ಲಾಕ್ ಡೌನ್ ; ಕೇರಳದಲ್ಲಿ ಸಿಲುಕಿದ್ದ ಉಡುಪಿಯ 41 ಮೀನುಗಾರರನ್ನು ವಾಪಾಸು ಕರೆತರಲು ಸಚಿವ ಕೋಟ ಸಹಾಯ ಹಸ್ತ

Spread the love

ಲಾಕ್ ಡೌನ್ ; ಕೇರಳದಲ್ಲಿ ಸಿಲುಕಿದ್ದ ಉಡುಪಿಯ 41 ಮೀನುಗಾರರನ್ನು ವಾಪಾಸು ಕರೆತರಲು ಸಚಿವ ಕೋಟ ಸಹಾಯ ಹಸ್ತ

ಉಡುಪಿ: ಲಾಕ್ ಡೌನ್ ಹಿನ್ನಲೆಯಲ್ಲಿ ಕೇರಳ ರಾಜ್ಯದ ಚರವತ್ತೂರು, ಚೆಂಬಲ್ ಮತ್ತು ಕಣ್ಣೂರುನಲ್ಲಿ ಸಿಲುಕಿದ್ದ 41 ಮೀನುಗಾರರನ್ನು ಕರೆತರಲು ಮೀನುಗಾರಿಕ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಸಹಾಯ ಹಸ್ತ ಚಾಚಿದ್ದಾರೆ.

ಉಡುಪಿ ಜಿಲ್ಲೆಯ 41 ಬೋಟುಗಳು ಲಾಕ್ಡೌನ್ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಚರವತ್ತೂರು, ಚೆಂಬಲ್ ಮತ್ತು ಕಣ್ಣೂರುನಲ್ಲಿ ಸಿಲುಕಿದ್ದು, ಮೀನುಗಾರರು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ಮೊರೆ ಹೋದ ಹಿನ್ನೆಲೆಯಲ್ಲಿ, ಸಚಿವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ರವರೊಂದಿಗೆ ಚರ್ಚಿಸಿ ಕೇರಳ ಸರ್ಕಾರದ ಜೊತೆ ಸಂಪರ್ಕ ಬೆಳೆಸಿ ಇದೀಗ ಎರಡು ರಾಜ್ಯಗಳ ಒಪ್ಪಂದದಂತೆ ಗುರುವಾರ ಅಪರಾಹ್ನ 1.00 ಗಂಟೆಗೆ ಬೋಟುಗಳ ಮಾಲೀಕ ಮೀನುಗಾರರು ಬೋಟ್ನ್ನು ಮರಳಿ ತರಲು ಇನ್ನಿತರ ಮೀನುಗಾರರ ಜೊತೆಗೆ ಮೂರು ವಿಶೇಷ ಯಾಂತ್ರೀಕೃತ ಬೋಟುಗಳ ಮೂಲಕ ತೆರಳುತ್ತಿದ್ದಾರೆ.

ಈ ಬಗ್ಗೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ಪ್ರಯಾಣ ವೆಚ್ಚ ಭರಿಸಲು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಇದರಿಂದ ಸಂಕಷ್ಟದಲ್ಲಿ ಸಿಲುಕಿರುವ 41 ಯಾಂತ್ರೀಕೃತ ಬೋಟುಗಳ ಮೀನುಗಾರರಿಗೆ ಸಹಕಾರ ವಾಗಲಿದೆ ಎಂದು ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.


Spread the love