ಲಾಕ್ ಡೌನ್ ಮಧ್ಯೆ ವಿನಾಯ್ತಿ ಘೋಷಿಸಿದ ಕೇಂದ್ರ ಸರ್ಕಾರ
ನವದೆಹಲಿ:ಕೇಂದ್ರ ಸರ್ಕಾರ ಕಳೆದ ತಿಂಗಳು 25ರಂದು ಲಾಕ್ ಡೌನ್ ಘೋಷಣೆಯಾದ ಒಂದು ತಿಂಗಳ ಬಳಿಕ ಹೊಸ ವಿನಾಯ್ತಿ ಘೋಷಿಸಿ ಕಳೆದ ರಾತ್ರಿ ಆದೇಶ ಹೊರಡಿಸಿದೆ.
ಎರಡನೇ ಸುತ್ತಿನ ಲಾಕ್ ಡೌನ್ ಮೇ3ಕ್ಕೆ ಕೊನೆಯಾಗಲಿದ್ದು ಇದೀಗ ಕೆಲವು ವ್ಯಾಪಾರ ವಹಿವಾಟುಗಳಿಗೆ ವಿನಾಯ್ತಿ ನೀಡಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ತುಸು ನಿರಾಳತೆ ನೀಡಿರುವುದಂತೂ ಖಂಡಿತ.
ಹಾಗಾದರೆ ಇಂದಿನಿಂದ ಕೇಂದ್ರ ಸರ್ಕಾರ ವಿನಾಯ್ತಿ ತೋರಿಸಿರುವ ವಹಿವಾಟುಗಳು ಯಾವುದು, ಲಾಕ್ ಡೌನ್ ಮುಂದುವರಿಕೆ ಯಾವುದಕ್ಕೆ ಎಂಬ ಕುರಿತು ಇಲ್ಲಿದೆ ಮಾಹಿತಿ.
ಇಂದಿನಿಂದ ತೆರೆಯಲ್ಪಡುವ ಉದ್ದಿಮೆಗಳು:
ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಂಗಡಿಗಳು ಮತ್ತು ಸ್ಥಾಪನೆ ಕಾಯ್ದೆ ಅಡಿ ದಾಖಲಾತಿ ಹೊಂದಿರುವ ಅಂಗಡಿಗಳು, ಜನವಸತಿ ಸಂಕೀರ್ಣಗಳಲ್ಲಿರುವ ಅಂಗಡಿಗಳು, ಮಾರುಕಟ್ಟೆ ಸಂಕೀರ್ಣಗಳು, ನಗರ ಪಾಲಿಕೆ, ನಗರ ಸಭೆ ಮತ್ತು ಪುರಸಭೆ ವ್ಯಾಪ್ತಿಗಳ ಹೊರಗೆ ಅಂಗಡಿಗಳಿಗೆ ವ್ಯಾಪಾರ-ವಹಿವಾಟುಗಳಿಗೆ ಅವಕಾಶ.
ಜನವಸತಿ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತ ಮಾರುಕಟ್ಟೆಗಳಲ್ಲಿರುವ ಅಂಗಡಿಗಳಿಗೆ ತೆರೆಯಲು ಅನುಮತಿ.
ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶಗಳಲ್ಲಿ ದಾಖಲಾತಿ ಹೊಂದಿರುವ ಎಲ್ಲಾ ಅಂಗಡಿಗಳು ಮತ್ತು ಮಾರುಕಟ್ಟೆಗಳಿಗೆ ಅನುಮತಿ. ನಗರಗಳಲ್ಲಿ ಸಣ್ಣ ಅಂಗಡಿಗಳು, ಜನವಸತಿ ಪ್ರದೇಶಗಳಲ್ಲಿರುವ ಅಂಗಡಿಗಳಿಗೆ ವಹಿವಾಟುಗಳಿಗೆ ಅನುಮತಿ.
ಮಾರುಕಟ್ಟೆ ಕಾಂಪ್ಲೆಕ್ಸ್ ಹೊರತುಪಡಿಸಿ ಬೇರೆ ಕಡೆಗಳಲ್ಲಿ ಸಲೂನ್, ಕ್ಷೌರದಂಗಡಿಗಳಿಗೆ ತೆರೆಯಲು ಅವಕಾಶ.
ಅನುಮತಿ ನೀಡಿರುವ ಅಂಗಡಿಗಳಲ್ಲಿ ಶೇಕಡಾ 50ರ ಪ್ರಮಾಣದಲ್ಲಿ ಕೆಲಸಗಾರರನ್ನು ಇಟ್ಟುಕೊಳ್ಳಬಹುದು.ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್, ಗ್ಲೌಸ್ ಧರಿಸಿ ಕೆಲಸ ಮಾಡಬೇಕು.
ಯಾವುದು ಮುಚ್ಚಿರುತ್ತದೆ?
-ಮಾಲ್ ಗಳು ಮತ್ತು ಸಿನೆಮಾ ಹಾಲ್.
-ಜನದಟ್ಟಣೆ ಸೇರುವ ಸರಣಿ ಅಂಗಡಿ ಪ್ರದೇಶಗಳು ಉದಾಹರಣೆಗೆ ಖಾನ್ ಮಾರುಕಟ್ಟೆ, ಗ್ರೇಟರ್ ಕೈಲಾಶ್, ನೆಹರೂ ಪ್ಲೇಸ್ ನಂತಹ ಪ್ರದೇಶಗಳು.
-ನಗರ ಸಭೆ ಮತ್ತು ಪುರಸಭೆ ವ್ಯಾಪ್ತಿ ಪ್ರದೇಶಗಳ ಹೊರಗಿರುವ ಮಲ್ಟಿ ಬ್ರಾಂಡ್ ಮತ್ತು ಸಿಂಗಲ್ ಬ್ರಾಂಡ್ ಮಾಲ್ ಗಳು.
-ಶಾಪಿಂಗ್ ಕಾಂಪ್ಲೆಕ್ಸ್, ಮಾರುಕಟ್ಟೆ ಸಂಕೀರ್ಣಗಳಲ್ಲಿರುವ ಅಂಗಡಿಗಳು, ಮಲ್ಟಿ ಬ್ರಾಂಡ್ ಮತ್ತು ಸಿಂಗಲ್ ಬ್ರಾಂಡ್ ಮಾಲ್ ಗಳು.
-ಜಿಮ್ನಾಸ್ಟಿಕ್ ಕೇಂದ್ರಗಳು, ಕ್ರೀಡಾ ಸಂಕೀರ್ಣಗಳು, ಸ್ವಿಮ್ಮಿಂಗ್ ಪೂಲ್, ಥಿಯೇಟರ್, ಬಾರ್, ರೆಸ್ಟೋರೆಂಟ್, ಆಡಿಟೋರಿಯಂ
-ಲಿಕ್ಕರ್ ಶಾಪ್
-ಬೊಟಿಕ್, ಬ್ಯೂಟಿ ಪಾರ್ಲರ್ ಗಳು ತೆರೆದಿರುವುದಿಲ್ಲ.