ಲಾಕ್ ಡೌನ್: ಬಡವರಿಗೆ ಆಹಾರ, ಪಡಿತರ ಸಮಸ್ಯೆಯಾಗದಂತೆ ಯಶಸ್ವಿಯಾಗಿ ನಿಭಾಯಿಸುತ್ತಿದೆ ಉಡುಪಿ ಜಿಲ್ಲಾಡಳಿತ

Spread the love

ಲಾಕ್ ಡೌನ್: ಬಡವರಿಗೆ ಆಹಾರ, ಪಡಿತರ ಸಮಸ್ಯೆಯಾಗದಂತೆ ಯಶಸ್ವಿಯಾಗಿ ನಿಭಾಯಿಸುತ್ತಿದೆ ಉಡುಪಿ ಜಿಲ್ಲಾಡಳಿತ

ಉಡುಪಿ: ಕೊರೊನಾ ಲಾಕ್ ಡೌನ್ ಹಿನ್ನೆಲೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಹೀಗಾಗಿ ಬಡವರು ದಿನನಿತ್ಯದ ಆಹಾರ ಪದಾರ್ಥಗಳಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿನಿತ್ಯ ಬಡವರು, ಕೂಲಿ ಕಾರ್ಮಿಕರು, ಅಸಾಯಕರು ದಿನನಿತ್ಯದ ಆಹಾರ ಪದಾರ್ಥಗಳು ಲಭಿಸದೆ ಸಮಸ್ಯೆ ಅನುಭವಿಸಿದರೆ ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಜಿ ಜಗದೀಶ್ ನೇತೃತ್ವದಲ್ಲಿ ವ್ಯವಸ್ಥಿತವಾಗಿ ಪ್ರತಿನಿತ್ಯ ಅಸಹಾಯಕರಿಗೆ ಊಟ, ಆಹಾರ ಪದಾರ್ಥಗಳು ಲಭಿಸುವಂತೆ ನೋಡಿಕೊಂಡಿದ್ದಾರೆ.

ದೇಶದಾದ್ಯಂತ ಮಾರ್ಚ್ 24ರಿಂದ ಕೊರೊನಾ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಿದ್ದು ಜಿಲ್ಲೆಯಲ್ಲಿ ಇರುವ ಬಡವರು ಕೂಲಿ ಕಾರ್ಮಿಕರು ವಲಸೆ ಕಾರ್ಮಿಕರು ದಿನದ ಊಟಕ್ಕಾಗಿ ಪರದಾಡದಂತೆ ಜಿಲ್ಲಾಡಳಿತ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ಜಿಲ್ಲಾಡಳಿತದ ನೆರವಿಗೆ ಜಿಲ್ಲೆಯ ದಾನಿಗಳು ಕೈ ಜೋಡಿಸಿದ್ದರ ಪರಿಣಾಮ ಕಳೆದ ಹತ್ತು ದಿನಗಳ ಅವಧಿಯಲ್ಲಿ ಬಡವರಿಗಾಗಿ ಸರಕಾರದಿಂದ ಒಂದು ನಯಾ ಪೈಸೆ ಹಣ ಖರ್ಚಾಗದೆ ಕೇವಲ ದಾನಿಗಳೇ ನೀಡಿದ ಸಹಕಾರದಿಂದ ಯಶಸ್ವಿಯಾಗಿ ಆಹಾರದ ವ್ಯವಸ್ಥೆ ಮಾಡಿಸುವಲ್ಲಿ ಉಡುಪಿ ಜಿಲ್ಲಾಡಳಿತ ಯಶಸ್ವಿಯಾಗಿದೆ.

ಈಗಾಗಲೇ ಕಳೆದ 10 ದಿನಗಳಿಂದ ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದ ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಪ್ರತಿನಿತ್ಯ 2500 ಕ್ಕೂ ಅಧಿಕ ಮಂದಿಗೆ ಊಟದ ವ್ಯವಸ್ಥೆ ಮಾಡಿದರೆ ಅದರ ಜೊತೆ ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹ್ಮದ್, ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಜೇಸಿ ಸಂಘಟನೆಗಳು ಪ್ರತಿನಿತ್ಯ ಊಟದ ವ್ಯವಸ್ಥೆಯನ್ನು ವಲಸೆ ಕಾರ್ಮಿಕರಿಗೆ ಮಾಡಿಕೊಂಡು ಬಂದಿದೆ.

ಇದೇ ವೇಳೆ ಬಡವರಿಗೆ ಪಡಿತರ ಕೂಡ ಲಭ್ಯವಾಗುವುಂತೆ ವಿವಿಧ ದಾನಿಗಳು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿವೆ. ಉಡುಪಿ ಕೃಷ್ಣ ಮಠ, ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್, ಪೇಜಾವರ ಮಠ, ಅಂಬಲಪಾಡಿ ದೇವಸ್ಥಾನ, ಎಮ್ ಜಿ ಆರ್ ಗ್ರೂಪ್ ಸೇರಿದಂತೆ ನೂರಾರು ಸಾಮಾಜಿಕ ಸೇವಾ ಸಂಘಟನೆಗಳು ಜಿಲ್ಲೆಯಾದ್ಯಂತ ಅಕ್ಕಿ, ಬೇಳೆಕಾಳು ಸೇರಿದಂತೆ ಪಡಿತರ ಸಾಮಾಗ್ರಿಗಳು ದೊರೆಯುವಂತೆ ನೋಡಿಕೊಂಡಿದ್ದು ಈ ಮೂಲಕ ನೋವಿನಲ್ಲಿ ಅಸಾಯಕತೆಯಲ್ಲಿ ಇರುವ ಜನರಿಗೆ ಮಾನವೀಯತೆಯ ಹಸ್ತವನ್ನು ಚಾಚಿದ್ದಾರೆ. ಪಡಿತರವನ್ನು ಕೇವಲ ಪ್ರಚಾರದ ದೃಷ್ಟಿಯಿಂದ ಹಂಚದೆ ನೇರವಾಗಿ ಜಿಲ್ಲಾಡಳಿತಕ್ಕೆ ತಲುಪಿಸಿ ಆಯಾ ತಾಲೂಕುಗಳ ತಹಶೀಲ್ದಾರ್ ಮೂಲಕ ಪಂಚಾಯತ್ ಮಟ್ಟದಲ್ಲಿ ವಿಎ ಗಳ ಮೂಲಕ ಪ್ರತಿ ಮನೆಗೆ ತಲುಪಿಸವು ವ್ಯವಸ್ಥೆಯನ್ನು ಕೂಡ ಜಿಲ್ಲಾಧಿಕಾರಿ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಈ ಬಗ್ಗೆ ಮ್ಯಾಂಗಲೋರಿಯನ್ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಲಾಕ್ ಡೌನ್ ಹಿನ್ನಲೆಯಲ್ಲಿ ಸಾಕಷ್ಟು ಮಂದಿ ಬಡವರು, ಕೂಲಿ ಕಾರ್ಮಿಕರು, ವಲಸೆ ಕಾರ್ಮಿರಕರು ಆಹಾರದ ಸಮಸ್ಯೆಯಿಂದ ಬಳಲಬಾರದು ಎನ್ನುವ ನಿಟ್ಟಿನಲ್ಲಿ ಸಾಕಷ್ಟು ಮಂದಿ ದಾನಿಗಳು ಆಹಾರ ಸಾಮಾಗ್ರಿಗಳನ್ನು ಜಿಲ್ಲೆಯಲ್ಲಿ ಒದಗಿಸಿದ್ದಾರೆ. ಅವೆಲ್ಲವೂ ಕೂಡ ಅರ್ಹ ವ್ಯಕ್ತಿಗಳಿಗೆ ತಲುಪಬೇಕು ಎನ್ನುವ ನಿಟ್ಟಿನಲ್ಲಿ ಆಯಾ ಪಂಚಾಯತ್ ವಿ ಎ ಗಳ ಮೂಲಕ ತಲುಪಿಸುವ ಕೆಲಸವನ್ನು ಮಾಡಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ಆಹಾರಕ್ಕಾಗಿ ಒಂದು ನಯಾಪೈಸೆಯನ್ನು ಜಿಲ್ಲಾಡಳಿತ ಅಥವಾ ಸರಕಾರದಿಂದ ಖರ್ಚು ಮಾಡಿಲ್ಲ ಎಲ್ಲವನ್ನೂ ಸಹ ದಾನಿಗಳೇ ಮುಂದೆ ಬಂದು ನೀಡಿದ್ದಾರೆ.. ಜಿಲ್ಲೆಯಲ್ಲಿ ಇದುವರೆಗೆ ಆಹಾರದ ಸಮಸ್ಯೆ ಎನ್ನುವುದು ಕಾಡಿಲ್ಲ ಒಂದು ವೇಳೆ ಯಾರಿಗಾದರೂ ಆಹಾರ ಸಾಮಾಗ್ರಿ ಸಿಕ್ಕಿಲ್ಲ ಅಂತಹವರು ದಯವಿಟ್ಟು ಜಿಲ್ಲಾಡಳಿತದ ಗಮನಕ್ಕೆ ತಂದರೆ ಕೂಡಲೇ ಅಂತಹವರಿಗೆ ತಲುಪಿಸಲು ನಾವು ಸಿದ್ದರಿದ್ದೇವೆ. ಎಷ್ಟು ದಿನಗಳ ವರೆಗೆ ದಾನಿಗಳು ನೆರವು ನೀಡುತ್ತಾರೋ ಅಷ್ಟು ದಿನ ಅವರ ಮೂಲಕವೇ ನೀಡಲಾಗುವುದು. ಒಂದು ವೇಳೆ ದಾನಿಗಳು ಇಲ್ಲದೆ ಹೋದರೆ ಆಗ ಜಿಲ್ಲಾಡಳಿತ ತನ್ನ ಎಸ್ ಡಿ ಆರ್ ಎಫ್ ನಿಧಿಯ ಮೂಲಕ ನೀಡಲು ತಯಾರಿದ್ದೇವೆ ಒಟ್ಟಾರೆ ಜಿಲ್ಲೆಯಲ್ಲಿ ಯಾರೂ ಕೂಡ ಉಪವಾಸ ಇರಬಾರದು ಎನ್ನುವುದು ನಮ್ಮ ಉದ್ದೇಶ ಎಂದರು.


Spread the love