ಲಕ್ಷ್ಮೀಂದ್ರ ನಗರ ಮತ್ತು ವಿಭುದಪ್ರಿಯ ನಗರದ ಮಧ್ಯೆ ಯೂ-ಟರ್ನ್ ನೀಡಲು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

Spread the love

ಲಕ್ಷ್ಮೀಂದ್ರ ನಗರ ಮತ್ತು ವಿಭುದಪ್ರಿಯ ನಗರದ ಮಧ್ಯೆ ಯೂ-ಟರ್ನ್ ನೀಡಲು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

ಉಡುಪಿ: ಲಕ್ಷ್ಮೀಂದ್ರ ನಗರ ಮತ್ತು ವಿಭುದಪ್ರಿಯ ನಗರದ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂ-ಟರ್ನ್ ನೀಡುವಂತೆ ಮತ್ತು ಲಕ್ಷ್ಮೀಂದ್ರ ನಗರದ ಹೆದ್ದಾರಿಯ ಚರಂಡಿಯ ಸ್ಥಗಿತಗೊಂಡ ಕೆಲಸ ಆರಂಭಿಸುವಂತೆ ಆಗ್ರಹಿಸಿ ಲಕ್ಷ್ಮೀಂದ್ರ ನಗರ ನಾಗರಿಕ ಸಮಿತಿಯ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಲಕ್ಷ್ಮೀಂದ್ರ ನಗರದಲ್ಲಿ ಯೂ ಟರ್ನ್ ನೀಡುವಂತೆ ಆಗ್ರಹಿಸಿ ಇಲ್ಲಿಯ ನಾಗರಿಕರು ಸುಮಾರು ಒಂದು ವರ್ಷದಿಂದ ಹಲವಾರು ಬಾರಿ ಜಿಲ್ಲಾಧಿಕಾರಿಗಳಿಗೆ ಮುಖತಃ ಹಾಗೂ ಪತ್ರ ಮುಖೇನ ಕೇಳಿಕೊಂಡಿದ್ದು ಈ ವರೆಗೆ ಈ ವಿಷಯದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಲಕ್ಷ್ಮೀಂದ್ರನಗರ, ವಿಭುದಪ್ರಿಯ ನಗರ, ಹಯಗ್ರೀವ ನಗರ, ಸಗ್ರಿ, ಕುಂಡೇಲು, ಗುಳ್ಳೆ ಮುಂತಾದ ಹಲವು ಪ್ರದೇಶಗಳ ನೂರಾರು ಮಕ್ಕಳು, ಸಾವಿರಾರು ನಾಗರಿಕರು ಮತ್ತು ರಿಕ್ಷಾ ಚಾಲಕರು ತುಂಬಾ ಕಷ್ಟಪಡಬೇಕಾಗಿದೆ. ಅರ್ಧ ಕಿಮಿ ಇರುವ ಇಂದ್ರಾಳಿಯಂತಹ ಹತ್ತಿರದ ಪ್ರದೇಶಕ್ಕೆ ಹೋಗಬೇಕಾದರೆ ಸುಮಾರು ಎರಡು ಕಿಮಿ ಗೂ ಮೇಲ್ಪಟ್ಟು ಸಂಚರಿಸಬೇಕಾಗಿದೆ. ಇದರಿಂದ ಎಲ್ಲರಿಗೂ ದುಪ್ಪಟ್ಟು ಹಣ ಖರ್ಚಾಗುವುದು ಮಾತ್ರವಲ್ಲದೆ ತುಂಬಾ ಜಾಸ್ತಿ ಸಮಯವು ಹಾಳಾಗುತ್ತಿದೆ. ಇದು ಮಕ್ಕಳು, ರಿಕ್ಷಾ ಚಾಲಕರು ಮತ್ತು ಹಿರಿಯ ನಾಗರಿಕರಿಗೆ ಅತೀ ಹೆಚ್ಚು ಹೊರೆಯಾಗಿದೆ. ಈ ಹಿಂದೆ ಲಕ್ಷ್ಮೀನಗರದಲ್ಲಿ ಎರಡು ಯೂ-ಟರ್ನ್ ಗಳಿದ್ದು ಈಗ ಒಂದು ಇಲ್ಲದೆ ಎಲ್ಲರಿಗೂ ದೊಡ್ಡ ಸಮಸ್ಯೆಯಾಗಿದೆ. ಹಾಗಾಗಿ ಕೂಡಲೇ ಈ ಬಗ್ಗೆ ಗಮನಹರಿಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೆ ಲಕ್ಷ್ಮೀಂದ್ರನಗರದಲ್ಲಿ ನಡೆಯುತ್ತಿರುವ ಚರಂಡಿ ಕೆಲಸ ಸ್ಥಗಿತಗೊಂಡು ಇನ್ನೂ 2-3 ತಿಂಗಳಲ್ಲಿ ಮಳೆಗಾಲ ಬರಲಿದ್ದು ಆ ಸಮಯದಲ್ಲಿ ನೀರು ಹರಿದು ಹೋಗಲು ಜಾಗವಿಲ್ಲ ಇದನ್ನು ಕೂಡಲೇ ಸರಿಪಡಿಸದಿದ್ದಲ್ಲಿ ಹಲವಾರು ಅಂಗಡಿಗಳು ಮತ್ತು ಮನೆಗಳು ನೀರಿನಿಂದ ಆವ್ರತವಾಗಿ ತುಂಬಾ ತೊಂದರೆಗೆ ಒಳಗಾಗುವುದರಲ್ಲಿ ಸಂಶಯವಿಲ್ಲ. ರಸ್ತೆಗಳಲ್ಲೂ ಕೂಡ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗುವುದು ಮಾತ್ರವಲ್ಲ ಅಫಘಾತಕ್ಕೆ ಕೂಡ ಕಾರಣವಾಗುತ್ತದೆ ಜನರು ರಸ್ತೆಯಲ್ಲಿ ನಡೆದಾಡಲು ಪರದಾಡಬೇಕಾಗುತ್ತದೆ ಆದ್ದರಿಂದ ಈ ಎರಡು ವಿಷಯಗಳ ಕುರಿತು ಕೂಡಲೇ ಗಮನ ಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.


Spread the love