ಲಿಂಗತ್ವ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೌಶಲ್ಯ ತರಬೇತಿ ಮಾಹಿತಿ ಕಾರ್ಯಗಾರ
ಮಂಗಳೂರು: ಲಿಂಗತ್ವ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಲಿಂಗತ್ವ ಅಲ್ಪಸಂಖ್ಯಾತರಿಗೆ ಸ್ವ-ಉದ್ಯೋಗಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಬುಧವಾರ ದಕ ಜಿಲ್ಲಾಪಂಚಾಯತಿನ ಸಭಾಂಗಣದಲ್ಲಿ ಕೌಶಲ್ಯ ತರಬೇತಿ ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಗಾರದಲ್ಲಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಶಿವಕುಮಾರ್ ಮಗದ ಅವರು ಲಿಂಗತ್ವ ಅಲ್ಪಸಂಖ್ಯಾತರು ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳಲು ಪೂರಕವಾಗುವ ಕೃಷಿ ಆಧಾರಿತ ಸ್ವ ಉದ್ಯೋಗಗಳನ್ನು ಕೈಗೊಳ್ಳಲು ಸಾಧ್ಯವಾಗುವಂತೆ ಜಾಗದ ವ್ಯವಸ್ಥೆಯೊಂದಿಗೆ ಉತ್ಪಾದನಾ ಘಟಕಕ್ಕೆ ನಗರ ಕೃಷಿ ವಿಜ್ಞಾನ ಕೇಂದ್ರದಲ್ಲಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಯಾವುದೇ ಬಂಡವಾಳವಿಲ್ಲದೆ, ಯಾವುದೇ ವಿದ್ಯಾರ್ಹತೆಯ ಅಗತ್ಯವೂ ಇಲ್ಲದೆ ಹೈನುಗಾರಿಕೆ, ಅಣಬೆ ಕೃಷಿ, ಕೃಷಿ ಉತ್ಪನ್ನಗಳ ತಯಾರಿ, ಬೇಕರಿ ಖಾದ್ಯಗಳು, ಅಲಂಕಾರಿಕ ಮೀನು ಸಾಕಾಣೆ ಮೊದಲಾದ ಸ್ವ ಉದ್ಯೋಗಗಳನ್ನು ಮಾಡಲು ಸಾಧ್ಯ ಎಂದು ಅವರು ಮಾಹಿತಿ ನೀಡಿದರು.
ಈ ವೇಳೆ ತಮ್ಮ ಸಂದೇಹಗಳನ್ನು ಹಂಚಿಕೊಂಡ ಸಂಜನಾ ಅವರು ”ನಾವಿರುವುದೇ ಬಾಡಿಗೆ ಮನೆಯಲ್ಲಿ. ಆ ಬಾಡಿಗೆ ಹಣವನ್ನೂ ಕೊಡಲು ನಮಗೆ ಕಷ್ಟಸಾಧ್ಯವಾಗುತ್ತಿದೆ. ಮಾತ್ರವಲ್ಲದೆ, ನಮಗೆ ಪ್ರತ್ಯೇಕವಾಗಿ ನಗರದಲ್ಲಿ ಯಾರೂ ಬಾಡಿಗೆ ಮನೆಯನ್ನು ನೀಡಲು ಕೂಡಾ ಹಿಂದೆ ಮುಂದೆ ನೋಡುತ್ತಾರೆ. ಇಂತಹ ವ್ಯವಸ್ಥೆಯಲ್ಲಿ ನಾವು ಈ ರೀತಿಯ ಅಣಬೆ ಕೃಷಿ, ಹೈನುಗಾರಿಕೆಗೆ ಮುಂದಾದರೆ ಜಾಗಕ್ಕೇನು ಮಾಡುವುದು?” ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಾ.ಶಿವಾನಂದ ಮಗದ, ”ನೀವು ಮುಂದೆ ಬಂದಲ್ಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಉತ್ಪನ್ನಗಳ ತಯಾರಿ ಹಾಗೂ ಉತ್ಪಾದನಾ ಘಟಕಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು. ತರಬೇತಿ ಹಾಗೂ ಉತ್ಪಾದನೆಯ ಸಂದರ್ಭದಲ್ಲಿ ಅಲ್ಲಿ ವಾಸ್ತವ್ಯಕ್ಕೂ ವ್ಯವಸ್ಥೆ ಇದೆ. ಬರೀ ಕೈನಲ್ಲಿ ಬಂದರೂ ಕಚ್ಚಾ ವಸ್ತುಗಳಿಗೆ ಮೂಲಬಂಡವಾಳಕ್ಕೂ ವ್ಯವಸ್ಥೆ ಮಾಡಲಾಗುವುದು. ಬೇಕಿದ್ದಲ್ಲಿ ನಿಮ್ಮದೇ ಆದ ‘ಪರಿವರ್ತನಾ’ ಬ್ರಾಂಡ್ ಹೆಸರಿನಲ್ಲಿಯೇ ನೀವು ಬಯಸುವ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಬಹುದು” ಎಂದು ಸಲಹೆ ನೀಡಿದರು.
ಈ ಹಿಂದೆ ರಾಜ್ಯ ಸರಕಾರವು ಮಹಿಳೆಯರಿಗಾಗಿಯೇ ಜಾರಿಗೆ ತಂದಿರುವ ಸವಿರುಚಿ ಕೈತುತ್ತು ಕ್ಯಾಂಟೀನ್‌ಗೆ ಭಾರೀ ಬೇಡಿಕೆ ಇದೆ. ಶುಚಿತ್ವದೊಂದಿಗೆ ಆಧುನಿಕ ವೈಜ್ಞಾನಿಕ ಕ್ಯಾಂಟೀನ್ ಇದಾಗಿದ್ದು, ಅಡುಗೆಯಲ್ಲಿ ಆಸಕ್ತಿ ಹೊಂದಿರುವ ಲಿಂಗತ್ವ ಅಲ್ಪಸಂಖ್ಯಾತರು ಈ ಯೋಜನೆಯಲ್ಲಿ ತೊಡಗಿಕೊಳ್ಳಲು ಅವಕಾಶ ಕಲ್ಪಿಸಬಹುದು” ಎಂದು ಶಿವಾನಂದ ಮಗದ ತಿಳಿಸಿದರು.
ಈಸಂದರ್ಭ ಪ್ರತಿಕ್ರಿಯಿಸಿದ ಲಿಂಗತ್ವ ಅಲ್ಪಸಂಖ್ಯಾತರೊಬ್ಬರು, ”ನಾವೇನೋ ಚೆನ್ನಾಗಿ ಅಡುಗೆ ಮಾಡುತ್ತೇವೆ. ಆದರೆ ನಾವು ಮಾಡಿರುವ ಅಡುಗೆಯನ್ನು ತಿನ್ನುವವರು ಬೇಕಲ್ಲ. ಸಮಾಜ ಇನ್ನೂ ನಮ್ಮನ್ನು ಸ್ವೀಕರಿಸದಿರುವಾಗ, ನಮ್ಮ ಅಡುಗೆಯನ್ನು ಸ್ವೀಕರಿಸದಿದ್ದರೆ ಏನು ಪ್ರಯೋಜನ” ಎಂದು ಬೇಸರಿಸಿದರು.
ಸರಕಾರಿ ಪ್ರಾಯೋಜಿತ ಕಾರ್ಯಕ್ರಮಗಳಿಗೆ ಪರಿವರ್ತನಾ ಟ್ರಸ್ಟ್‌ನಡಿ ಲಿಂಗತ್ವ ಅಲ್ಪಸಂಖ್ಯಾತರು ತಯಾರಿಸುವ ಊಟ-ತಿಂಡಿ, ಟಿಫನ್‌ಗೆ ಅವಕಾಶ ಕಲ್ಪಿಸುವ ಮೂಲಕ ಹೊಸ ಅವಕಾಶಕ್ಕೆ ನಾಂದಿ ಹಾಡಬಹುದಾಗಿದೆ. ಪರಿವರ್ತನೆ ಸಮಾಜವೂ ಆಗಬೇಕಾಗಿದೆ. ಹಾಗಾಗಿ ಸರಕಾರಿ ವ್ಯವಸ್ಥೆಯ ಮೂಲಕವೇ ಪರಿವರ್ತನೆ ಆರಂಭಿಸೋಣ ಎಂದು ಸಲಹೆ ನೀಡಿದರು.
ಪರಿವರ್ತನಾ ಚಾರೀಟೇಬಲ್ ಟ್ರಸ್ಟ್‌ನ ಸ್ಥಾಪಕರು ಹಾಗೂ ಮುಖ್ಯಸ್ಥರೂ ವೈಲೆಟ್ ಪಿರೇರ ಹಾಗೂ ಸುಮಾರು 20ಕ್ಕೂ ಅಧಿಕ ಲಿಂಗತ್ವ ಅಲ್ಪಸಂಖ್ಯಾತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.