ಯುವರೆಡ್ ಕ್ರಾಸ್ ಆಶ್ರಯದಲ್ಲಿ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮ
ಉಡುಪಿ : ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯುಎಸಿ), ಯ ಸಹಯೋಗದಲ್ಲಿ, ಯುವರೆಡ್ ಕ್ರಾಸ್ ಘಟಕ ಮತ್ತು ರೋಟರ್ಯಾಕ್ಟ್ ಕ್ಲಬ್‍ನ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮವು ಇತ್ತೀಚಿಗೆ ಕಾಲೇಜಿನ ಸಭಾಭವನದಲ್ಲಿ ನಡೆಯಿತು.
ಕೊಡಗು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್‍ನ ಕಮ್ಯೂನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥರೂ, ಉಡುಪಿಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿಗಳೂ ಆದ ಪ್ರೊ. ಡಾ| ರಾಮಚಂದ್ರ ಕಾಮತ್ ರವರು, ಸವಿಸ್ತಾರವಾಗಿ ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿಯನ್ನು ವಿವಿಧ ರೀತಿಯ ಪ್ರಾತ್ಯಕ್ಷಿಕೆಗಳು ಮತ್ತು ಉದಾಹರಣೆಗಳ ಸಹಿತ ವಿವರಿಸಿದರು.
ಯಾವುದೇ ವ್ಯಕ್ತಿ ಗಾಯಗೊಂಡಾಗ ಅಥವಾ ಅಸ್ವಸ್ಥರಾದಾಗ, ವೈದ್ಯಕೀಯ ನೆರವು ಮತ್ತು ಚಿಕಿತ್ಸೆ ದೊರೆಯುವ ಮುಂಚಿನ ಅವಧಿಯು ಅತ್ಯಂತ ಪ್ರಾಮುಖ್ಯವಾಗಿದ್ದು, ಅಂತಹವರಿಗೆ ಪ್ರಥಮ ಚಿಕಿತ್ಸೆ ನೀಡುವುದರಿಂದ ಪ್ರಾಣಾಪಾಯವನ್ನು ತಡೆಯುವುದಲ್ಲದೇ ರೋಗಿ ಶೀಘ್ರ ಚೇತರಿಸಿಕೊಳ್ಳಲು ಸಹಕಾರಿಯಾಗುತ್ತದೆ. ಪ್ರಥಮ ಚಿಕಿತ್ಸೆಯನ್ನು ಯಾರು ಬೇಕಾದರೂ ನೀಡಬಹುದು. ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣೆಯ ಬಗ್ಗೆ ತಿಳಿದುಕೊಂಡಿರಬೇಕಾದುದು ಇಂದಿನ ಅವಶ್ಯಕತೆಯಾಗಿದೆ” ಎಂದು ತಿಳಿಸುತ್ತಾ, ವಿಷ ಜಂತು ಕಡಿತ, ಅಪಘಾತ, ವಿದ್ಯುದಾಘಾತ, ಮುಂತಾದ ವಿವಿಧ ಸಂದರ್ಭಗಳಲ್ಲಿ ನೀಡಬೇಕಾದ ಪ್ರಥಮ ಚಿಕಿತ್ಸೆಯ ಬಗ್ಗೆ ಸವಿವರವಾಗಿ ಹೇಳಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಶ್ರೀವರ್ಮ ಅಜ್ರಿ. ಎಂ. ರವರು, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ, ಅಪಘಾತ ಅಥವಾ ತುರ್ತು ಸಂದರ್ಭಗಳಲ್ಲಿ ಗಾಯಾಳುಗಳು ನರಳುತ್ತಿದ್ದರೂ, ಕೆಲ ವಿಕೃತ ಮನಸ್ಸಿನವರು ನಡೆದ ಘಟನೆಯನ್ನು ತಮ್ಮ ಫೋನ್‍ಗಳಲ್ಲಿ ಚಿತ್ರೀಕರಿಸುವುದಲ್ಲೇ ಮಗ್ನರಾಗಿ, ಮಾನವೀಯತೆಗೆ ಬೆಲೆ ನೀಡದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಎಲ್ಲರೂ ಪ್ರಥಮ ಚಿಕಿತ್ಸೆಯ ಜ್ಞಾನ ಪಡೆದುಕೊಂಡು ಸಂದರ್ಭೋಚಿತವಾಗಿ ಚಿಕಿತ್ಸೆ ನೀಡುವಂತಾಗಬೇಕು ಎಂದು ಕರೆಕೊಟ್ಟರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರೂ, ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕರೂ ಆದ ವೆಂಕಟೇಶ್ ರವರು, ಪ್ರಾಸ್ತಾವಿಕವಾಗಿ ಪ್ರಥಮ ಚಿಕಿತ್ಸೆಯ ಅಗತ್ಯ ಮತ್ತು ನೀಡುವವರಿಗೆ ಬೇಕಾದ ಅರ್ಹತೆ, ನೈಪುಣ್ಯಗಳ ಬಗ್ಗೆ ತಿಳಿಸಿ, ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ, ಕಾಲೇಜಿನ ತ್ರೈಮಾಸಿಕ ವಾರ್ತಸಂಚಿಕೆ ‘ವಿಂಧುಜಾ’ ಇದರ ಅನಾವರಣವನ್ನು ಡಾ| ರಾಮಚಂದ್ರ ಕಾಮತ್ ರವರು ನಡೆಸಿದರು.
ಮ್ಯಾನೆಜ್‍ಮೆಂಟ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ದಿವ್ಯಾ ಪ್ರಭು. ಪಿ. ರವರು ವಂದಿಸಿದರು.
ಕು. ವಿದ್ಯಾಶ್ರೀ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಕು. ರಕ್ಷಿತಾ ಹೆಚ್. ಆರ್ ನಿರೂಪಿಸಿದರು.
ಐಕ್ಯುಎಸಿ ಸಂಚಾಲಕರಾದ ಜ್ಯೋತಿ ಎಲ್ ಜನ್ನೆ, ಸಹಾಯಕ ಪ್ರಾಧ್ಯಾಕಕರಾದ ನವೀನ, ಯೋಗೇಶ್ ಡಿ.ಹೆಚ್, ಗಣೇಶ ಎಸ್. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಯುವರೆಡ್ ಕ್ರಾಸ್ ಆಶ್ರಯದಲ್ಲಿ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮ
Spread the love
Spread the love