ವಾಟ್ ಎನ್ ಖತರ್ನಾಕ್ ಐಡಿಯಾ ಸರ್ ಜೀ! ಬೋರ್ ಆಗ್ತಿದೆ ಎಂದು ಸೂಟ್ ಕೇಸ್ ನಲ್ಲಿ ಗೆಳೆಯನ ಸಾಗಾಟ

Spread the love

ವಾಟ್ ಎನ್ ಖತರ್ನಾಕ್ ಐಡಿಯಾ ಸರ್ ಜೀ! ಬೋರ್ ಆಗ್ತಿದೆ ಎಂದು ಸೂಟ್ ಕೇಸ್ ನಲ್ಲಿ ಗೆಳೆಯನ ಸಾಗಾಟ

ಮಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ನಗರದ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ್ತವ್ಯ ಇರುವವರು ಬಿಟ್ಟು ಹೊರಗಿನಿಂದ ಬರುವವರಿಗೆ ಪ್ರವೇಶಕ್ಕೆ ಕೆಲವು ಕಡೆ ನಿರ್ಬಂಧ ವಿಧಿಸಲಾಗುತ್ತಿದೆ. ಆದರೆ ವಿದ್ಯಾರ್ಥಿಯೊಬ್ಬ ಸೂಟ್‌ಕೇಸ್‌ನಲ್ಲಿ ತುಂಬಿ ಕರೆತರಲು ಯತ್ನಿಸಿದ  ಪೊಲೀಸ್‌ ಠಾಣೆಗೆ ಹೋಗುವಂತಾಯಿತು.

ನಗರದ ಆರ್ಯಸಮಾಜ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಿದ್ಯಾರ್ಥಿ ವಾಸವಾಗಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ನ ಅಸೋಸಿಯೇಷನ್‌ನವರು, ಬಾಡಿಗೆಗೆ ಇರುವವರನ್ನು ಹೊರತುಪಡಿಸಿ ಬೇರೆಯ ವರಿಗೆ ಪ್ರವೇಶವನ್ನು ನಿರಾಕರಿಸಿದ್ದಾರೆ.

ಆದರೆ, ಈ ವಿದ್ಯಾರ್ಥಿ ಮಾತ್ರ ಗೆಳೆಯ ನನ್ನು ಕರೆತರುವುದಾಗಿ ಹೇಳುತ್ತಲೇ ಇದ್ದ. ಇದಕ್ಕೆ ಅಪಾರ್ಟ್‌ಮೆಂಟ್‌ನವರು ಅವಕಾಶ ನೀಡಿರಲಿಲ್ಲ. ಹಟ ಬಿಡದೇ ಭಾನುವಾರ ಬೆಳಿಗ್ಗೆ ಗೆಳೆಯನನ್ನು ಸೂಟ್‌ ಕೇಸ್‌ನಲ್ಲಿ ಅಡಗಿಸಿ ಕರೆದೊಯ್ಯುವ  ಪ್ರಯತ್ನವನ್ನು ಮಾಡಿದ್ದಾನೆ.

ಅಪಾರ್ಟ್‌ಮೆಂಟ್ ಒಳಗೆ ಪ್ರವೇಶಿ ಸುವ ಸಂದರ್ಭದಲ್ಲಿ ಸೂಟ್‌ಕೇಸ್‌ ಅಲುಗಾಡಿದೆ. ಇದನ್ನು ಅಲ್ಲಿನ ಕೆಲ ನಿವಾಸಿಗಳು ಗಮನಿಸಿದ್ದಾರೆ. ಸೂಟ್‌ ಕೇಸ್ ತೆರೆದು ತೋರಿಸುವಂತೆ ವಿದ್ಯಾರ್ಥಿಗೆ ಒತ್ತಾಯಿಸಿದ್ದಾರೆ. ಇಕ್ಕಟ್ಟಿಗೆ ಸಿಲುಕಿದ ಆತ ಸೂಟ್‌ಕೇಸ್ ಅನ್ನು ತೆರೆದಾಗ ಸ್ನೇಹಿತ ಒಳಗಿದ್ದುದು ಬಹಿರಂಗವಾಯಿತು. ಇಬ್ಬರೂ ವಿದ್ಯಾರ್ಥಿಗಳನ್ನು ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವರನ್ನು ಬಾಲ ನ್ಯಾಯ ಮಂಡಳಿ ಎದುರು ಹಾಜರು ಪಡಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ. ಪಿ.ಎಸ್‌ ಹರ್ಷ ತಿಳಿಸಿದ್ದಾರೆ.


Spread the love