ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡಲು ಬಿಡೇವು-ಸಿದ್ಧರಾಮಯ್ಯ

Spread the love

ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡಲು ಬಿಡೇವು-ಸಿದ್ಧರಾಮಯ್ಯ

ಭಟ್ಕಳ: ರಾಜ್ಯದಲ್ಲಿ ಪ್ರಚಾರಕ್ಕೆ ಪ್ರಧಾನಿ ಮೋದಿ ಅಥವಾ ಬಿಜೆಪಿಯ ರಾಜ್ಯಾಧ್ಯಕ್ಷ ಅಮಿತ್ ಷಾ ಬರಲಿ ನಮ್ಮ ಅಭ್ಯಂತರವಿಲ್ಲ. ಆದರೆ ರಾಜ್ಯದ ಕೋಮು ಸಾಮರಸ್ಯ ಕದಡುವ ಕೆಲಸಮಾತ್ರವಾಗಬಾರದು ಎಂದು ಮುಖ್ಯಮಂತ್ರಿ ಎಸ್‌.ಸಿದ್ದರಾಮಯ್ಯ ಹೇಳಿದರು.

ಅವರು ಬುಧವಾರ ತಾಲೂಕಿನ ಅಂಜುಮನ್ ಮೈದಾನದಲ್ಲಿ ಅಮಿತ್ ಶಾ ವಿರುದ್ಧ ದೂರಿಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಅಮಿತ್ ಶಾ ಕರ್ನಾಟಕ ಆಗಮನಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಇಲ್ಲಿ ಗಲಭೆ ಸೃಷ್ಟಿಸುವ ಕೆಲಸವನ್ನು ಯಾರೂ ಮಾಡಬಾರದು. ಅದಕ್ಕೆ ನಾವು ಅವಕಾಶವನ್ನು ಕೊಡುವುದಿಲ್ಲ ಎಂದರು. ಇವಿಎಮ್ ಮತಯಂತ್ರದ ಸಂಬಂಧ ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಮತದಾನವನ್ನು ಬಹಿಷ್ಕರಿಸುವ ಪ್ರಸ್ತಾಪದ ಕುರಿತು ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ನಾವು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದರು.

ಮುಜರಾಯಿ ಇಲಾಖೆಯ ವತಿಯಿಂದ ದಲಿತ ಅರ್ಚಕ ನೇಮಕದ ಕುರಿತು ಇಲ್ಲಿಯವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಆದರೆ ದಲಿತರು ಅರ್ಚಕರಾಗಬಾರದು ಎಂದೇನೂ ಇಲ್ಲ. ನಾರಾಯಣ ಗುರು ಅವರು ಹೇಳಿದ ದಾರಿಯಲ್ಲಿ ನಾವು ಸಾಗುತ್ತಾ ಇದ್ದೇವೆ. ಯಾರೂ ಕೂಡಾ ದೇವಸ್ಥಾನ ನಿರ್ಮಿಸಿಕೊಂಡು ಅವರೇ ಅರ್ಚಕರಾಗಬಹುದೆಂದು ಹೇಳಿದರು.

ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆ ಸಫಲವಾಗದ 452 ಅಂಗನವಾಡಿಗಳನ್ನು ಗುರುತಿಸಿದ್ದೇವೆ. ಸಾಧಕ, ಬಾಧಕಗಳನ್ನು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ಸೂಚಿಸಲಾಗಿದೆ.

ರಾಜಕೀಯ ಕಾರ್ಯದರ್ಶಿಗಳ ನೇಮಕಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ದೇವೇಗೌಡರ ಟೀಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಇವೆಲ್ಲಾ ರಾಜಕೀಯ ನೇಮಕ. ದೆಹಲಿಯಂಥ ಸಣ್ಣ ರಾಜ್ಯದಲ್ಲೂ ಕೂಡಾ ರಾಜಕೀಯ ಕಾರ್ಯದರ್ಶಿಗಳು ಇದ್ದಾರೆ ಎಂದರು.

ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕ ಮಂಕಾಳು ವೈದ್ಯ ಉಪಸ್ಥಿತರಿದ್ದರು.


Spread the love
1 Comment
Inline Feedbacks
View all comments
7 years ago

most necessary job of the day sir.