ರಾಷ್ಟ್ರೀಯ ಮೀನುಗಾರಿಕಾ ನೀತಿ ಜಾರಿಗೆ ರಾಜ್ಯ ಮೀನುಗಾರರ ಕಾಂಗ್ರೆಸ್ ಅಧ್ಯಕ್ಷ ಸಭಾಪತಿ ಒತ್ತಾಯ
ಉಡುಪಿ: ವಿವಿಧ ರಾಜ್ಯಗಳಲ್ಲಿ ಪ್ರತ್ಯೇಕ ಮೀನುಗಾರಿಕಾ ನೀತಿ ಇದೆ. ಇದು ಸಂಘರ್ಷಕ್ಕೆ ಕಾರಣವಾಗುತ್ತಿದ್ದು, ಕೇಂದ್ರ ಸರಕಾರ ದೇಶವ್ಯಾಪಿ ಏಕರೂಪದ ಮೀನುಗಾರಿಕಾ ನೀತಿ ಜಾರಿಗೊಳಿಸಬೇಕು ಎಂದು ಕರ್ನಾಟಕ ಪ್ರದೇಶ ಮೀನುಗಾರರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಯು.ಆರ್. ಸಭಾಪತಿ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ 23 ಲಕ್ಷ ಜನರು ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿದ್ದು, ಎಲ್ಲರನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಆಗ್ರಹಿಸಿದರು.
ಪ್ರತಿ ರಾಜ್ಯದಲ್ಲಿ ಮೀನುಗಾರಿಕಾ ಇಲಾಖೆ ಇದೆ. ಅದರೆ ಕೇಂದ್ರದಲ್ಲಿ ಕೃಷಿ ಇಲಾಖೆಯ ಜೊತೆಗೆ ಮೀನು ಮೀನುಗಾರಿಕಾ ಇಲಾಖೆಯನ್ನು ಸೇರಿಸಲಾಗಿದೆ. ಇದರಿಂದ ಮೀನುಗಾರರು ಕೇಂದ್ರದ ಸೌಲಭ್ಯ ವಂಚಿತರಾಗಿದ್ದಾರೆ. ಹೀಗಾಗಿ ಪ್ರತ್ಯೇಕ ಮೀನುಗಾರಿಕಾ ಇಲಾಖೆ ಅಸ್ತಿತ್ವಕ್ಕೆ ಬರುವುದು ಅಗತ್ಯ. ಜತೆಗೆ ಒಳನಾಡು ಮೀನುಗಾರಿಕೆ ಕೆರೆಗಳನ್ನು ಗುತ್ತಿಗೆ ನೀಡುವ ಸಂದರ್ಭ ಮೀನುಗಾರಿಕಾ ಕೋ ಆಪರೇಟಿವ್ ಸೊಸೈಟಿಗಳ ಸದಸ್ಯರಿಗೆ ಅದ್ಯತೆ ನೀಡಬೇಕು ಎಂದು ಹೇಳಿದರು.
ಕರ್ನಾಟಕ ಪ್ರದೇಶ ಮೀನುಗಾರರ ಕಾಂಗ್ರೆಸ್ ಬಲಪಡಿಸುವ ನಿಟ್ಟಿನಲ್ಲಿ ನ. 21ರಂದು ಕುಮಟಾದ ಮಣಕಿಯಲ್ಲಿ ಸಮಾವೇಶ ನಡೆಯಲಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭಾಗವಹಿಸಲಿದ್ದಾರೆ ಎಂದರು.
ಕೇಂದ್ರ ಸರಕಾರ ಡೀಸೆಲ್ ಬೆಲೆ ಪದೇಪದೇ ಏರಿಕೆ ಮಾಡುತ್ತಿದ್ದು, ಇದರಿಂದ ಮೀನುಗಾರರಿಗೆ ತೊಂದರೆಯಾಗಿದೆ . ಹೀಗಾಗಿ ನವೆಂಬರ್ರ ಮೊದಲ ವಾರದಲ್ಲಿ ಕೇಂದ್ರ ಸರಕಾರದ ವಿರುದ್ಧ ಕರ್ನಾಟಕ ಪ್ರದೇಶ ಮೀನುಗಾರ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಅವರು ಹೇಳಿದರು.
ಕರ್ನಾಟಕ ಪ್ರದೇಶ ಮೀನುಗಾರರ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಅ. 31ರ ಒಳಗೆ ಪ್ರತಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಪದಾಧಿಕಾರಿಗಳ ನೇಮಕ ಮಾಡಲಾಗುವುದು. ಕರಾವಳಿಗೆ ಆದ್ಯತೆ ನೀಡಿ ಹತ್ತು ಜಿಲ್ಲೆಯಲ್ಲಿ ಅರುವತ್ತು ಜನ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ಮೀನುಗಾರ ಕಾಂಗ್ರೆಸ್ ಪದಾಧಿಕಾರಿಗಳಾದ ರಾಮ ಮೊಗೇರ, ಸದಾಶಿವ ಕರ್ಕೇರ, ಸರಳ ಕಾಂಚನ್, ಕೇಶವ ಕುಂದರ್, ಕಿರಣ್ ಕುಮಾರ್ ಉದ್ಯಾವರ, ಮನೋಜ್ ಕರ್ಕೆರಾ ಮೊದಲಾದವರು ಉಪಸ್ಥಿತರಿದ್ದರು.