ಲೇಕ್ 2016′- ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ
ಮೂಡುಬಿದಿರೆ: ಮಾನವನ ಅಪರಿಮಿತ ಸ್ವಾರ್ಥ ಹಾಗೂ ನಿರಂತರ ಪ್ರಕೃತಿಯ ಶೋಷಣೆ ನಮ್ಮೆಲ್ಲಾ ತೊಂದರೆಗಳಿಗೆ ಮೂಲಕಾರಣ. ಅತಿಸೂಕ್ಷ್ಮ ಜೀವವೈವಿದ್ಯ ಪ್ರದೇಶ ಎಂದು ಗುರುತಿಸಿರುವ ಪಶ್ಚಿಮ ಘಟ್ಟ ಭಾರತದ ಒಟ್ಟು ಭೂಭಾಗದ 2.5% ಶೇಕಡಾದಷ್ಟಿದೆ, ಆದರೆ ಈ ಸಣ್ಣ ಭೂಪ್ರದೆಶವನ್ನೂ ರಕ್ಷಿಸಲು ಸಾಧ್ಯವಾಗದೇ ಇರುವುದು ನಮ್ಮ ವೈಫಲ್ಯ ಎಂದು ಐ.ಐ ಎಸ್ ಸಿ ಬೆಂಗಳೂರು ಮುಖ್ಯಸ್ಥ ಡಾ.ಟಿ.ವಿ.ರಾಮಚಂದ್ರ ಎಂದು ಹೇಳಿದರು.
ಅವರು ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಇಂಧನ ಮತ್ತು ತೇವಾಂಶ ಸಂಶೋಧನಾ ಕೇಂದ್ರ (ಎನರ್ಜಿ & ವೆಟ್ಲ್ಯಾಂಡ್ ರಿಸರ್ಚ ಗ್ರೂಪ್) ಪರಿಸರ ವಿಜ್ಞಾನಗಳ ಕೇಂದ್ರ, ಭಾರತೀಯ ವಿಜ್ಞಾನÀ ಸಂಸ್ಥೆ, ಬೆಂಗಳೂರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದಿರೆ, ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ಮಿಜಾರು, ಆಳ್ವಾಸ್ ಕಾಲೇಜು, ವಿದ್ಯಾಗಿರಿ ಇವರ ಸಂಯುಕ್ತ ಆಶ್ರಯದಲ್ಲಿ, ನಡೆದ ನಾಲ್ಕು ದಿನಗಳ ‘ಲೇಕ್ 2016’- ಅಂತಾರಾಷ್ಟ್ರೀಯ ವಿಚಾರ ಸಂಕಿರಣ- ”ಪಶ್ಚಿಮ ಘಟ್ಟದ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ” ಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತವಾಗಿರುವ ಪಶ್ಚಿಮ ಘಟ್ಟ ಉಳಿವಿಗೆ ಯುವಜನತೆ ಕೈ ಜೋಡಿಸಬೇಕಾಗಿದೆ. ಯುವಜನತೆಯು ಶುದ್ಧ ನೀರು, ಗಾಳಿ, ಪರಿಸರಕ್ಕಾಗಿ ಹೋರಾಡಬೇಕಾಗಿದೆ . ಭೂಮಿತಾಯಿಗೆ ಹಸಿರು ಸೀರೆ ಉಡಿಸುವ ಪ್ರಯತ್ನ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಭೈರಪ್ಪ ಇಂತಹ ಕಾರ್ಯಕ್ರಮಗಳು ಸಾರ್ವಜನಿಕರಲ್ಲಿ ಹಾಗೂ ಮಕ್ಕಳಲ್ಲಿ ಜಾಗೃತೆ ಮೂಡಿಸುವಲ್ಲಿ ಸಹಕಾರಿಯಾಗಿವೆ ಎಂದರು. ಪರಿಸರ, ಜೀವ ವೈವಿಧ್ಯ ಹಾಗೂ ಇಂಧನ ಪ್ರಾಕೃತಿಕ ಸಮತೋಲನದ ಮುಖ್ಯ ಅಂಶಗಳು. ಆದರೆ ಇವೇ ಮುಖ್ಯ ಬುನಾದಿಗಳು ಅಳಿವಿನ ಅಂಚಿನಲ್ಲಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಪರಿಸರವು ಮಾನವ ನಿರ್ಮಿತ ಹಾಗೂ ಪ್ರಾಕೃತಿಕ ವಿಕೋಪಗಳಿಂದಾಗಿ ನಿರಂತರವಾಗಿ ವಿನಾಶದತ್ತ ಸಾಗುತ್ತಿದೆ ಎಂದ ಅವರು, ಸೌರಶಕ್ತಿ, ಪವನ ಶಕ್ತಿ, ಮಳೆಯಿಂದ ಸಂಪತ್ಭರಿತವಾಗಿದ್ದು, ಇವುಗಳ ಸಮರ್ಪಕ ಬಳಕೆ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಆಶೀರ್ವಚನವನ್ನು ನೀಡಿದ ಜೈನ ಮಠದ ಸ್ವಸ್ಥಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮಿಜಿ ಯವರು ಕಾಡು, ನಾಗರ ಬನ,ಕೆರೆಗಳ ಅಳಿವು ಉಳಿವುಗಳ ಬಗ್ಗೆ ಚಿಂತನೆ ಆಗಬೇಕು ಹಾಗೂ ಪರಿಸರ ಸ್ನೇಹಿ ಆರ್ಥಿಕ ವಲಯ ರೂಪಿಸಬೇಕು ಎಂದರು.
ಶಿರಸಿ ಸೋಂದೆ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜಿಯವರು ಮಾತನಾಡಿ, ಪರಿಸರ ವಿರೋಧಿ ಚಟುವಟಿಕೆಯನ್ನು ಸರ್ಕಾರ ಸ್ವಾಗತಿಸುವುದು ಖಂಡನೀಯ, ನೇತ್ರಾವತಿ ತಿರುವು ವಿರೋಧಿ ಚಳುವಳಿ ಬಗ್ಗೆ ನಮ್ಮ ಬೆಂಬಲವಿದೆ ಎಂದರು, ನಗರೀಕರಣ, ಕೈಗಾರೀಕರಣ ದಿಂದಾಗಿ ಕೆರೆ ಒತ್ತುವರಿಯಾಗುತ್ತಿದೆ, ಕೆರೆ ಒತ್ತುವರಿ ವಿರುದ್ಧ ಕಾನೂನು ಇದ್ದರೂ , ಅದು ಕ್ರಿಯಾಶೀಲವಾಗಿರದೇ, ಅತಿಕ್ರಮಿಸಿದವರಿಗೆ ಜಯವಾಗುತ್ತಿದೆ. ಕೆರೆಗಳ ಮೇಲ್ಬಾಗದಲ್ಲಿ ಹಸಿರೀಕರಣ ಹಾಗೂ ನೀರಿಂಗಿಸಿದರೆ ಅಂರ್ತಜಲದ ಮಟ್ಟ ಹೆಚ್ಚಾಗಿ ಪ್ರಕೃತಿಯ ಸಮತೋಲನ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪರಿಸರ ವಿಜ್ಞನಿ ಗೋಪಾಲಕೃಷ್ಣ ಭಟ್, ಜೈವಿಕಶಾಸ್ತ್ರಜ್ಞ ವಿಷ್ಣು ಮಕ್ರಿ ಹಾಗು ವಾಗ್ಧೇವಿ ಫೌಂಡೇಶನ್ನ ಸಿ ಇ ಓ ಆಗಿರುವ ಹರೀಶ್ ಕೃಷ್ಣಮೂರ್ತಿ, ಕೆ.ಕೆ ಇಂಗ್ಲೀಷ್ ಮಿಡಿಯಮ್ ಹೈ ಸ್ಕೂಲ್ನ ಶಿಕ್ಷಕಿಯಾಗಿರುವ ಅಲ್ಲಿ ರಾಣಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ವಹಿಸಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕುರಿಯನ್, ಪರಿಸರ ತಜ್ಞ ಸುರೇಶ್ ಹೆಬ್ಲಿಕರ್, ಶಾಸಕ ಅಭಯಚಂದ್ರ ಜೈನ್ ಉಪಸ್ಥಿತರಿದ್ಧರು. ಸಮ್ಮೇಳನದಲಿ ಐಐಎಸ್ಸಿ, ಐಐಟಿ ಮತ್ತು ಇನ್ನಿತರ ಶಾಲಾ ಕಾಲೇಜಿನ ಒಟ್ಟು 1200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.