ರಸ್ತೆ ಬದಿ ಮಾತ್ರೆ, ಔಷಧಿಗಳ ಎಸೆತ: ವಿತರಕರಿಂದಲೇ ಸ್ವಚ್ಛಗೊಳಿಸಿ, ಇಲಾಖೆಯಿಂದ ನೋಟೀಸ್
ಮ0ಗಳೂರು : ಅವಧಿ ಮೀರಿದ ಔಷಧಿಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ, ರಸ್ತೆ ಬದಿ ಬಿಸಾಡಿ ಹೋಗಿದ್ದವರನ್ನು ಪತ್ತೆ ಹಚ್ಚಿದ ಔಷದ ನಿಯಂತ್ರಣ ಇಲಾಖೆ ಅಧಿಕಾರಿಗಳು, ಬಿಸಾಡಿದವರಿಂದಲೇ ಸ್ಥಳವನ್ನು ಸ್ವಚ್ಛಗೊಳಿಸಿ ಅವರಿಗೆ ನೋಟೀಸ್ ನೀಡಿದೆ.
ನಗರದ ಬೋಂದೇಲ್ ಪಚ್ಚನಾಡಿ ರಸ್ತೆ ಬದಿಯ ಪೊದೆಯ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಔಷಧಿಗಳನ್ನು, ಮಾತ್ರೆಗಳನ್ನು ಪ್ಯಾಕ್ನಲ್ಲಿಯೇ ಹಾಕಿ ಎಸೆದು ಹೋಗಿರುವ ಬಗ್ಗೆ ಸಾರ್ವಜನಿಕರೊಬ್ಬರು ಔಷಧ ನಿಯಂತ್ರಣ ಇಲಾಖೆಗೆ ಸೋಮವಾರ ಬೆಳಿಗ್ಗೆ ಮಾಹಿತಿ ನೀಡಿದ್ದು, ತಕ್ಷಣವೇ ಔಷಧ ನಿಯಂತ್ರಣ ಇಲಾಖೆಯ ಸಹಾಯಕ ನಿಯಂತ್ರಕ ಶಂಕರ್ ನಾಯಕ್, ಔಷಧಿ ಪರಿವೀಕ್ಷಕ ಧನಂಜಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅದು ಅವಧಿ ಮೀರಿದ ಔಷಧಿಯಾಗಿದ್ದು, ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ ಎಸೆದು ಹೋಗಲಾಗಿತ್ತು. ಔಷಧಿಯ ಮೇಲಿದ್ದ ಬ್ಯಾಚ್ ಸಂಖ್ಯೆ ಆಧರಿಸಿ ಪರಿಶೀಲಿಸಿದಾಗ ಮಂಗಳೂರಿನ ಎಸ್.ಪಿ.ಫಾರ್ಮಾ ಎಂಬ ಔಷಧಿ ವಿತರಕ ಸಂಸ್ಥೆಗೆ ಸೇರಿದ ಔಷಧಿ ಎಂದು ಕಂಡು ಬಂತು. ಈ ಹಿನ್ನೆಲೆಯಲ್ಲಿ ತಕ್ಷಣವೇ ವಿತರಕರನ್ನು ಸ್ಥಳಕ್ಕೆ ಕರೆಸಿ, ಅವರಿಂದಲೇ ಸ್ಥಳದಿಂದ ಔಷಧಿಗಳನ್ನು ತೆಗೆಸಿ ಸ್ವಚ್ಛಪಡಿಸಿದ್ದಲ್ಲದೇ, ಅದನ್ನು ಇಲಾಖೆ ವಶಪಡಿಸಿದೆ.
ಅಲ್ಲದೇ, ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ, ಸಾರ್ವಜನಿಕ ರಸ್ತೆಯಲ್ಲಿ ಎಸೆದು ಹೋದ ಬಗ್ಗೆ ಸಂಸ್ಥೆಗೆ ನೋಟೀಸ್ ಜಾರಿ ಮಾಡಲಾಗುವುದು ಎಂದು ಔಷಧ ನಿಯಂತ್ರಕರು ತಿಳಿಸಿದ್ದಾರೆ. ಸಾರ್ವಜನಿಕ ಪ್ರದೇಶಗಳಲ್ಲಿ ಈ ರೀತಿ ಔಷಧಿಗಳನ್ನು ಎಸೆಯುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಇಂತಹ ಪ್ರಕರಣ ಕಂಡುಬಂದರೆ ಇಲಾಖೆಯ ಗಮನಕ್ಕೆ ತರಲು ಅವರು ತಿಳಿಸಿದ್ದಾರೆ.