ವಚನ ಸಾಹಿತ್ಯಕ್ಕೆ ಅಂಬಿಗರ ಚೌಡಯ್ಯನವರ ಕೊಡುಗೆ ಅಪಾರ : ಡಾ. ಮೀನಾಕ್ಷಿ ರಾಮಚಂದ್ರ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ವತಿಯಿಂದ 2018-19 ನೇ ಸಾಲಿನ ವಚನಸಾರ ಪ್ರಸರಣೋಪನ್ಯಾಸ ಕಾರ್ಯಕ್ರಮದ ಮೊದಲನೆ ವಿಶೇಷ ಉಪನ್ಯಾಸ ವಚನ ಸಾಹಿತ್ಯದಲ್ಲಿ ಅನುಭವದ ನೆಲೆಗಳು ಎಂಬ ಶಿರ್ಷೀಕೆಯ ಅಡಿಯಲ್ಲಿ ಫೆಬ್ರವರಿ 22 ರಂದು ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರು ಇಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ಮೀನಾಕ್ಷಿ ರಾಮಚಂದ್ರ ಮುಖ್ಯಸ್ಥರು, ಕನ್ನಡ ವಿಭಾಗ, ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು ಇವರು ವಚನ ಸಾಹಿತ್ಯಕ್ಕೆ ಅಂಬಿಗರ ಚೌಡಯ್ಯನವರ ಕೊಡುಗೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
12ನೆ ಶತಮಾನದ ಕಾಲ ಘಟ್ಟದಲ್ಲಿದ್ದ ದೋಷ, ತಾರತಮ್ಯ, ಮೌಢ್ಯ, ಕಂದಚಾರಗಳನ್ನು ನಾಶ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡವರು ವಚನಕಾರರು. ಈ ಜವಾಬ್ದಾರಿಗೆ ದೊಡ್ಡ ಕೊಡುಗೆಯನ್ನು ಅಂಬಿಗರ ಚೌಡಯ್ಯನವರು ನೀಡಿದ್ದಾರೆ. ಅಂಬಿಗರ ಚೌಡಯ್ಯ ತಪ್ಪು ಮಾಡಿದವರಿಗೆ ನೇರವಾಗಿ ನಾಟುವಂತೆ ಟೀಕಿಸುತ್ತಾನೆ. ವೀರಶೈವ ತತ್ವಗಳ ಕೆಲವೊಂದು ಲೋಪಗಳನ್ನು ಪ್ರಶ್ನಿಸಿದ್ದಾನೆ. ಅಂಬಿಗರ ಚೌಡಯ್ಯ ಬದುಕಿನಲ್ಲಿ ಮೌಢ್ಯಗಳಿಗೆ ಒಳಗಾಗದೆ ಮುಂದೆ ಸಾಗಿ ಎಂದು ಸಂದೇಶ ನೀಡುತ್ತಾರೆ. ಅಂಬಿಗರ ಚೌಡಯ್ಯನವರ ಪ್ರಕಾರ ಧರ್ಮ ಎಂದರೆ ಮಾನವೀಯತೆ, ಧರ್ಮಕ್ಕೆ ಹೆಸರಿಲ್ಲ ಪ್ರಸ್ತುತ ಸಮಾಜದಲ್ಲಿ ಧರ್ಮವನ್ನು ಒಂದು ಚೌಕಟ್ಟಿನೊಳಗೆ ಬಂಧಿಸಲಾಗಿದೆ. ಧರ್ಮವನ್ನು ನೋಡುವ ಪಾಲಿಸುವ ವಿಚಾರಗಳಲ್ಲಿ ಬದಲಾವಣೆಯಾಗಬೇಕೇಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಶ್ಯಾಮ್ ಭಟ್, ಪ್ರಭಾರ ಪ್ರಾಂಂಶುಪಾಲರು, ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರು ಸಮಾಜದ ಕುಂದು-ಕೊರತೆ, ಅನಿಷ್ಟಗಳನ್ನು ಹೋಗಲಾಡಿಸಲು ಶ್ರಮಿಸಿದವರಲ್ಲಿ ಅಂಬಿಗರ ಚೌಡಯ್ಯ ಶ್ರೇಷ್ಠ. ಅಂಬಿಗರ ಚೌಡಯ್ಯನವರ ವಿಚಾರಗಳು ಯುವ ಪೀಳಿಗೆಗೆ ತಲುಪುವಂತಾಗಲಿ ಎಂದು ಹೇಳಿದರು.
ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕರಾದ ಡಾ. ನಾಗಪ್ಪ ಗೌಡ .ಆರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಪೀಠದ ಧ್ಯೇಯೋದ್ದೇಶಗಳು ಮತ್ತು ಯೋಜನೆಗಳನ್ನು ಪರಿಚಯಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಬೇಬಿ ಇವರು ಸ್ವಾಗತಿಸಿದರು. ಕನ್ನಡ ಉಪನ್ಯಾಸಕರಾದ ಪ್ರಸಾದ್ ವಂದಿಸಿದರು. ವಿದ್ಯಾರ್ಥಿನಿ ವಿಸ್ಮಾ ದ್ವಿತೀಯ ಬಿ.ಎ ಕಾರ್ಯಕ್ರಮ ನಿರೂಪಿಸಿದರು.