ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಮಿಷನರ್
ಮಂಗಳೂರು: ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮನ್ಸೂರ್ ಅಲಿ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಂಗಳೂರು ತಾಲೂಕಿನ ಕುಡುಪು ಗ್ರಾಮದ 10.8 ಎಕರೆ ಜಮೀನನ್ನು ಗಿರಿಧರ್ ಶೆಟ್ಟಿ ಖರೀದಿಸಿದ್ದರು. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಪಚ್ಚನಾಡಿ ಮತ್ತು ಕುಡುಪು ಗ್ರಾಮಗಳ ಸುತ್ತಮುತ್ತ ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ಘನತ್ಯಾಜ್ಯ ನಿರ್ವಹಣೆಯ ಘಟಕವನ್ನು ವಿಸ್ತರಿಸುವ ಬಗ್ಗೆ ಅವಶ್ಯವಾಗಿರುವ ಜಮೀನನ್ನು ಟಿಡಿಆರ್ ನಿಯಮದಡಿ ಖರೀದಿ ಮಾಡುವ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯೊಂದಿಗೆ ಗಿರಿಧರ್ ಶೆಟ್ಟಿ ಮತ್ತು ಜಮೀನಿನ ಈ ಹಿಂದಿನ ಮಾಲಕರು ಪತ್ರ ವ್ಯವಹಾರ ಮಾಡಿಕೊಂಡಿದ್ದರು. ಅದರಂತೆ ಈ ಜಮೀನು 2024ರ ಜನವರಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಹೆಸರಿಗೆ ನೊಂದಣಿಯಾಗಿತ್ತು. ಬಳಿಕ ಮಹಾನಗರ ಪಾಲಿಕೆಯ ಆಯುಕ್ತರು ಟಿಡಿಆರ್ ನೀಡಲು ಮುಡಾ ಆಯುಕ್ತರಿಗೆ ಫೆಬ್ರವರಿಯಲ್ಲಿ ಕಡತ ಕಳುಹಿಸಿದ್ದರು. ಆದರೆ ಮುಡಾ ಆಯುಕ್ತ ಮನ್ಸೂರ್ ಆಲಿ ಈ ಕಡತವನ್ನು ವಿಲೇವಾರಿ ಮಾಡದೆ ಬಾಕಿಯಿರಿಸಿದ್ದರು.
ಈ ಬಗ್ಗೆ ಗಿರಿಧರ್ ಶೆಟ್ಟಿ ಮುಡಾ ಆಯುಕ್ತರ ಬಳಿ ಮಾತನಾಡಿದಾಗ 25 ಲಕ್ಷ ರೂ.ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಅದರಂತೆ ಶನಿವಾರ ಮುಡಾ ಆಯುಕ್ತ ಮನ್ಸೂರ್ ಆಲಿ ನಿರ್ದೇಶನದಂತೆ ದಲ್ಲಾಳಿ ಮುಹಮ್ಮದ್ ಸಲೀಂ 25 ಲಕ್ಷ ಲಂಚದ ಹಣವನ್ನು ಸ್ವೀಕರಿಸುವಾಗ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಲೋಕಾಯುಕ್ತ ಪ್ರಭಾರ ಎಸ್ಪಿ ಚಲುವರಾಜು.ಬಿ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅಮಾನುಲ್ಲಾ.ಎ, ಸುರೇಶ್ ಕುಮಾರ್ ಪಿ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.