ರಂಗಸಮುದ್ರದಲ್ಲಿ ಡಿವೈಎಸ್ಪಿ ಗಣಪತಿ ಅಂತ್ಯ ಸಂಸ್ಕಾರ
ಮಡಿಕೇರಿ: ಆತ್ಮಹತ್ಯೆ ಮಾಡಿಕೊಂಡ ಮಂಗಳೂರು ಡಿವೈಎಸ್ಪಿ ಎಂಕೆ ಗಣಪತಿ ಅವರ ಅಂತ್ಯಸಂಸ್ಕಾರ ಕೊಡಗಿನ ಸೋಮವಾರಪೇಟೆ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ ನಡೆದಿದೆ.
ಗಣಪತಿ ಅವರ ಮನೆಯ ಬಳಿಯಲ್ಲಿರುವ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು. ಪೋಲಿಸ್ ಅಧಿಕಾರಿಗಳು ಮೃತ ಗಣಪತಿಗೆ ಪುಷ್ಪಗುಚ್ಛವಿರಿಸಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಅವರ ಅಂತ್ಯ ಸಂಸ್ಕಾರ ಕೊಡವ ಸಂಸ್ಕೃತಿಯಂತೆ ಜರುಗಿತು.
ಈ ನಡುವೆ ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಅವರ ಹೆಸರು ಕೇಳಿ ಬಂದ ಕಾರಣ ಜಾರ್ಜ್ ಅವರು ರಾಜೀನಾಮೆ ನೀಡಬೇಕೆಂದು ರಾಜ್ಯ ವಿರೋಧ ಪಕ್ಷ ಬಿಜೆಪಿ ಒತ್ತಾಯಿಸಿದೆ.
ಎಂಕೆ ಗಣಪತಿ ಅವರ ಮೃತದೇಹವನ್ನು ಆ್ಯಂಬುಲೆನ್ಸ್ ನಲ್ಲಿರಿಸಿ ಬಿಜೆಪಿ ಜಿಲ್ಲಾ ಘಟಕ ಮಡಿಕೇರಿ ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿತ್ತು, ಬೆಳಗ್ಗೆ ಸುಮಾರು 10 ಗಂಟೆಗೆ ಮಳೆಯನ್ನು ಲೆಕ್ಕಿಸದೆ ಪ್ರತಿಭಟನಾಕಾರರು ಧರಣಿ ಕುಳಿತಿದ್ದರು. ಪೊಲೀಸರಿಗೆ ರಕ್ಷಣೆ ನೀಡಿ, ಜಾರ್ಜ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದ ಪ್ರತಿಭಟನಾಕಾರರನ್ನು ಜಿಲ್ಲಾಧಿಕಾರಿ, ಐಜಿಪಿ,ಎಸ್ ಐ ಮನವೊಲಿಸಿ ಧರಣಿ ಕೈಬಿಡುವಂತೆ ಮಾಡಿದ್ದರು.