ಇನ್ನಷ್ಟು ಯಶಸ್ಸು ದೊರಕಿದೆ. ಯು.ಎ.ಇಯಲ್ಲಿ ನೆಲೆಸಿರುವ ಎಲ್ಲಾ ಭಾರತೀಯರಲ್ಲಿ ರಕ್ತದಾನದಬಗ್ಗೆ ಜಾಗೃತಿ ಮೂಡಿಸಿ ಪ್ರತಿಯೊಬ್ಬರು ಆರೋಗ್ಯವಂತಾರಾಗಿ, ತಮ್ಮ ರಕ್ತವನ್ನು ದಾನ ಮಾಡಿ ರಕ್ತದ ಅವಶ್ಯಕತೆ ಇರುವವರ ಜೀವವನ್ನು ಉಳಿಸುವುದರೊಂದಿಗೆ, ತಾವು ಸಹ ಆರೋಗ್ಯವಂತರೆಂದು ದೃಡಿಕರಿಸಿ ಕೊಳ್ಳುವಂತಾಗಬೇಕು.
ರಕ್ತ ದಾನ ಶಿಬಿರದ ಸುದ್ದಿ ಸಿಕ್ಕಿದಾಗ ತಾವು ಬನ್ನಿ ತಮ್ಮ ಸ್ನೇಹಿತರನ್ನು ಕರೆತನ್ನಿ. ರಕ್ತದಾನಿಗಳ ಮುಖದಲ್ಲಿ ಸಂತೃಪ್ತಿಯ ನಗುವನ್ನು ಕಾಣಬಹುದಾಗಿದೆ.
ರಂಜಾನ್ ಮಾಸದಲ್ಲಿ ಈ ಬಾರಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ಸಂಘಟನೆಗಳು:
ಸ್ಥಳ : ಲತಿಫಾ ಹಾಸ್ಪಿಟಲ್ ದುಬಾಯಿ ಸಮಯ : ರಾತ್ರಿ 8.30 ರ ನಂತರ
9 ಜೂನ್, ಗುರುವಾರ : ಬ್ರಾಹ್ಮಣ ಸಮಾಜ ದುಬಾಯಿ
12 ಜೂನ್ ಭಾನುವಾರ : ಬಸವ ಸಮಿತಿ ದುಬಾಯಿ
14 ಜೂನ್ ಮಂಗಳವಾರ – ವಿಶ್ವ ರಕ್ತದಾನಿಗಳ ದಿನ – ಮೊಗವೀರ್ಸ್ ಯು.ಎ.ಇ.
17 ಜೂನ್ : ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ : ಸಮಯ : ಬೆಳಿಗ್ಗೆ 9.30 ರಿಂದ 1.30 ರವರೆಗೆ
ಸ್ಥಳ : ರಿವಾ ಲೇಸರ್ ಮೆಡಿಕಲ್ ಸೆಂಟರ್, ಅಲ್ ನಾದಾ – ದುಬಾಯಿ
21 ಜೂನ್ ಮಂಗಳವಾರ : ಪದ್ಮಶಾಲಿ ಯು.ಎ.ಇ.
24 ಜೂನ್ ಶುಕ್ರವಾರ : ತಿಯಾ ಸಮಾಜ ದುಬಾಯಿ : ಮಧ್ಯಾಹ್ನ ೧.೩೦ ರಿಂದ ೩,೦೦
29 ಜೂನ್ ಬುದವಾರ : ವಿಶ್ವಕರ್ಮ ಸೇವಾ ಸಮಿತಿ ಯು..ಎ.ಇ.
4 ಜುಲೈ ಸೋಮವಾರ : ಬಿಲ್ಲವಾಸ್ ದುಬಾಯಿ
ರಕ್ತದಾನಿಗಳು ಎಂದಿಗೂ ಆರೋಗ್ಯವಂತರು, ಜೀವ ಉಳಿಸುವವರು…
ಪ್ರತಿ ಕ್ಷಣ, ಪ್ರತಿದಿನ ತುರ್ತಾಗಿ ಜೀವವನ್ನು ಉಳಿಸಲು ರಕ್ತದ ಅಗತ್ಯವಿದೆ. ಜಗತಿನಾದ್ಯಂತ ಹಲವಾರು ಸಂಘ ಸಂಸ್ಥೆಗಳು ರಕ್ತದಾನ ಪಡೆದು ರಕ್ತಬ್ಯಾಂಕಿಗೆ ನೀಡಿ ಕೋಟ್ಯಾಂತರ ಜೀವ ರಕ್ಷಕರಾಗಿ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ಬಾರಿಯೂ ರಕ್ತದಾನ ಮಾಡುವವರು ಆರೋಗ್ಯವಂತರಾಗಿದ್ದು ತಮ್ಮ ತಮ್ಮ ಅರೋಗ್ಯವನ್ನು ಕಾಪಾಡಿಕೊಂಡಿರುವುದು ರಕ್ತದಾನಿಗಳ ಆರೊಗ್ಯದ ಗುಟ್ಟು. ರಕ್ತದಾನಿಗಳು ರಕ್ತದಒತ್ತಡ, ಹೈ ಕೊಲಸ್ಟ್ರಾಲ್, ಕ್ಯಾನ್ಸರ್, ಸ್ಟ್ರೆಸ್ಸ್, ಹೆಚ್ಚು ತೂಕದ ಮತ್ತು ಇನ್ನಿತರ ಹಲವಾರು ಸಮಸ್ಯೆಗಳಿಗೆ ತುತ್ತಗಾದೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾ ಬಂದಿರುವ ರಕ್ತದಾನಿಗಳು ನಿರಂತರವಾಗಿ ರಕ್ತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ವಿಶೇಷವಾಗಿ ವಿದ್ಯಾವಂತರಲ್ಲಿ ರಕ್ತದಾನದ ಬಗ್ಗೆ ಹೆಚ್ಚು ಅರಿವು ಮೂಡ ಬೇಕಿದೆ. ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ದಾನಿಗಳು ಪಾಲ್ಗೊಂಡು ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.
ಗಣೇಶ್ ರೈ, ಅರಬ್ ಸಂಯುಕ್ತ ಸಂಸ್ಥಾನ