ರಾಷ್ಟ್ರಪತಿ ಕೋವಿಂದ್ ಸ್ವಾಗತಕ್ಕೆ ಸಿದ್ದಗೊಂಡ ಉಡುಪಿ

Spread the love

ರಾಷ್ಟ್ರಪತಿ ಕೋವಿಂದ್ ಸ್ವಾಗತಕ್ಕೆ ಸಿದ್ದಗೊಂಡ ಉಡುಪಿ

ಉಡುಪಿ: ದೇಶದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಸ್ವಾಗತಿಸಲು ದೇವಳಗಳ ನಗರಿಯಾದ ಶ್ರೀಕೃಷ್ಣನ ನಾಡು ಉಡುಪಿ ಸಂಪೂರ್ಣ ಸಜ್ಜುಗೊಂಡಿದೆ. ಶ್ರೀಕೃಷ್ಣಮಠ, ಪೇಜಾವರ ಮಠಕ್ಕೆ ಡಿ.27ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಭದ್ರತೆ ಸಹಿತ ಸಕಲ ತಯಾರಿ ಅಂತಿಮ ಹಂತದಲ್ಲಿದೆ.

ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪೀಠಾಧಿಪತಿಯಾಗಿ 80 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಉಮಾಭಾರತಿ ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದರೂ, ಭದ್ರತೆ ಮತ್ತು ಶಿಷ್ಟಾಚಾರ ಕಾರಣದಿಂದಾಗಿ ಸಭಾ ಕಾರ್ಯಕ್ರಮ ನಡೆಯುತ್ತಿಲ್ಲ. ಆದರೂ ರಾಷ್ಟ್ರಪತಿಗಳು ಪೇಜಾವರ ಶ್ರೀಗಳನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಲಿದ್ದಾರೆ. ಈ ಸಂದರ್ಭ ಪೇಜಾವರ ಶ್ರೀಗಳು ರಾಷ್ಟ್ರಪತಿಗಳನ್ನು ಗೌರವಿಸುವ ಕಾರ್ಯಕ್ರಮವಿದೆ.

ರಾಷ್ಟ್ರಪತಿ ಕೋವಿಂದ್ ಅವರು ಗುರುವಾರ ಶ್ರೀಕೃಷ್ಣ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ರಥಬೀದಿ ಸುತ್ತ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.

ರಾಷ್ಟ್ರಪತಿ ಅವರಿಗೆ ವಿಶೇಷ ಭದ್ರತಾ ವ್ಯವಸ್ಥೆ ಇರುವುದರಿಂದ ಮುಂಜಾಗರೂಕತಾ ಕ್ರಮವಾಗಿ ರಥಬೀದಿ, ರಾಜಾಂಗಣ ವಾಹನ ಪಾರ್ಕಿಂಗ್ ಪ್ರದೇಶಗಳಲ್ಲಿ ವಹಿವಾಟು ನಡೆಸುತ್ತಿದ್ದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಶ್ರೀಕೃಷ್ಣ ಮಠ, ಶ್ರೀ ಅನಂತೇಶ್ವರ, ಶ್ರೀಚಂದ್ರಮೌಳೀಶ್ವರ ದೇವಳ, ಅಷ್ಟ ಮಠಗಳು, ಎಟಿಎಂಗಳನ್ನು ಬಿಟ್ಟರೆ ಉಳಿದೆಲ್ಲ ಹೋಟೆಲ್, ಅಂಗಡಿಗಳು ಮುಚ್ಚಿವೆ. ಅಲ್ಲಲ್ಲಿ ಖಾಕಿ ಪಡೆ ನಿಯೋಜಿಸಲಾಗಿದೆ.

ರಾಷ್ಟ್ರಪತಿ ಬೆಳಗ್ಗೆ 11 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಐಎಎಫ್ ವಿಮಾನದಲ್ಲಿ ಆಗಮಿಸಲಿದ್ದು, ಅಲ್ಲಿಂದ ಐಎಎಫ್ ಹೆಲಿಕಾಪ್ಟರ್ ಮುಖಾಂತರ ಆದಿ ಉಡುಪಿಯ ಹೆಲಿಪ್ಯಾಡ್ನಲ್ಲಿ 11.25ಕ್ಕೆ ಇಳಿದು ಬನ್ನಂಜೆ ಸರಕಾರಿ ಪ್ರವಾಸಿ ಮಂದಿರಕ್ಕೆ ಆಗಮಿಸಲಿದ್ದಾರೆ. ಬಳಿಕ ಪೇಜಾವರ ಮಠ ಭೇಟಿ. ಅಲ್ಲಿಂದ ಶ್ರೀಕೃಷ್ಣಮಠಕ್ಕೆ ತೆರಳಿ ಶ್ರೀಕೃಷ್ಣ ದರ್ಶನ ಪಡೆದು, ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರಿಂದ ಮಂತ್ರಾಕ್ಷತೆ ಸ್ವೀಕಾರ. ಬಳಿಕ ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ 1.55ಕ್ಕೆ ತಲುಪಿ ದೆಹಲಿಗೆ ನಿರ್ಗಮಿಸಲಿದ್ದಾರೆ.


Spread the love