ಲೈಂಗಿಕ ದೌರ್ಜನ್ಯ ಪದ ಬಳಕೆಗೆ ಸೂಚನೆ : ಎ.ಸಿ. ರೇಣುಕಾ ಪ್ರಸಾದ್
ಮಂಗಳೂರು : ಪೋಲಿಸ್ ಇಲಾಖೆಯ ವರದಿಯಲ್ಲಿ “ಅತ್ಯಾಚಾರ” ಎಂಬ ಪದ ಬಳಕೆ ಬದಲಿಗೆ ‘ಲೈಂಗಿಕ ದೌರ್ಜನ್ಯ’ ಎಂಬ ಪದವನ್ನು ಬಳಸಿ ಎಂದು ಸಹಾಯಕ ಆಯುಕ್ತ ಎ.ಸಿ. ರೇಣುಕಾ ಪ್ರಸಾದ್ ಹೇಳಿದರು.
ಅವರು ಜನವರಿ 29 ರಂದು ಆಯುಕ್ತರ ಕಛೇರಿಯಲ್ಲಿ ಕಂದಾಯ ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ದೌರ್ಜನ್ಯ ಪ್ರಕರಣದ ಕುರಿತು ಮಾತನಾಡುತ್ತ ಅತ್ಯಾಚಾರ ನಡೆದಂತಹ ಮಹಿಳೆಯನ್ನು ಮಾನಸಿಕವಾಗಿ ಕುಗ್ಗಿಸಿದಂತಾಗುತ್ತದೆ. ಈ ಕಾರಣಕ್ಕಾಗಿ ಅತ್ಯಾಚಾರ ಪದ ಬಳಕೆ ಬೇಡ. ಲೈಂಗಿಕ ದೌರ್ಜನ್ಯ ಎಂದೇ ವರದಿಯಲ್ಲಿ ನಮೂದಿಸಿ ಎಂದು ಹೇಳಿದರು.
ಪೋಲಿಸ್ ಇಲಾಖೆಯು ತಮ್ಮ ವರದಿಯನ್ನು ಪ್ರತಿ ವಾರಕ್ಕೊಮ್ಮೆ ಪರಿಷ್ಕರಿಸಿದ ವರದಿಯನ್ನು ಸಮಾಜ ಕಲ್ಯಾಣ ಇಲಾಖೆ ನೀಡುವಂತೆ ಸೂಚಿಸಿದರು. ದಾಖಲಾದ ಪ್ರಕರಣಗಳು ತನಿಖೆಯ ಯಾವ ಹಂತದಲ್ಲಿದೆ ಎಂದು ಸ್ಪಷ್ಟ ರೀತಿಯಲ್ಲಿ ವರದಿಯನ್ನು ನೀಡುವಂತೆ ಸೂಚಿಸಿದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಎಸ್.ಸಿ.ಪಿ ಯೋಜನೆಯಡಿಯ ಕಾಮಗಾರಿಗಳನ್ನು ಮಾರ್ಚ್ಗೆ ಮೋದಲೇ ಕೆಲಸವನ್ನು ಮುಗಿಸಿಕೊಳ್ಳುವಂತೆ ಹೇಳಿದರು. ಎಲ್ಲಾ ಇಲಾಖೆಗಳು ವ್ಯಯಿಸಿದ ವೆಚ್ಚದ ಕುರಿತು ಸರಿಯಾದ ದಾಖಲೆಗಳನ್ನು ನಿರ್ವಹಿಸಬೇಕು, ಮುಂದಿನ ಜಿಲ್ಲಾ ಮಟ್ಟದ ಸಭೆಗೆ ಪರಿಷ್ಕರಿಸಿದ ವರದಿ ಜೊತೆ, ದಾಖಲೆಗಳನ್ನು ಸರಿಯಾಗಿ ನಿರ್ವಹಿಸುವಂತೆ ರೇಣುಕಾ ಪ್ರಸಾದ್ ಹೇಳಿದರು.
ಸಭೆಯಲ್ಲಿ ಮೂಡಬಿದ್ರೆ ತಹಶೀಲ್ದಾರ್ ಮಹಮ್ಮದ್ ಇಸಾಕ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಸುನಿತಾ ಮತ್ತು ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.