ರೇಬೀಸ್ ರೋಗವು ಡೆಂಗು, ಮಲೇರಿಯಾ ರೋಗಗಳಿಂತ ಭಯಾನಕ ರೋಗ -ಸೆಲ್ವಮಣಿ

Spread the love

ರೇಬೀಸ್ ರೋಗವು ಡೆಂಗು, ಮಲೇರಿಯಾ ರೋಗಗಳಿಂತ ಭಯಾನಕ ರೋಗ -ಸೆಲ್ವಮಣಿ

ಮಂಗಳೂರು : ರೇಬೀಸ್ ರೋಗವು ಡೆಂಗು, ಮಲೇರಿಯಾ ರೋಗಗಳಿಂತ ಭಯಾನಕ ರೋಗವಾಗಿದೆ ಆದ್ದರಿಂದ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ತುಂಬಾ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್. ಸೆಲ್ವಮಣಿ ಹೇಳಿದರು.

ಮಂಗಳವಾರ ಜಿಲ್ಲಾ ಪಂಚಾಯತ, ಪಶು ಸಂಗೋಪನಾ ಇಲಾಖೆ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು, ಹಾಗೂ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ “ವಿಶ್ವ ರೇಬೀಸ್ ದಿನಾಚರಣೆ ” ಹಾಗೂ ತಾಂತ್ರಿಕ ವಿಚಾರ ಗೋಷ್ಠಿಯನ್ನು ಕೃಷಿ ವಿಜ್ಞಾನ ಕೇಂದ್ರ ,ಮಂಗಳೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ರೇಬೀಸ್ ರೋಗದ ಹರಡುವಿಕೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯ ಅಗತ್ಯವಾಗಿ ಮಾಡಬೇಕು ಹಾಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಹಾಗೂ ಬೇರೆ ಬೇರೆ ಇಲಾಖೆಗಳ ಸಹಭಾಗಿತ್ವದಲ್ಲಿ ಜೊತೆಗೆ ಸಮಾಜಿಕ ಕಾಳಜಿಯುಳ್ಳ ಸರಕಾರೇತರ ಸಂಸ್ಥೆಗಳ ಮೂಲಕ ಇಂತಹ ರೋಗಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಮತ್ತು ಜಾಗೃತಿ ಮೂಡಿಸಬೇಕು ಮತ್ತು ನವೆಂಬರ್ ತಿಂಗಳಲ್ಲಿ ಇಂತಹ ರೋಗಗಳಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಬಗ್ಗೆ ಪ್ರತಿ ತಾಲ್ಲೂಕು ಪಂಚಾಯತಗಳ ವ್ಯಾಪ್ತಿಯಲ್ಲಿ ಒಂದು ಕಾರ್ಯಾಗಾರ ಮಾಡಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಈ ರೋಗದ ಬಗ್ಗೆ ಮಾಹಿತಿ ನೀಡಿದಂತಾಗುತ್ತದೆ ಎಂದು ಇಲಾಖಾ ಅಧಿಕಾರಿಗಳಿಗೆ ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ನಿರ್ಗಮಿತ ಪಶು ಪಾಲನಾ ಸೇವಾ ಇಲಾಖೆ, ಉಪನಿದರ್ಶಕರಾದ ಡಾ. ಕೆ.ವಿ.ಹಲಗಪ್ಪ ಮಾತನಾಡಿ, ಪ್ರಾಣಿಗಳಿಂದ ಮಾನವರಿಗೆ ಹರಡುವ ಮಾರಕ ಖಾಯಿಲೆ ಇದು ಹಾಗಾಗಿ ಸಾರ್ವಜನಿಕರಲ್ಲಿ ಜಾಗೃತಿ ತುಂಬಾ ಮುಖ್ಯವೆಸುತ್ತದೆ ಹಾಗೂ ನಾಯಿಗಳು ಕಚ್ಚಿದೆ ಎಂದು ನಿರ್ಲಕ್ಷ್ಯ ತೋರಿದರೆ ಮತ್ತೊಂದು ದಿನ ಈ ಭಯಾನಕ ರೇಬೀಸ್ ರೋಗ ತುತ್ತಾಗುವ ಸಾಧ್ಯತೆ ಹೆಚ್ಚು ಆದ್ದರಿಂದ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಬೇಕು ಬೇರೆಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಈ ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಜನರು ಜಾಗೃತಿರಾಗಿದ್ದಾರೆ ಎಂದು ಹೇಳಿದರು.

ವಿಶ್ವ ಆರೋಗ್ಯ ಅಂಗ ಸಂಸ್ಥೆಯ ಸಮೀಕ್ಷೆಯ ಪ್ರಕಾರ ವಿಶ್ವದಲ್ಲೇ ಪ್ರತಿ ವರ್ಷ 70 ಸಾವಿರ ಜನರು ಈ ಮಾರಕ ರೇಬೀಸ್ ರೋಗಕ್ಕೆ ತುತ್ತಾಗಿ ಸಾವಿಗೀಡಾಗುತ್ತಾರೆ ಮತ್ತು ಭಾರತ ದೇಶದಲ್ಲಿ ಶೇಕಡಾ 96% ರಷ್ಟು ಜನರಿಗೆ ರೇಬೀಸ್ ಸೋಂಕು ತಗುಲುವುದು ಬೀದಿನಾಯಿಗಳಿಂದ ಆದ್ದರಿಂದ ಜನಸಾಮಾನ್ಯರು ತುಂಬಾ ಜಾಗರೂಕತೆಯಿಂದ ಇರಬೇಕು ಹಾಗೂ ಭಾರತದಲ್ಲಿ ಉಂಟಾಗುವ ರೇಬೀಸ್ ಸೋಂಕು ಮತ್ತು ಸಾವು ನೋವುಗಳ ಅರ್ಧದಷ್ಟು ಕರ್ನಾಟಕ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಈ ರೇಬೀಸ್ ರೋಗದಿಂದ ಬಳಲುತ್ತಿದ್ದಾರೆ ಎಂದು ಹಿರಿಯ ವಿಜ್ಞಾನಿ ಡಾ. ಎನ್.ಎಲ್. ಗಂಗಾಧರ್ ವಿಷಾದ ಪಡಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ರೇಬೀಸ್ ರೋಗದ ತಾಂತ್ರಿಕ ವಿಷಯಗಳನ್ನು ಮಾತನಾಡುತ್ತಾ, ಸರಿಯಾದ ಸಮಯದಲ್ಲಿ ರೋಗ ನಿರೋಧಕ ಚುಚ್ಚುಮದ್ದು ಕೊಡಿಸುವುದು ಮತ್ತು ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರಿಂದ ರೋಗವನ್ನು ನಿಯಂತ್ರಿಸಬಹುದು. ಜನ ಜಾಗೃತಿಯಿಂದ ರೋಗ ನಿರ್ಮೂಲನೆ ಸಾದ್ಯ. ಆ ನಿಟ್ಟಿನಲ್ಲಿ ಈ ವಿಶ್ವ ರೇಬೀಸ್ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

ವಿಶ್ವ ರೇಬೀಸ್ ದಿನಾಚರಣೆಯ ಅಂಗವಾಗಿ ಶ್ವಾನಗಳಿಗೆ ಉಚಿತ ರೇಬೀಸ್ ಲಸಿಕೆಯನ್ನು ನಗರದ ಪಶುಪಾಲನೆ ಆಸ್ಪತ್ರೆಯಲ್ಲಿ ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಜಯರಾಜ್, ಮೀನುಗಾರಿಕೆ ಕಾಲೇಜು ನಿವೃತ್ತಿ ಡೀನ್ ಡಾ.ಶಿವಪ್ರಸಾದ್ ಹಾಗೂ ಡಾ. ರಾಜಣ್ಣ ಮತ್ತು ಇಲಾಖೆಯ ಅಧಿಕಾರಿಗಳು ವೈದ್ಯರು, ಇಲಾಖೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.


Spread the love