ರಾಜ್ಯದ ಕಾಂಗ್ರೆಸ್ ಸರಕಾರ ಬಸವಣ್ಣನ ತತ್ವದಂತೆ ನುಡಿದಂತೆ ನಡೆದಿದೆ; ಪಡುಬಿದ್ರೆಯಲ್ಲಿ ರಾಹುಲ್ ಗಾಂಧಿ
ಉಡುಪಿ: ನುಡಿದಂತೆ ನಡೆ ಎಂದು ಬಸವಣ್ಣ ಹೇಳಿದ್ದರು, ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡ ನುಡಿದಂತೆಯೇ ನಡೆದಿದೆ. ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಮಾತಿನಂತೆ ನಡೆದುಕೊಂಡಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿ, ಕಾರ್ಯಕರ್ತರದಲ್ಲಿ ಉತ್ಸಾಹ ತುಂಬುವ ಪ್ರಯತ್ನ ಮಾಡಿದರು.
ಜನಾಶೀರ್ವಾದ ಯಾತ್ರೆಯ ಅಂಗವಾಗಿ ಪಡುಬಿದ್ರೆಯಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಬಸವಣ್ಣ ಮತ್ತು ನಾರಾಯಣ ಗುರುಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಮಾಡುವುದೆಲ್ಲ ಬಸವಣ್ಣ ಮತ್ತು ನಾರಾಯಣ ಗುರುಗಳ ಸಿದ್ಧಾಂತಕ್ಕೆ ವಿರುದ್ಧವಾದದ್ದು.
ಕಾಂಗ್ರೆಸ್ ಸರ್ಕಾರ ಬ್ಯಾಂಕುಗಳನ್ನು ಜನರ ಮನೆ ಬಾಗಿಲಿಗೆ ತಂದಿತು. ಹಳ್ಳಿಹಳ್ಳಿಗಳಲ್ಲಿ ಬ್ಯಾಂಕ್ ಶಾಖೆಗಳು ತೆರೆದವು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಂಡವಾಳಶಾಹಿಗಳು ಬ್ಯಾಂಕ್ಗಳನ್ನು ಲೂಟಿ ಮಾಡಿ ಪಲಾಯನ ಮಾಡುತ್ತಿದ್ದಾರೆ. ವಿದೇಶದಲ್ಲಿರುವ ಕಪ್ಪುಹಣ ತಂದು ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ರೂ. ಹಾಕುತ್ತೇನೆ ಎಂದಿದ್ದರು, 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು, ಆ ಹಣ ಎಲ್ಲಿ ? ಉದ್ಯೋಗ ಎಲ್ಲಿ? ಎಂದು ಪ್ರಶ್ನಿಸಿ, ಅವರು ಹೇಳಿದ್ದು ಸುಳ್ಳೆಂದರು.
ರೈತರ ಸಾಲ ಮನ್ನ ಮಾಡಿ ಎಂದರೆ ಆ ವಿಷಯದ ಬಗ್ಗೆ ನಮಗೆ ಗೊತ್ತಿಲ್ಲ ಎಂದು ವಿತ್ತ ಸಚಿವರು ಹೇಳುತ್ತಾರೆ. ಆದರೆ ಕರ್ನಾಟಕ ರಾಜ್ಯ ರೈತರ 8 ಸಾವಿರ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದೆ ಎಂದು ರಾಹುಲ್ ಹೇಳಿದರು.
ಬಿಜೆಪಿ ಎಲ್ಲೆಲ್ಲ ಹೋಗುತ್ತದೊ ಅಲ್ಲಿ ಅದು ಜನರ ನಡುವೆ ಹಗೆತನ ಬೆಳೆಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಬಡ ಕುಟುಂಬಗಳಲ್ಲಿನ ಪ್ರತಿ ವ್ಯಕ್ತಿಗೂ 7 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ.
ಒಂದು ಕೋಟಿ ಕುಟುಂಬಗಳಿಗೆ ಇದರಿಂದ ಅನುಕೂಲವಾಗಿದೆ. ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಬಿಜೆಪಿ ಸರ್ಕಾರಕ್ಕಿಂತ ಮೂರು ಪಟ್ಟು ಹೆಚ್ಚು ಹಣವನ್ನು ಸಿದ್ದರಾಮಯ್ಯ ಸರ್ಕಾರ ವ್ಯಯಿಸಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಭೇದ ಭಾವದ ಮೂಲಕ ಜನರನ್ನು ಬೇರೆ ಮಾಡುವುದಿಲ್ಲ. ದ್ವೇಷ, ಕೋಪವನ್ನು ಜನರ ಮಧ್ಯೆ ಹರಡುವುದಿಲ್ಲ. ಇದು ನಮಗೂ ಮತ್ತು ಬಿಜೆಪಿಗು ಇರುವ ವ್ಯತ್ಯಾಸ ಎಂದು ರಾಹುಲ್ ಗಾಂಧಿ ಹೇಳಿದರು. .
ಕಾಂಗ್ರೆಸ್ ಪಕ್ಷ ಕಳೆದ 70 ವರ್ಷಗಳಲ್ಲಿ ಏನು ಮಾಡಿಲ್ಲ ಎಂದು ಹೇಳುವ ಮೂಲಕ ಈ ದೇಶದ ಜನತೆಗೆ ಅವಮಾನ ಮಾಡುತ್ತಿದೆ. ಈ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷ ಮತ್ತು ಬಡ ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಮತ್ತು ಎಲ್ಲ ಜನರ ಅವಿರತ ಶ್ರಮದಿಂದ ಭಾರತ ವಿಶ್ವದ ದೊಡ್ಡ ರಾಷ್ಟ್ರಗಳ ಎದುರು ತಲೆ ಎತ್ತಿ ನಿಂತಿದೆ.
ಒಬ್ಬ ವ್ಯಕ್ತಿಯಿಂದ ದೇಶದ ಪ್ರಗತಿ ಸಾಧ್ಯವಿಲ್ಲ. ದೇಶದ 125 ಕೋಟಿ ಜನರೂ ಸಹ ಇದಕ್ಕೆ ಸಾಥ್ ನೀಡಬೇಕಾಗಿದೆ. ನರೇಂದ್ರ ಮೋದಿ ಈ ದೇಶದ ಜನರ ಬೆವರಿನ ದುಡಿಮೆಗೆ ಅವಮಾನ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಮತ ಧರ್ಮಗಳ ನಡುವೆ ಬೆಂಕಿ ಹಾಕುವ ಮೂಲಕ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಯತ್ನಿಸುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್ಎಸ್ಎಸ್) ಹಾಗೂ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕರಾವಳಿ ಪ್ರದೇಶವನ್ನು ಕೋಮುವಾದದ ಪ್ರಯೋಗ ಶಾಲೆ ಮಾಡಲು ಹೊರಡಿದೆ ಎಂದು ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಯೂಟರ್ನ್ ಸರಕಾರ ಎಂದು ಗುಡುಗಿದ ಸಿದ್ದರಾಮಯ್ಯನವರು, ಪ್ರಧಾನಿ ಮೋದಿ ಸುಳ್ಳಿನ ಸರದಾರ ಎಂದು ವರ್ಣಿಸಿದರು.
ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಮಾತನಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ರಾಷ್ಟ್ರೀಯ ಮಟ್ಟದಲ್ಲಿ ರಾಹುಲ್ ಗಾಂಧಿಯವರ ಶಕ್ತಿ ಹೆಚ್ಚಿದ್ದು ರಾಜಸ್ಥಾನ ಉತ್ತರ ಪ್ರದೇಶ ಇನ್ನಿತರ ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಸೋಲಿನತ್ತ ಸಾಗಿದೆ. ರಾಹುಲ್ ಭೇಟಿ ಕರಾವಳಿಗೆ ಹೆಚ್ಚಿನ ಶಕ್ತಿ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್, ಲೋಕಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್ ಆರ್ ಪಾಟೀಲ್, ಕಾಂಗ್ರೆಸ್ ನಾಯಕರಾದ ಡಿ ಕೆ ಶಿವಕುಮಾರ್, ವೀರಪ್ಪ ಮೊಯ್ಲಿ, ಕೆ ಎಚ್ ಮುನಿಯಪ್ಪ, ಯು ಟಿ ಖಾದರ್ ಹಾಗೂ ಇತರರು ಉಪಸ್ಥಿತರಿದ್ದರು.