ರಾಜ್ಯ ಸರ್ಕಾರದಿಂದ ಜನತೆಗೆ ಗ್ಯಾರಂಟಿಯೇ ಇಲ್ಲದ ಗ್ಯಾರಂಟಿಗಳಿಗೂ ಅನುಷ್ಠಾನ ಸಮಿತಿಯ ಆರ್ಥಿಕ ಹೊರೆ
ಬಿಪಿಎಲ್ ಕಾರ್ಡ್ ಅನ್ನಭಾಗ್ಯದ ಅಕ್ಕಿಯೂ ಇಲ್ಲ, ಹಣವೂ ಇಲ್ಲ : ದಿನೇಶ್ ಅಮೀನ್ ವ್ಯಂಗ್ಯ
ಉಡುಪಿ: ಗ್ಯಾರಂಟಿ ಭರವಸೆಗಳ ಮೂಲಕ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರಕಾರ ನೀಡಿದ ಗ್ಯಾರಂಟಿಗಳಿಗೂ ಗ್ಯಾರಂಟಿ ಇಲ್ಲದಂತಾಗಿದ್ದು, ಇದೀಗ ತನ್ನ ಪಕ್ಷದ ಕಾರ್ಯಕರ್ತರಿಗೆ ರಾಜಕೀಯ ಪುನರ್ವಸತಿಗಾಗಿ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಿ ಗೌರವಧನ ನೀಡಿ ರಾಜ್ಯದ ಜನತೆಯನ್ನು ಅಣಕಿಸಲು ಹೊರಟಿದೆ ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್ ವ್ಯಂಗ್ಯವಾಡಿದ್ದಾರೆ.
ಉಡುಪಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಜಿಲ್ಲಾ ಉಸ್ತುವಾರಿ ಸಚಿವರ ರೀತಿಯಲ್ಲಿ ನಿರಂತರ ಪತ್ರಿಕಾ ಹೇಳಿಕೆ ನೀಡುತ್ತಾ ತಮ್ಮ ರಾಜ್ಯ ಸರ್ಕಾರದ ಯೋಜನೆಗಳ ವೈಫಲ್ಯವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ.
ಕಳೆದ ಮೂರು ತಿಂಗಳಿಂದ ಬಿಪಿಎಲ್ ಕಾರ್ಡ್ ದಾರರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿ ಹೊರತು ರಾಜ್ಯದ ಅನ್ನಭಾಗ್ಯ ಯೋಜನೆಯ ಅಕ್ಕಿಯೂ ಇಲ್ಲ, ಹಣವೂ ಸಿಗುತ್ತಿಲ್ಲ, ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ಸರಕಾರಿ ಬಸ್ ಸೇವೆ ಅಗತ್ಯವಿದ್ದು, ನಮ್ಮ ಜಿಲ್ಲೆಗೆ ಹೆಚ್ಚುವರಿ ಬಸ್ ಬೇಡಿಕೆಗೆ ಸಾರಿಗೆ ಇಲಾಖೆ ಸ್ಪಂದನೆ ನೀಡುತ್ತಿಲ್ಲ, ಗೃಹ ಬಳಕೆಗೆ ಉಚಿತ ವಿದ್ಯುತ್ ನೆಪದಲ್ಲಿ ವಾಣಿಜ್ಯ ಬಳಕೆಯ ಗ್ರಾಹಕರಿಗೆ ಬೆಲೆ ಏರಿಕೆಯ ಬರೆ ಬಿದ್ದಿದೆ, ಗೃಹ ಲಕ್ಷ್ಮೀ ಯೋಜನೆಗಾಗಿ ಸರಕಾರಿ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಯುವ ನಿಧಿ ಯೋಜನೆಯಂತೂ ನಿರುದ್ಯೋಗಿಗಳಿಗೆ ಗಗನ ಕುಸುಮವಾಗಿದ್ದು ಈ ಸಮಸ್ಯೆಗಳ ಬಗ್ಗೆ ರಾಜ್ಯ ಸರಕಾರದ ಮೂಲಕ ಪರಿಹಾರ ಕಲ್ಪಿಸಿದರೆ ಮಾತ್ರ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಸ್ತಿತ್ವಕ್ಕೆ ಮಾನ್ಯತೆ ಸಿಗಬಹುದು ಇಲ್ಲವಾದರೆ ಇದು ಕೂಡಾ ರಾಜ್ಯದ ಜನತೆಯ ಪಾಲಿಗೆ ಆರ್ಥಿಕ ಹೊರೆಯಾಗಿ ಊಟಕ್ಕಿಲ್ಲದ ಉಪ್ಪಿನಕಾಯಿ ಯಾಗಲಿದೆ.
ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಯಾವುದೇ ಅನುದಾನ ನೀಡದೇ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಬ್ರೇಕ್ ಹಾಕಿದ್ದು, ಅಂಗನವಾಡಿ ಕಾರ್ಯಕರ್ತೆಯರ ಗೌರವಧನ, ಅತಿಥಿ ಶಿಕ್ಷಕರ ವೇತನ ಬಾಕಿ, ಶಾಲಾ ಕಾಲೇಜುಗಳ ವಿದ್ಯುತ್ ಬಿಲ್ ಪಾವತಿಸದೆ ಸಂಪರ್ಕ ಕಡಿತಗೊಳಿಸುವ ಸನ್ನಿವೇಶ ರಾಜ್ಯದಲ್ಲಿ ನಿರ್ಮಾಣವಾಗಿದೆ, ಇಂತಹ ಸಂದರ್ಭದಲ್ಲಿಯೂ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರಿಗಾಗಿ ಅನುಷ್ಠಾನ ಸಮಿತಿಯ ಅನಿವಾರ್ಯತೆಯ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.