ರಾಜ್ಯ ಸರಕಾರವನ್ನು ಜಿಹಾದಿ, ಮತೀಯವಾದಿಗಳು ನಡೆಸುತ್ತಿದ್ದಾರೆ – ಹರಿಪ್ರಕಾಶ್ ಕೋಣೆಮನೆ
ಉಡುಪಿ: ಸಿಎಂ ಸಿದ್ದರಾಮಯ್ಯ ಬರೇ ಮುಖವಾಡವಷ್ಟೇ ಆದರೆ ಸರಕಾರವನ್ನು ಜಿಹಾದಿ, ಮತೀಯವಾದಿಗಳು ನಡೆಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ವಕ್ತಾರರಾದ ಹರಿಪ್ರಕಾಶ್ ಕೋಣೆಮನೆ ವಾಗ್ಧಾಳಿ ನಡೆಸಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಗಣೇಶೋತ್ಸವ ಮೆರವಣಿಗೆಯ ವೇಳೆ ಕಲ್ಲುತೂರಾಟ, ಪೆಟ್ರೋಲ್ ಬಾಂಬ್ ಎಸೆದು ಹಿಂದೂಗಳ ಅಂಗಡಿಗಳನ್ನು ಸುಟ್ಟು ಹಾಕಲಾಗಿದೆ. ಗೃಹ ಸಚಿವರು ಈ ಘಟನೆಯನ್ನು ಅಕಸ್ಮಿಕ ಎಂದು ಹೇಳಿದ್ದಾರೆ ಇದು ಅತ್ಯಂತ ಹೇಡಿತನ ಹಾಗೂ ನಾಚಿಕೆಗೇಡಿನ ಹೇಳಿಕೆ. ಮೆರವಣಿಗೆಯ ವೇಳೆ ಒಬ್ಬನೇ ಪೊಲೀಸ್ ಪೇದೆ ಇರಲಿಲ್ಲ. ಕಳೆದ ವರ್ಷ ಇದೇ ಪ್ರದೇಶದಲ್ಲಿ ಘಟನೆ ನಡೆದರೂ ಸಹ ಬಂದೋಬಸ್ತ್ ಮಾಡಿರಲಿಲ್ಲ, ಯಾವ ಸ್ಥಳದಿಂದ ಮೆರವಣಿಗೆ ಹೋಗಬೇಕೆಂದು ಪೊಲೀಸರ ಬದಲಾಗಿ ಜಿಹಾದಿಗಳು ನಿರ್ದರಿಸುವ ಮಟ್ಟಿಗೆ ಈ ಸರಕಾರ ಅಧೋಗತಿ ತಲುಪಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಪಾಕಿಸ್ತಾನ ಧ್ವಜ ಹಾರುತ್ತದೆ ಎಸ್ಡಿಪಿಐ ಪಿಎಫ್ ಐ ಕೇಸ್ ವಾಪಸ್ ಪಡೆಯುತ್ತಾರೆ. ಸಿಎಂ ಸಿದ್ದರಾಮಯ್ಯ, ಡಿಕೆಶಿ ಮುಖವಾಡ ಮಾತ್ರ, ಸರಕಾರವನ್ನು ಜಿಹಾದಿಗಳು ಹಾಗೂ ಮತೀಯವಾದಿಗಳು ನಡೆಸುತ್ತಿದ್ದಾರೆ. ಅಂಗಡಿ ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ವಿದೇಶದಲ್ಲಿ ರಾಹುಲ್ ಗಾಂಧಿ ಭಾರತದಲ್ಲಿ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಹೇಳಿದ್ದಾರೆ. ನೆಹರೂ- ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನ ಮಾನಸಿಕತೆ ಇವತ್ತು ಎಲ್ಲರ ಮುಂದೆ ಬೆತ್ತಲಾಗಿದೆ. ದೇಶದ ಒಳಗೆ ಮತ್ತು ವಿದೇಶಿ ವೇದಿಕೆಗಳಲ್ಲಿ ಮಾನಹರಾಜು ಹಾಕುತ್ತಿದ್ದು, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಸಂವಿಧಾನದ ಸಂರಕ್ಷಕರು ಎಂದು ಬೊಬ್ಬೆ ಹಾಕುವವರೇ ದೇಶದ ಮಾನ ಕಳೆಯುವ ಕೆಲಸ ನಿರಂತರ ಮಾಡುತ್ತಿದ್ದಾರೆ ಇದು ಕಳವಳಕಾರಿ ಸಂಗತಿಯಾಗಿದೆ ಎಂದರು.
ಸೂಕ್ತ ಸಮಯ ನೋಡಿ ಭಾರತದಲ್ಲಿ ಮೀಸಲಾತಿ ಸ್ಥಗಿತ ಮಾಡುವುದಾಗಿ ರಾಹುಲ್ ಗಾಂಧಿ ಹೇಳೀದ್ದು ಅಂದರೆ ಅಧಿಕಾರಕ್ಕೆ ಬಂದಾಗ ಮೀಸಲಾತಿ ರದ್ದು ಮಾಡುತ್ತಾರೆ ಎಂದಲ್ಲವೇ?ರಾಹುಲ್ ಗಾಂಧಿಯ ಈ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯ ಈ ಹೇಳಿಕೆ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಜಾಗೃತಿ ಕಾರ್ಯ ನಡೆಯಲಿದೆ ಎಂದರು.
ಜಮ್ಮು-ಕಾಶ್ಮೀರದಲ್ಲಿ ಮೊದಲ ಬಾರಿ ಸ್ವತಂತ್ರ ಚುನಾವಣೆ ನಡೆಯುತ್ತಿದ್ದು, ಆರ್ಟಿಕಲ್ 370 ತೆಗೆದ ನಂತರ ಮೊದಲ ಬಾರಿ ಬಹುಮುಕ್ತ ವಾತಾವರಣದಲ್ಲಿ ಚುನಾವಣೆ ನಡೆಯುತ್ತಿದೆ. ಕಾಶ್ಮೀರದಲ್ಲಿ ಹಿಂದೆ ಪರಿಸ್ಥಿತಿ ಹೇಗಿತ್ತು ಎಂದು ಮಾಜಿ ಗೃಹ ಸಚಿವ ಶಿಂದೆಯವರೇ ಹೇಳಿದ್ದಾರೆ.ಕಾಂಗ್ರೆಸ್ ಪ್ರತ್ಯೇಕವಾದಿಗಳ ಜೊತೆ ಕೈಜೋಡಿಸಿದ್ದು, ಆರ್ಟಿಕಲ್ 370 ಮತ್ತೆ ಜಾರಿಗೆ ತರುವುದಾಗಿ ಹೇಳಿದ್ದಾರೆ ಹಾಗಾದರೆ ದೇಶದ ಅಖಂಡತೆಗೆ ಕಾಂಗ್ರೆಸ್ನ ಕೊಡುಗೆ ಏನು ಎಂದು ಪ್ರಶ್ನಿಸಬೇಕಾಗುತ್ತದೆ? ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ರತನ್ ರಮೇಶ್ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ದ.ಕ. ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಉಡುಪಿ ಜಿಲ್ಲಾ ವಕ್ತಾರರಾದ ಗೀತಾಂಜಲಿ ಎಮ್. ಸುವರ್ಣ, ಸತೀಶ್ ಶೆಟ್ಟಿ ಮುಟ್ಲುಪಾಡಿ, ವಿಜಯಕುಮಾರ್ ಉದ್ಯಾವರ, ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಗಿರೀಶ್ ಎಮ್. ಅಂಚನ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.