ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯಲ್ಲಿ ಸರ್ಕಾರ ಸೂಜಿ ಮೊನೆಯಷ್ಟೂ ಮಧ್ಯಪ್ರವೇಶ ಮಾಡಲ್ಲ – ಸಿದ್ದರಾಮಯ್ಯ
ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳ ಬಗ್ಗೆ ತನಿಖೆ ನಡೆಸಲು ರಚಿಸಲಾದ ವಿಶೇಷ ತನಿಖಾ ತಂಡ ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತತನದಿಂದ ತನಿಖೆ ನಡೆಸಲಿದ್ದು, ಇದರಲ್ಲಿ ರಾಜ್ಯ ಸರ್ಕಾರ ಒಂದು ಸೂಜಿಯ ಮೊನೆಯಷ್ಟೂ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರುಎಸ್ ಐಟಿ ಎನ್ನುವುದು ರಿಮೋಟ್ ಕಂಟ್ರೋಲ್ ಮೇಲೆ ಕೆಲಸ ಮಾಡುತ್ತಿದೆ. ಅದು ಸರ್ಕಾರದ ರಬ್ಬರ್ ಸ್ಟಾಂಪ್’ಎಂದು ಬಿಜೆಪಿ ನಾಯಕ ದೇವರಾಜೇಗೌಡರ ಆರೋಪ ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದೆ. ಇದು ಅಪರಾಧಿಗಳನ್ನು ರಕ್ಷಿಸುವ ದುರುದ್ದೇಶದಿಂದ ತನಿಖೆಯ ಹಾದಿ ತಪ್ಪಿಸಲು ಮಾಡಿರುವ ಕುತಂತ್ರವಾಗಿದೆ.
ಎಸ್ಐಟಿ ಸಂಪೂರ್ಣವಾಗಿ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ. ತಪ್ಪಿತಸ್ಥರು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ಈ ಉದ್ದೇಶದಿಂದಲೇ ಆಯ್ದ ದಕ್ಷ ಅಧಿಕಾರಿಗಳನ್ನು ಸೇರಿಸಿಕೊಂಡು ಎಸ್ ಐಟಿ ರಚಿಸಲಾಗಿದೆ.
ಈ ಪ್ರಕರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಹಾಳಾಗುತ್ತಿದೆ ಎಂದು ಬಿಜೆಪಿ ನಾಯಕರು ಈಗ ಗೋಳಾಡುವುದರಿಂದ ಏನೂ ಪ್ರಯೋಜನವಾಗದು, ಜೆಡಿ(ಎಸ್) ಜೊತೆ ಮೈತ್ರಿ ಮಾಡಿಕೊಡುವಾಗಲೇ ಇದನ್ನು ಯೋಚನೆ ಮಾಡಬೇಕಾಗಿತ್ತು.
ಎಸ್ಐಟಿ ತನಿಖೆಯ ಯಶಸ್ಸು ಈಗ ಸಂಪೂರ್ಣವಾಗಿ ಕೇಂದ್ರ ಸರ್ಕಾರ ನೀಡುವ ಸಹಕಾರವನ್ನು ಅವಲಂಬಿಸಿದೆ. ವಿದೇಶದಲ್ಲಿದ್ದಾನೆ ಎಂದು ಹೇಳಲಾದ ಆರೋಪಿ ಪ್ರಜ್ವಲ್ ರೇವಣ್ಣನವರನ್ನು ಭಾರತಕ್ಕೆ ಕರೆತರಲು ಸಹಕಾರ ನೀಡಬೇಕಾಗಿರುವುದು ಕೇಂದ್ರ ಸರ್ಕಾರ. ಜೆಡಿಎಸ್ ಜೊತೆ ಈಗಲೂ ರಾಜಕೀಯ ಮೈತ್ರಿ ಹೊಂದಿರುವ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.