ವಸತಿ ಸಹಿತ ನಾಲ್ಕು ದಿನಗಳ ಚಟುವಟಿಕೆ ಆಧಾರಿತ ‘ಉನ್ನತಿ -2024’ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರ

Spread the love

ವಸತಿ ಸಹಿತ ನಾಲ್ಕು ದಿನಗಳ ಚಟುವಟಿಕೆ ಆಧಾರಿತ ‘ಉನ್ನತಿ -2024’ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರ

ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ್ ಗೌಡ್ ಬ್ರಾಹ್ಮಣ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕುಡಾಳ್ ದೇಶ್ಕರ್ ಸಮುದಾಯದ ಸ್ನಾತಕೋತ್ತರ, ಇಂಜಿನಿಯರಿಂಗ್, ಪದವಿ ಮತ್ತು ತತ್ಸಮಾನ ವಿದ್ಯಾರ್ಥಿಗಳಿಗೆ ವಸತಿ ಸಹಿತ ನಾಲ್ಕು ದಿನಗಳ ಚಟುವಟಿಕೆ ಆಧಾರಿತ ‘ಉನ್ನತಿ -2024’ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರವನ್ನು ದಿ. 08-08-2024 ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಾಗಾರವನ್ನು ವಿಶ್ವ ಕೊಂಕಣಿ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಡಾಕ್ಟರ್ ಕಸ್ತೂರಿ ಮೋಹನ್ ಪೈ ಇವರು ದೀಪವನ್ನು ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ, “ಶಿಕ್ಷಣವೆಂದರೆ ಒಂದು ಮಗುವಿನ ಸರ್ವತೋಮುಖ ಅಭಿವೃದ್ಧಿ, ಇಲ್ಲಿ ಜ್ಞಾನಾತ್ಮಕ ವಲಯದ ಅಭಿವೃದ್ಧಿಯ ಜೊತೆಗೆ ಮನೋಜನ್ಯ ಕೌಶಲ್ಯಗಳು ಸಮಯಕ್ಕೆ ಅನುಗುಣವಾಗಿ ಬೆಳೆಸಿಕೊಳ್ಳಬೇಕು, ಮಾತೃ ಭಾಷೆ ಕೊಂಕಣಿಯು ನಮ್ಮ ಅಸ್ತಿತ್ವವನ್ನು ಗುರುತಿಸುವ ಜೊತೆಗೆ, ದೈಹಿಕ,ಮಾನಸಿಕ, ಉದ್ಯೋಗ, ಸೇವಾ ಉನ್ನತಿಗಳ ಜೊತೆಗೆ ಆತ್ಮ ಉನ್ನತಿಯೊಂದಿಗೆ ಪರಬ್ರಹ್ಮ ಉನ್ನತಿಯನ್ನು ಕಾಣಬಹುದು. ಇದು ನಮ್ಮಲ್ಲಿ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸುತ್ತದೆ, ಇಂತಹ ಶಿಬಿರಗಳು ಈ ರೀತಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ” ಎಂದು ಅಭಿವ್ಯಕ್ತ ಪಡಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿಎ ನಂದ ಗೋಪಾಲ ಶೆಣೈ, ಇವರು, “ಕೊಂಕಣಿ ಭಾಷೆಯು ನಮ್ಮ ವೈಯಕ್ತಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಗುರುತನ್ನು ಒಳಗೊಂಡಿದೆ. ಕೊಂಕಣಿ ಭಾಷೆಯನ್ನು ನಮ್ಮ ಸಂಪರ್ಕ ಭಾಷೆಯನ್ನಾಗಿಸಿದಾಗ ಭಾವನೆಗಳು, ಆಲೋಚನೆಗಳಿಂದ ಸಂಸ್ಕೃತಿ ಸಂಸ್ಕಾರವನ್ನು ಜೀವಂತವಾಗಿಡಲು ಸಾಧನವಾಗಿರುತ್ತದೆ. ಕೊಂಕಣಿ ಭಾಷೆಯು ನಮ್ಮ ಮಾತೃಭಾಷೆಯಾಗಿದ್ದು ತಾಯಿ ಬೇರಿನಂತೆ ನಮ್ಮ ಸಂಪ್ರದಾಯಗಳು ಸಾಂಸ್ಕೃತಿಕ ಮೌಲ್ಯಗಳು ನಮ್ಮ ಸಮುದಾಯದಲ್ಲಿ ಬೇರೂರುವಂತೆ, ನಮ್ಮ ಸಮುದಾಯದ ತಳಪಾಯವನ್ನು ಬಲಿಷ್ಠಗೊಳಿಸುತ್ತದೆ” ಎಂದು ಅಧ್ಯಕ್ಷಿಯ ಮಾತುಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಟ್ರಸ್ಟಿಗಳಾದ ಶ್ರೀ ಡಿ ರಮೇಶ ನಾಯಕ್ ಮೈರಾ ಅವರು ಪ್ರಸ್ತಾವಿಕ ಮಾತುಗಳನ್ನಾಡುತ್ತಾ, “ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವಕ್ಕಿಂತಲೂ ಕೌಶಲ್ಯ ಮತ್ತು ಬದುಕಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಮತ್ತು ಸಂಸ್ಕಾರಯುತ ಮೌಲ್ಯಗಳನ್ನು ಗೌರವಿಸಿ, ಉಳಿಸಿ, ಬೆಳೆಸುವ ತರಬೇತಿಯನ್ನು ನೀಡಲಾಗುವುದು, ಆದ್ದರಿಂದ ಎಲ್ಲರೂ ಇದರ ಸದುಪಯೋಗವನ್ನು ಪಡಕೊಳ್ಳಬೇಕು. ಕೊಂಕಣಿ ಸಮಾಜಕ್ಕೆ ಪ್ರತಿಯೊಬ್ಬರು ಸೇವೆ ಸಲ್ಲಿಸಬೇಕು, ಇದರಿಂದಾಗಿ ಸಮಾಜ ಅಭಿವೃದ್ಧಿ ಹೊಂದಿ ಸಮಾಜಕ್ಕೆ ಹಾಗೂ ದೇಶಕ್ಕೆ ಕೊಡುಗೆಗಳನ್ನು ನೀಡುವಂತಾಗಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಕೋಶಾಧಿಕಾರಿಗಳಾದ ಬಿ. ಆರ್. ಭಟ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, “ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳಲ್ಲಿ ಅಂಕ ಗಳಿಸುವುದರಿಂದ ಮಾತ್ರ ಬೆಳೆಯೋದಿಲ್ಲ ಅದರ ಜೊತೆಯಲ್ಲಿ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು, ಅಂಕಗಳೊಂದಿಗೆ ಕೌಶಲ್ಯ ಸೇರಿದಾಗ ಮಾತ್ರ ಅದು ಪರಿಪೂರ್ಣವಾಗುತ್ತದೆ. ಅದು ವಿದ್ಯಾರ್ಥಿಗಳ ಅಭಿವೃದ್ಧಿಗೆ ಪೂರಕವಾಗುತ್ತದೆ” ಎಂದು ಹೇಳಿದರು.

ಕೆಪಿಟಿಸಿಎಲ್ ಮಂಗಳೂರಿನ ಶ್ರೀ ರಾಘವೇಂದ್ರ ಶೆಣೈ ಡೆಚ್ಚಾರು ಅವರು ತಮ್ಮ ವಿದ್ಯಾರ್ಥಿ ಜೀವನದಿಂದ ವೃತ್ತಿ ಜೀವನಕ್ಕೆ ಕಾಲಿಟ್ಟ ಅನುಭವಗಳನ್ನು ಹೇಳುತ್ತಾ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು ಹಾಗೂ ಪ್ರತಿಷ್ಠಾನದ ಈ ಕಾರ್ಯಕ್ರಮವನ್ನು ಬಹಳ ಶಿಸ್ತುಬದ್ಧವಾಗಿ ನಿರ್ವಹಿಸುತ್ತಿರುವ ಸಂಘಟನೆಯನ್ನು ಅಭಿನಂದಿಸಿದರು.

ಶ್ರೀ ಬಾಲಕೃಷ್ಣ ಪ್ರಭು ಕೆಂಚಪಾಲು ಹಾಗೂ ಶೈಲಜಾ ಬಾಲಕೃಷ್ಣ ಪ್ರಭು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿ ಹಾರೈಸಿದರು. ಆರ್ಕಿಟೆಕ್ಟ್ ಶ್ರೀ ದಿವಾಕರ್ ಶೆಣೈ ಮರೋಳಿ ಹಾಗೂ ಸಿವಿಲ್ ಕಾಂಟ್ರಾಕ್ಟರ್ ಶಿವಪ್ರಸಾದ್ ನಾಯಕ್ ಮರೋಳಿ ಇವರು ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ವಿಜಯ ಶೆಣೈ ಕೊಡಂಗೆ, ಕಾರ್ಯದರ್ಶಿಗಳಾದ ಶ್ರೀ ಮುರಳಿಧರ ಪ್ರಭು ವಗ್ಗ, ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಶೆಣೈ ಕೂಡಿಬೈಲು, ಹಿರಿಯ ಮಾರ್ಗದರ್ಶಕರಾದ ಶ್ರೀ ಗೋಪಾಲ್ ಶೆಣೈ ಕೊಡಂಗೆ, ಸಂಜೀವ್ ಸಾಮಂತ್ ಮರೋಳಿ, ಅನಂತ ಪ್ರಭು ಮರೋಳಿ, ಶ್ರೀಮತಿ ಸುಜಾತ ರಮೇಶ್ ಸಾಮಂತ್, ರಂಜಿತಾ ಜಯರಾಮ್ ನಾಯಕ್, ಶ್ರೀಮತಿ ಸುಚಿತ್ರ ರಮೇಶ ನಾಯಕ್, ಮೋಹನ್ ನಾಯಕ್ ಒಡ್ಡೂರು , ಉಪೇಂದ್ರ ನಾಯಕ್, ಸುಧಾಕರ ಪ್ರಭು ಪೆರ್ಮರೋಡಿ, ರಾಮಕೃಷ್ಣ ಪ್ರಭು ಮಾರಿಬೆಟ್ಟು, ರವೀಂದ್ರ ನಾಯಕ್ ಕುಂಟಲ್ಪಾಡಿ ಮುಂತಾದವರು ಉಪಸಿತರಿದ್ದರು. ವಿಶ್ವ ಕೊಂಕಣಿ ಕೇಂದ್ರದ ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ದೇವದಾಸ್ ಪೈ ಅವರು ಶಿಬಿರಾರ್ಥಿಗಳಿಗೆ ಕಾರ್ಯಾಗಾರದ ಉದ್ದೇಶ ಮತ್ತು ಅಭಿ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಅನುಗೊಳಿಸಿದರು. ಪುರೋಹಿತರಾದ ಪ್ರಭಾಕರ್ ಭಟ್ ಇಡ್ಯಾ ಇವರು ಸಮಾಜದ ಮಠ, ಪರಂಪರೆ- ಸಂಪ್ರದಾಯಗಳನ್ನು ಸವಿವರವಾಗಿ ತಿಳಿಸಿದರು. ಡಾ. ವಿಜಯಲಕ್ಷ್ಮಿ ನಾಯಕ್ ಇವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳ ಜೊತೆಗೆ ಧನ್ಯವಾದವಿತ್ತರು.

ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದಯಾನಂದ ನಾಯಕ್ ಪುಂಜಾಲ್ ಕಟ್ಟೆ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು.


Spread the love