ರೈತರಿಗೆ ಕಿಸಾನ್ ಕ್ರೆಡಿಟ್ಕಾರ್ಡ್ ವಿತರಣೆ – ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್
ಮಂಗಳೂರು : ರೈತ ಬಾಂಧವರಿಗಾಗಿ ಕೇಂದ್ರ ಸರಕಾರ 2019ನೇ ಫೆಬ್ರವರಿ 01 ರಂದು ದೇಶದ ಆಯವ್ಯಯದಲ್ಲಿ ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆ’ಯನ್ನು ಘೋಷಣೆ ಮಾಡಿದೆ.
ಕೇಂದ್ರ ಸರಕಾರದ ಈ ಯೋಜನೆಯು ಒಂದು ವರ್ಷ ಪೊರೈಸುತ್ತಿರುವ ಈ ಸುಸಂದರ್ಭದಲ್ಲಿ, 2020ನೇ ಫೆಬ್ರವರಿ 24 ರ ಒಳಗೆ ಒಂದು ಕೋಟಿ ಕಿಸಾನ್ ಕ್ರೆಡಿಟ್ಕಾರ್ಡ್(ಬೆಳೆಸಾಲ)ಗಳನ್ನು ಸದರಿ ಯೋಜನೆಯ ಫಲಾನುಭವಿಗಳಿಗೆ ವಿತರಿಸಲು ಬ್ಯಾಂಕ್ಗಳಿಗೆ ನಿರ್ದೇಶಿಸಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿಯಲ್ಲಿ ದೇಶಾದ್ಯಂತ 9.22 ಕೋಟಿ ರೈತರು ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ ಈಗಾಗಲೇ 6.76 ಕೋಟಿ ಫಲಾನುಭವಿಗಳು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆ.ಸಿ.ಸಿ.) ಹೊಂದಿದ್ದು, 2.46 ಕೋಟಿ ಫಲಾನುಭವಿಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಬಾಕಿ ಇರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 134165 ರೈತರು ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ನೋಂದಣಿ ಮಾಡಿಕೊಂಡಿದ್ದು, 98988 ಫಲಾನುಭವಿಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುತ್ತಾರೆ. ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯದ ರೈತರು ತಮ್ಮ ಸೇವಾವಲಯದ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಅತ್ಯಂತ ಕಡಿಮೆ ಬಡ್ಡಿ ದರದ ಈ ಬೆಳೆಸಾಲ (ಕೆ.ಸಿ.ಸಿ) ಸೌಲಭ್ಯವನ್ನು ಪಡೆಯಬಹುದಾಗಿದೆ.
ಜಿಲ್ಲೆಯ ಎಲ್ಲಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ , ನಿಯಮಾನುಸಾರ ಬೆಳೆಸಾಲ (ಕೆ.ಸಿ.ಸಿ) ವಿತರಿಸಿ ಕೇಂದ್ರ ಸರಕಾರ 2020 ನೇ ಫೆಬ್ರವರಿ 24 ರವರೆಗೆ ನಿಗದಿಪಡಿಸಿದ ಗುರಿಸಾಧನೆಗೆ ಜಿಲ್ಲೆಯಿಂದ ಅತಿ ಹೆಚ್ಚಿನ ಕೊಡುಗೆ ನೀಡಲು ನಿರ್ದೇಶಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಇವರ ಪ್ರಕಟಣೆ ತಿಳಿಸಿದೆ.