ಲಿಂಗತ್ವ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ವಿವಿಧ ಸೌಲಭ್ಯ-ಜಿಲ್ಲಾಧಿಕಾರಿ ಜಗದೀಶ್

Spread the love

ಲಿಂಗತ್ವ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ವಿವಿಧ ಸೌಲಭ್ಯ-ಜಿಲ್ಲಾಧಿಕಾರಿ ಜಗದೀಶ್

ಉಡುಪಿ: ಜಿಲ್ಲೆಯಲ್ಲಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ನೆರವು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.
ಅವರು ಗುರುವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಲಿಂಗತ್ವ ಅಲ್ಪ ಸಂಖ್ಯಾತರ ಅಭಿವೃದ್ದಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿನ ಲಿಂಗತ್ವ ಅಲ್ಪಸಂಖ್ಯಾತರಲ್ಲಿ ಉದ್ಯೋಗ ಮತ್ತು ಸ್ವ ಉದ್ಯೋಗ ಮಾಡಲು ಇಚ್ಚಿಸುವವರು ಒಂದು ವಾರದ ಒಳಗೆ ತಮ್ಮ ಪಟ್ಟಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿ, ಉದ್ಯೋಗ ಮತ್ತು ಸ್ವ-ಉದ್ಯೋಗ ಮಾಡಲು ಅವಕಾಶಗಳನ್ನು ಕಲ್ಪಿಸುವುದಾಗಿ ಹೇಳಿದರು. ಮನೆ ನಿವೇಶನದ ಅಗ್ಯವಿರುವವರು ಯಾವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಗತ್ಯ ಇದೆ ಎನ್ನುಗಿ ಪಟ್ಟಿಯನ್ನು ನೀಡುವಂತೆ ತಿಳಿಸಿದ ಅವರು, ಈಗಾಗಲೇ ಜಿ.ಪಂ. ನಿಂದ ವಸತಿ ರಹಿತರು ಮತ್ತು ನಿವೇಶನ ರಹಿತರ ಪಟ್ಟಿ ಸಿದ್ದಪಡಿಸಿ, 75 ಎಕ್ರೆ ಭೂಮಿಯನ್ನು ಗುರುತಿಸಲಾಗಿದೆ, ಜಿಲ್ಲೆಯಲ್ಲಿ ಇನ್ನೂ 75 ಎಕ್ರೆ ಜಾಗ ಗುರುತಿಸುವ ಕಾರ್ಯ ನಡೆಯಲಿದ್ದು, ಪಟ್ಟಿ ನೀಡಿದಲ್ಲಿ ವಿಶೇಷ ವರ್ಗದಲ್ಲಿ ಅವಕಾಶ ನೀಡಲಾಗುವುದು ಎಂದರು.

ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಸಮಾಜದಲ್ಲಿ ಮತ್ತು ಪೋಷಕರಲ್ಲಿ ಅರಿವು ಮೂಡಿಸುವ ಸಲುವಾಗಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು, ಪೊಲೀಸ್ ಇಲಾಖೆಗೆ ಈ ಬಗ್ಗೆ ಪ್ರತ್ಯೇಕ ಕಾರ್ಯಗಾರ ಏರ್ಪಡಿಸಲಾಗುವುದು, ಮೈತ್ರಿ ಯೋಜನೆಯಲ್ಲಿ ಎಲ್ಲಾ ಲಿಂಗತ್ವ ಅಲ್ಪ ಸಂಖ್ಯಾತರ ಪ್ರಯೋಜನ ಪಡೆಯುವಂತೆ ತಿಳಿಸಿದ ಡಿಸಿ, ಎಲ್ಲಾ ತಹಸೀಲ್ದಾರ್ಗಳು ಈ ಬಗ್ಗೆ ಗಮನಹರಿಸುವಂತೆ ಮತ್ತು ಶೀಘ್ರದಲ್ಲಿ ಅವರಿಗೆ ಗುರುತು ಚೀಟಿ ವಿತರಣೆಯನ್ನು ಮಾಡುವಂತೆ ಸೂಚಿಸಿದರು.

ಲಿಂಗತ್ವ ಅಲ್ಪ ಸಂಖ್ಯಾತರು ಮುಖ್ಯವಾಹಿನಿಯಲ್ಲಿ ಬಾಳಲು ಜಿಲ್ಲಾಡಳಿತದಿಂದ ಎಲ್ಲಾ ಅಗತ್ಯ ನೆರವು ನೀಡಲಾಗುವುದು ಆದರೆ ಜಿಲ್ಲೆಯ ಟೋಲ್ಗಳಲ್ಲಿ ಅನಗತ್ಯವಾಗಿ ನಾಗರೀಕರಿಗೆ ಹಾಗೂ ವಾಹನಗಳಿಗೆ ತೊಂದರೆ ನೀಡುವ ಲಿಂಗತ್ವ ಅಲ್ಪಸಂಖ್ಯಾಂತರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದ ಡಿಸಿ, ಅಂತವರ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಹಾಗೂ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಲಿಂಗತ್ವ ಅಲ್ಪ ಸಂಖ್ಯಾತರಿಂದ ಅವರಿಗೆ ತೊಂದರೆಯಾದರೆ ಇಡೀ ಜಿಲ್ಲೆಗೆ ಕೆಟ್ಟ ಹೆಸರು ಬರಲಿದೆ, ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ಒಳ್ಳೆಯ ಭಾವನೆ ಬರುವ ರೀತಿಯಲ್ಲಿ ವರ್ತಿಸುವಂತೆ ತಿಳಿಸಿದ ಅವರು, ಜಿಲ್ಲೆಯಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರ ಸರ್ವೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ, 2019-20 ರಲ್ಲಿ ಧನಶ್ರೀ ಯೋಜನೆ, ಲಿಂಗತ್ವ ಅಲ್ಪ ಸಂಖ್ಯಾತರ ಪುರ್ನವಸತಿ ಯೋಜನೆ ಹಾಗೂ ಉದ್ಯೋಗಿನಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಲಿಂಗತ್ವ ಅಲ್ಪ ಸಂಖ್ಯಾತರ ಆಯ್ಕೆ ಪ್ರಕ್ರಿಯೆ ನಡೆಯಿತು.

ಶಾಸಕ ರಘುಪತಿ ಭಟ್ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರು ಸಮಾಜದಲ್ಲಿ ಹೊಂದಿಕೊಂಡು ಹೋಗಬೇಕು, ಹೊರ ಜಿಲ್ಲೆಯಿಂದ ಬಂದು ಇಲ್ಲಿನ ಟೋಲ್ಗಳಲ್ಲಿ ಸಮಸ್ಯೆ ಉಂಟು ಮಾಡುವ ಹಾಗೂ ಅನೈತಿಕ ಚಟುವಟಿಕೆ ನಡೆಸುವವರ ಕುರಿತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದರು.

ಸಭೆಯಲ್ಲಿ ಬೆಂಗಳೂರಿನ ಪಯಣ ಸಂಘಟನೆಯ ಚಾಂದಿನಿ, ಜಿಲ್ಲೆಯ ಲಿಂಗತ್ವ ಅಲ್ಪಸಂಖ್ಯಾತರ ಪರವಾಗಿ ಸಂಜೀವ ವಂಡ್ಸೆ ಮತ್ತಿತರರು ಸಮುದಾಯದ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಿದರು.

ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಎಎಸ್ಪಿ ಕುಮಾರ ಚಂದ್ರ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love