ರಸ್ತೆ ಅಪಘಾತಕ್ಕೊಳಗಾದ ಶಂಕರ್ ರಕ್ಷಿಸಿದ ಕೆಸಿಎಫ್ ಕಾರ್ಯಕರ್ತರು, ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ನೀಡಿದ ಸಚಿವ  ಖಾದರ್

Spread the love

ರಸ್ತೆ ಅಪಘಾತಕ್ಕೊಳಗಾದ ಶಂಕರ್ ರಕ್ಷಿಸಿದ ಕೆಸಿಎಫ್ ಕಾರ್ಯಕರ್ತರು, ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ನೀಡಿದ ಸಚಿವ  ಖಾದರ್

ಮದೀನಾ ಮುನವ್ವರ: ಸೌದಿ ಅರೇಬಿಯಾದಲ್ಲಿ ಅಪಘಾತಕ್ಕೊಳಗಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡಿನ ಶಂಕರ್ ಎಂಬ ಹಿಂದೂ ಸಹೋದರನಿಗೆ ಕರ್ನಾಟಕದ ಕೆ.ಸಿ.ಎಫ್ ತಂಡ ಆಸರೆಯಾಗಿದೆ.

ತಮಿಳುನಾಡಿನ ನಾಗರಕೊಯಿಲ್ ನಿವಾಸಿ ಶಂಕರ್ ಅವರು ವ್ರತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಸೌದಿ ಅರೇಬಿಯಾ ರಾಷ್ಟ್ರಕ್ಕೆ ತಾತ್ಕಾಲಿಕ ವೀಸಾದಲ್ಲಿ ಬಂದು ಒಂದೆರಡು ದಿನಗಳು ಮಾತ್ರ ಕಳೆದಿತ್ತು.ಶಂಕರ್ ಕೆಲಸ ಮಾಡುತ್ತಿದ್ದ ಕಂಪೆನಿಯು ಅವರನ್ನು ಜಿದ್ದಾದಿಂದ ಹಫರುಲ್ ಬಾತಿನ್ ಎಂಬಲ್ಲಿಗೆ ಕಾರಿನಲ್ಲಿ ಕಳುಹಿಸಿತ್ತು. ವಿಧಿ ಎಂಬಂತೆ ಅಂದು ರಾತ್ರಿ(02-05-2019) ಸುಮಾರು 9ರ ಹೊತ್ತಿಗೆ ಅವರು ಚಲಿಸುತ್ತಿದ್ದ ಕಾರು ಮದೀನಾ ಸಮೀಪದ ಬನಿ ಮುಹಯ್ಯ ಎಂಬಲ್ಲಿ ಘನವಾಹನವೊಂದರ ಹಿಂಬದಿಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಪಾಕಿಸ್ತಾನದ ಪ್ರಜೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಶಂಕರ್ ಗಂಭೀರವಾಗಿ ಗಾಯಗೊಂಡಿದ್ದು, ಮದೀನಾದ ಕಿಂಗ್ ಫಹದ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು. ಜೊತೆಯಲ್ಲಿದ್ದ ಮೋಹನ್ ಎಂಬವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದರು.

ಈ ವಿಷಯ ತಿಳಿದ ಕೆ.ಸಿ.ಎಫ್ ಮದೀನಾ ಮುನವ್ವರ ಸೆಕ್ಟರ್ ತಂಡ ಏಕಾಂಗಿಯಾಗಿ ಅಸಹಾಯಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಮಲಗಿದ್ದ ಶಂಕರ್ ಅವರನ್ನು ಭೇಟಿಯಾಗಿ ಉಪಚರಿಸಿ , ಅವರಿಗೆ ಬೇಕಾಗುವ ಅವಶ್ಯಕತೆಗಳನ್ನು ಪೂರೈಸಿ ಸಾಂತ್ವನ ನೀಡುವ ಮೂಲಕ ಮಾನವೀಯತೆಯನ್ನು ಮೆರೆದರು.

ಕಳೆದ ಐದಾರು ವರ್ಷಗಳಿಂದ ಹಜ್ಜ್ , ಉಮ್ರಾ ಯಾತ್ರಾರ್ಥಿಗಳಿಗೆ ಹಾಗೂ ಅರಬ್ ದೇಶದಲ್ಲಿ ನೆಲೆಸಿರುವ ಕರ್ನಾಟಕದ ಅನಿವಾಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಕೆ.ಸಿ.ಎಫ್ ಸಂಘಟನೆಯು ಎಲ್ಲಾ ಜಾತಿ ಧರ್ಮದ ಜನರ ಪ್ರಶಂಸೆಗೆ ಪಾತ್ರವಾಗಿದೆ.ಇನ್ನು ಪವಿತ್ರ ಉಮ್ರಾ ಕರ್ಮ ನಿರ್ವಹಿಸಿ

ಮದೀನಾ ಝಿಯಾರತ್ ಗೆ ಆಗಮಿಸಿದ ಕರ್ನಾಟಕದ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಕೆ.ಸಿ.ಎಫ್ ಕಾರ್ಯಕರ್ತರ ಜೊತೆಗೆ ಮದೀನಾದ ಕಿಂಗ್ ಫಹದ್ ಆಸ್ಪತ್ರೆಗೆ ಶುಕ್ರವಾರ(10-05-2019) ಭೇಟಿ ನೀಡಿ, ಶಂಕರ್ ರ ಆರೋಗ್ಯ ವಿಚಾರಿಸಿ ಸಾಂತ್ವನ ನೀಡಿದ ಅವರು,ಜಾತಿ ಮತ ಧರ್ಮ ಲೆಕ್ಕಿಸದೆ ಎಲ್ಲರ ಸೇವೆಯಲ್ಲಿ ತೊಡಗಿರುವ ಕೆಸಿಎಫ್ ಕಾರ್ಯಕರ್ತರಕೆಲಸ ಶ್ಲಾಘನೀಯ ವಾಗಿದೆ. ಹಜ್ಜ್ ಹಾಗೂ ಉಮ್ರಾಕೆ ಆಗಮಿಸುವ ಹಜ್ಜಾಜಿಗಳ ಸೇವೆ ಮಾಡುತ್ತಿದ್ದು ಕನ್ನಡಿಗರಿಗೆ ಹೆಮ್ಮೆಯಾಗಿದೆ. ಕರ್ನಾಟಕ ಸರಕಾರದ ಪರವಾಗಿ ಕೆಸಿಎಫ್ ನ ಎಲ್ಲಾ ಸದಸ್ಯರನ್ನು ಅಭಿನಂದಿಸುತ್ತಿರುವುದಾಗಿ ತಿಳಿಸಿದರು.ನಿಯೋಗದಲ್ಲಿ

ಕೆ.ಸಿ.ಎಫ್ ಮದೀನಾ ಮುನವ್ವರ ಸೆಕ್ಟರ್ ಸಾಂತ್ವನ ತಂಡದ ಪ್ರಮುಖರಾಗಿರುವ ತಾಜುದ್ದೀನ್ ಸುಳ್ಯ, ರಝಾಕ್ ಉಳ್ಳಾಳ್, ಜಬ್ಬಾರ್ ಕಾವಳಕಟ್ಟೆ, ಹುಸೈನಾರ್ ಮಾಪಲ್, ಆಶ್ರಫ್ ಸಖಾಫಿ ನೂಜಿ, ಆಸಿಫ್ ಬದ್ಯಾರ್, ಹಮೀದ್ ಕಲ್ಲರ್ಬೆ, ಆಸೀಫ್ ಅಮಾಕೊ ಸಹಿತ ಸೆಕ್ಟರ್ ಸಮಿತಿಯ ಕಾರ್ಯಕರ್ತರು ಜೊತೆಯಲ್ಲಿದ್ದರು.

ವರದಿ: ಹಕೀಂ ಬೋಳಾರ್, ಮದೀನಾ ಮುನವ್ವರ


Spread the love