ರಾಮಮಂದಿರಕ್ಕೆ ಶಿಲಾನ್ಯಾಸ ; ಪ್ರತೀ ಮನೆ ಮನಗಳಲ್ಲಿ ಶ್ರೀರಾಮ – ಹನುಮರ ಭಕ್ತಿ ನ್ಯಾಸವಾಗಲಿ – ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
ಉಡುಪಿ: ಜಗತ್ತಿನ ಕೋಟ್ಯಂತರ ಸನಾತನ ಧರ್ಮೀಯರು ಮತ್ತು ಆಸ್ತಿಕ ಜನರ ಬಹುವರ್ಷಗಳ ಶ್ರದ್ಧಾಪೂರ್ವಕ ಕನಸು ಮತ್ತು ಶ್ರಮದ ಫಲವಾಗಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕಾರ್ಯಕ್ಕೆ ಮುಹೂರ್ತ ನಿಗದಿಯಾಗಿದೆ . ಆಗಸ್ಟ್ 5 ರಂದು ಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಈ ಧರ್ಮಕಾರ್ಯಕ್ಕೆ ಶಿಲಾನ್ಯಾ ನೆರವೇರಿಸುವವರಿದ್ದಾರೆ. ಈ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ಧರ್ಮಶ್ರದ್ಧೆಯುಳ್ಳ ಮನೆ ಮನಸ್ಸುಗಳಲ್ಲಿ ಶ್ರೀ ರಾಮ- ಶ್ರೀ ಹನುಮರ ಭಕ್ತಿಗಳು ನ್ಯಾಸಗೊಳ್ಳಬೇಕು ಮತ್ತು ಇದು ಅಯೋಧ್ಯೆಯ ಭವ್ಯ ಮಂದಿರ ನಿರ್ಮಾಣಗೊಂಡು ಶ್ರೀ ಸೀತಾ-ರಾಮರ ಪ್ರತಿಷ್ಢೆಯ ಪರ್ಯಂತ ನಿತ್ಯವೂ ವಿಶೇಷ ಜಾಗೃತವಾಗಿರಬೇಕು ಎಂದು ಅಯೋಧ್ಯೆ ಶ್ರೀ ರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ (ರಿ.) ಇದರ ವಿಶ್ವಸ್ಥಮಂಡಳಿ ಸದಸ್ಯರಾದ ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ .
ಈ ಕುರಿತು ನೀಲಾವರದಲ್ಲಿ ಶನಿವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆಗಸ್ಟ್ 5 ನೇ ದಿನಾಂಕ ಈ ದೇಶದ ಇತಿಹಾಸದಲ್ಲಿ ಸ್ಮರಣೀಯ ದಿನವಾಗಿ ದಾಖಲಾಗಲಿದೆ . ಆದ್ದರಿಂದ ಅಯೋಧ್ಯೆಯಲ್ಲಿ ಅಂದು ನಡೆಯುವ ಶಿಲಾನ್ಯಾಸ ಸಮಾರಂಭವನ್ನು ಸಾಧ್ಯವಾದಷ್ಟು ಪ್ರತಿಯೊಬ್ಬರೂ ನೇರಪ್ರಸಾರದ ಮೂಲಕ ಕಣ್ತುಂಬಿಕೊಳ್ಳಬೇಕು .
ಮನೆಗಳಲ್ಲಿ ಟಿವಿ ಇಲ್ಲದವರಿಗೆ ಬೇಕಾಗಿ ಪ್ರತಿಯೊಂದು ಹಳ್ಳಿ ನಗರಗಳಲ್ಲಿ ಸಾರ್ವಜನಿಕವಾಗಿ ಪ್ರಮುಖ ಸ್ಥಳಗಳಲ್ಲಿ ಬೃಹತ್ ಪರದೆಯನ್ನು ಅಳವಡಿಸಿ ವೀಕ್ಷಿಸಲು ವ್ಯವಸ್ಥೆಮಾಡಬೇಕು . ಆದರೆ ಈ ಸಂದರ್ಭದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು , ಮುಖಕ್ಕೆ ಮಾಸ್ಕ್ ಧರಿಸುವುದನ್ನು ಮರೆಯಬಾರದು ಎಂದರು .
ನಮ್ಮಲ್ಲಿ ಪ್ರಾಚೀನ ದೇವಳಗಳ ಜೀರ್ಣೋದ್ಧಾರ ಕಾರ್ಯಗಳು ನಡೆಯುವ ಸಂದರ್ಭದಲ್ಲಿ ಆ ಕಾರ್ಯದ ಆರಂಭದಿಂದ ಪೂರ್ಣವಾಗುವ ಪರ್ಯಂತ ನಿತ್ಯ ಭಜನೆ ಜಪ ಇತ್ಯಾದಿಗಳನ್ನು ವಿಶೇಷವಾಗಿ ಆಚರಿಸುವ ಸಂಪ್ರದಾಯವಿದೆ . ಹಮ್ಮಿಕೊಂಡ ಕಾರ್ಯದ ಯಶಸ್ಸು ಮತ್ತು ಆ ಸಮಯದಲ್ಲಿ ನಮ್ಮೆಲ್ಲರಿಗೂ ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವ ಚೈತನ್ಯ ಲಭಿಸಲಿ ಎಂಬ ಆಶಯ ಇದರಲ್ಲಿದೆ . ಇದೀಗ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮಂದಿರ ಕೇವಲ ಅಯೋಧ್ಯೆಗೆ ಸೀಮಿತವಾದುದಲ್ಲ ; ಅದು ಭಾರತ ಮಂದಿರ ; ರಾಷ್ಟ್ರಮಂದಿರ ನಮ್ಮೆಲ್ಲರ ಆರಾಧ್ಯಮೂರ್ತಿಯ ಮಂದಿರವನ್ನು ನಿರ್ಮಿಸುವ ಯೋಗ ನಮಗೆಲ್ಲ ಒದಗಿರುವುದು ದೊಡ್ಡ ಪುಣ್ಯವೇ ಸರಿ . ಆದ್ದರಿಂದ ಈ ಮಹತ್ಕಾರ್ಯ ನಿರ್ವಿಘ್ನವಾಗಿ ನಡೆಯಬೇಕು . ಅದನ್ನು ನಿರ್ವಹಿಸುವ ಶಕ್ತಿ ಚೈತನ್ಯ ಸಮಸ್ತ ಭಾರತೀಯರಿಗೆ ಬೇಕೇ ಬೇಕು . ಅದಕ್ಕಾಗಿ ಆಗಸ್ಟ್ 5 ರಿಂದ ಮಂದಿರ ನಿರ್ಮಾಣಕಾರ್ಯ ಪೂರ್ಣವಾಗುವವರೆಗೂ ದೇಶದ ನಮ್ಮೆಲ್ಲರ ಮನೆ ಮನೆಗಳಲ್ಲಿ ಮಂದಿರಗಳಲ್ಲಿ ಶ್ರೀ ರಾಮ ಶ್ರೀ ಹನುಮರ ವಿಶೇಷ ಸ್ಮರಣೆ ನಡೆಯಬೇಕು . ನಿತ್ಯ ಪ್ರಾರ್ಥನೆ ಭಜನೆ ಜಪ ಇತ್ಯಾದಿ ಗಳನ್ನು ನಡೆಸಬೇಕು . ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿಯೂ ಇವುಗಳನ್ನು ನಡೆಸಬೇಕು .
ಆಗಸ್ಟ್ 5 ರಂದು ಪ್ರತೀ ಮನೆ ಮಂದಿರ ದೇವಸ್ಥಾನ ಕಚೇರಿಗಳಲ್ಲಿ ಧಾರ್ಮಿಕ ವಾತಾವರಣ ಸೃಷ್ಟಿಸಬೇಕು. ತಳಿರು ತೋರಣ , ದ್ವಾರಗಳಿಗೆ ಹೂವಿನ ಅಲಂಕಾರ , ಭಗಧ್ವಾಜಗಳನ್ನು ಅಳವಡಿಸುವುದು . ಅಂದು ಬೆಳಿಗ್ಗೆ 11. 30 ರಮದ 12.30 ರ ವರೆಗೆ ಕಾರ್ಯಕ್ರಮನಡೆಯುವುದರಿಂದ ಆ ಹೊತ್ತಿನಲ್ಲಿ ಮನೆ ಕಚೇರಿಗಳಲ್ಲಿ ಶ್ರೀರಾಮನಿಗಾಗಿ ತೈಲ ದೀಪಗಳನ್ನು ಬೆಳಗಬೇಕು . ಪ್ರತಿಯೊಬ್ಬರೂ ಅಂದಿನಿಂದ ಪ್ರತಿನಿತ್ಯ ಕನಿಷ್ಠ ಹತ್ತು ಬಾರಿಯಾದರೂ ” ಶ್ರೀರಾಮಜಯರಾಮಜಯ ಜಯ ರಾಮ ” ಎಂದು ಜಪಿಸಬೇಕು . ಮಠ ಮಂದಿರ ದೇವಳಗಳಲ್ಲಿ ವಿಶೇಷ ಪೂಜೆ ನೆರವೇರಿಸಬೇಕು . ಸಮಸ್ತ ಲೋಕದ ಒಳಿತಿಗಾಗಿ ಪ್ರಾರ್ಥಸಬೇಕು ಎಂದು ಶ್ರೀಪಾದರು ಕರೆ ನೀಡಿದ್ದಾರೆ .
ಕರ್ನಾಟಕ -ಉಡುಪಿಗೂ ಶ್ರೀರಾಮ ಜನ್ಮಭೂಮಿಗೂ ಅಲ್ಲಿನ ಆಂದೋಲನಕ್ಕೂ ಉಡುಪಿಗೂ ವಿಶೇಷ ನಂಟು. ಕರ್ನಾಟಕ ಶ್ರೀ ರಾಮ ಭಕ್ತ ಹನುಮನ ಅವತಾರ ಭೂಮಿ ಅದೇ ರೀತಿ ಉಡುಪಿಯವರಾದ ನಮ್ಮಗುರುಗಳಾದ ಶ್ರೀ ವಿಶ್ವೇಶತೀರ್ಥಶ್ರೀಪಾದರು ಈ ಆಂದೋಲನಕ್ಕೆ ದೇಶದ ಸಾಧುಸಂತರಿಗೆ ಕೋಟ್ಯಂತರ ರಾಮಭಕ್ತರಿಗೆ ಬಹಳ ಮಾರ್ಗದರ್ಶನ ಮಾಡಿದ್ದಾರೆ . ಉಡುಪಿಯ ಅನೇಕ ಮಠಾಧೀಶರೂ ಈ ಕಾರ್ಯದಲ್ಲಿ ಶ್ರಮಿಸಿದ್ದಾರೆ . ಆದ್ದರಿಂದ ಆಗಸ್ಟ್ 5 ರಿಂದ ಮಂದಿರ ನಿರ್ಮಾಣ ಕಾರ್ಯ ಪೂರ್ಣವಾಗುವವರೆಗೂ ಉಡುಪಿಯೂ ಸೇರಿದಂತೆ ಇಡೀ ರಾಜ್ಯದಲ್ಲಿ ನಿತ್ಯ ನಿರಂತರ ರಾಮ ನಾಮ ಜಪ ,ಭಜನೆ , ಪ್ರಾರ್ಥನೆಗಳು ನಡೆಯಬೇಕು ಎಲ್ಲ ಮಠಾಧೀಶರಿಗೂ ಈ ಬಗ್ಗೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಶ್ರೀಪಾದರು ವಿಶೇಷವಾಗಿ ಬೊಟ್ಟು ಮಾಡಿ ತಿಳಿಸಿದ್ದಾರೆ .
ಪ್ರಾತಃ ಸ್ನಣೀಯರೂ ಶ್ರೀ ರಾಮನ ಉಪಾಸಕರೂ ಆಗಿರುವ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಆರಾಧನೆಯೂ ಆಗಸ್ಟ್ 5 ರಂದೇ ಆಗಿರುವುದು ವಿಶೇಷವಾಗಿದೆ ಎಂದರು.
ಆಗಸ್ಟ್ 5 ರಂದು ಬೆಳಿಗ್ಗೆ ನೀಲಾವರ ಗೋಶಾಲೆಯಲ್ಲಿ ನಮ್ಮ ಆರಾಧ್ಯಮೂರ್ತಿ ಶ್ರೀ ರಾಮ – ಕೃಷ್ಣ- ವಿಠಲ ದೇವರಿಗೆ ಲಕ್ಷ ತುಲಸೀ ಅರ್ಚನೆ ನಡೆಸುವವರಿದ್ದೇವೆ . ಇದಕ್ಕಾಗಿ ಭಕ್ತರು ತುಲಸಿಯನ್ನು 4 ನೇ ತಾರೀಖು ಮಧ್ಯಾಹ್ನದ ಒಳಗೆ ಉಡುಪಿ ಪೇಜಾವರ ಮಠಕ್ಕೆ ಅಥವಾ ನೀಲಾವರ ಗೋಶಾಲೆಗೆ ತಂದೊಪ್ಪಿಸಬಹುದು . ಚಾತುರ್ಮಾಸ್ಯ ವ್ರತ ನಿಮಿತ್ತ ಅಯೋಧ್ಯೆಯ ಕಾರ್ಯಕ್ರಮದಲ್ಲಿ ನಾವು ಪಾಲ್ಗೊಳ್ಳುತ್ತಿಲ್ಲ ಎಂದು ಅವರು ತಿಳಿಸಿದರು .
ಇದೇ ವೇಳೆ ಮಾತನಾಡಿದ ಬಜರಂಗದಳ ಪ್ರಾಂತ ಸಹಸಂಚಾಲಕರು ಸುನೀಲ್ ಕೆ ಆರ್ ಅವರು ಆಗಸ್ಟ್ 5 ನೇ ದಿನಾಂಕ ಈ ದೇಶದ ಇತಿಹಾಸದಲ್ಲಿ ಸ್ಮರಣೀಯ ದಿನವಾಗಿ ದಾಖಲಾಗಲಿದೆ . ಆದ್ದರಿಂದ ಅಯೋಧ್ಯೆಯಲ್ಲಿ ಅಂದು ನಡೆಯುವ ಶಿಲಾನ್ಯಾಸ ಸಮಾರಂಭವನ್ನು ಪ್ರತಿಯೊಬ್ಬರು ಸಂಭ್ರಮಿಸಬೇಕಾದ ದಿನವಾಗಿದೆ. ಆಗಸ್ಟ್ 5 ರಂದು ಪ್ರತೀ ಮನೆ ಮಂದಿರ ದೇವಸ್ಥಾನ ಕಚೇರಿಗಳಲ್ಲಿ ಧಾರ್ಮಿಕ ವಾತಾವರಣ ಸೃಷ್ಟಿಸಬೇಕು. ತಳಿರು ತೋರಣ, ದ್ವಾರಗಳಿಗೆ ಹೂವಿನ ಅಲಂಕಾರ , ಭಗಧ್ವಾಜಗಳನ್ನು ಅಳವಡಿಸುವಂತೆ ಈಗಾಗಲೇ ವಿಶ್ವ ಹಿಂದೂಪರಿಷತ್ ಕರೆ ನೀಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರಾದ ಪಿ. ವಿಷ್ಣುಮೂರ್ತಿ ಆಚಾರ್ಯ, ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಮಾತೃ ಮಂಡಳಿಯ ಪೂರ್ಣಿಮಾ ಸುರೇಶ್, ಸಂಘಟನೆಯ ಸುರೇಂದ್ರ ಕೋಟೇಶ್ವರ ಉಪಸ್ಥಿತರಿದ್ದರು