ವಾರದೊಳಗೆ ಉಡುಪಿಯಲ್ಲಿ ನಕ್ಸಲ್ ತೊಂಬಟ್ಟು ಲಕ್ಷ್ಮಿ ಶರಣಾಗತಿ?
ಕುಂದಾಪುರ: ರಾಜ್ಯದಲ್ಲಿ ನಕ್ಸಲರ ಶರಣಾಗತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದೆ. ಉಡುಪಿ ಮೂಲದ ಆಂಧ್ರದಲ್ಲಿ ಸಕ್ರಿಯಳಾಗಿದ್ದ ನಕ್ಸಲ್ ಲಕ್ಷ್ಮಿ ತೊಂಬಟ್ಟು ಶರಣಾಗತಿ ಸಾಧ್ಯತೆ ಇದೆ ಎಂದು ಮಾಹಿತಿ ಲಭ್ಯವಾಗಿದೆ.
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರ ಸಮ್ಮುಖದಲ್ಲಿ ಶನಿವಾರ ಶರಣಾಗತರಾದ ಕರ್ನಾಟಕದ ಕೊನೆಯ ಭೂಗತ ನಕ್ಸಲ್ ಎನ್ನಲಾದ ಕೋಟೆಹೊಂಡ ರವೀಂದ್ರ ಅವರ ಶರಣಾಗತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ವಾಟ್ಸಪ್ ಗ್ರೂಪ್ನಲ್ಲಿ ಬಂದ ಪೋಸ್ಟ್ ಒಂದರಲ್ಲಿ ಈವರೆಗೆ ನಾಪತ್ತೆಯಾಗಿದ್ದ ನಕ್ಸಲ್ ತೊಂಬಟ್ಟು ಲಕ್ಷ್ಮೀ ಅವರೂ ಉಡುಪಿ ಅಥವಾ ಚಿಕ್ಕಮಗಳೂರಿನಲ್ಲಿ ಜಿಲ್ಲಾಡಳಿತದ ಮುಂದೆ ಶರಣಾಗತರಾಗಲಿದ್ದಾರೆ ಎಂಬ ಮಾಹಿತಿ ಬಂದಿತ್ತು. ಚಿಕ್ಕಮಗಳೂರಿನಲ್ಲಿ ಕೋಟೆಹೊಂಡ ರವೀಂದ್ರ ಅವರ ಶರಣಾಗತಿ ಸಂದರ್ಭದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ‘ತೊಂಬಟ್ಟು ಲಕ್ಷ್ಮೀ ಅವರು ಉಡುಪಿಯಲ್ಲಿ ಜಿಲ್ಲಾಡಳಿತದ ಮುಂದೆ ಶರಣಾಗತರಾಗಲಿದ್ದಾರೆ’ ಎಂದು ತಿಳಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಬರುತ್ತಿರುವ ಸುದ್ದಿಯನ್ನು ನೋಡಿರುವುದಾಗಿ ಆದರೆ ಶರಣಾಗತಿಯ ಕುರಿತಂತೆ ತಮಗಾಗಲೀ, ಇದುವರೆಗೆ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾವಾಸ್ಯೆಬೈಲು ಸಮೀಪದ ತೊಂಬಟ್ಟು ಗ್ರಾಮದ ನಿವಾಸಿಯಾಗಿರುವ ಲಕ್ಷ ಉಡುಪಿ ಅಥವಾ ಚಿಕ್ಕಮಗಳೂರಿನಲ್ಲಿ ಶರಣಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 2006 ಮಾರ್ಚ್ 6 ರಿಂದ ಕಣ್ಮರೆಯಾಗಿರುವ ಲಕ್ಷ್ಮಿ, ಮಾಜಿ ನಕ್ಸಲ್ ಸಂಜೀವ ಅಲಿಯಾಸ್ ಸಲೀಂ ಎಂಬಾತನನ್ನು ವಿವಾಹ ಆಗಿದ್ದಳು. ಸಂಜೀವ, ಸದ್ಯ ಮುಖ್ಯ ವಾಹಿನಿಗೆ ಬಂದಿದ್ದಾರೆ. ಆದರೆ ಲಕ್ಷ್ಮಿ ತನ್ನ ಚಟುವಟಿಕೆಗಳನ್ನು ತೊರೆದು ಆಂಧ್ರದಲ್ಲಿ ಸಂಜೀವನ ಜೊತೆ ಕುಟುಂಬ ಜೀವನ ನಡೆಸುತ್ತಿದ್ದಾಳೆ. ಸದ್ಯ ಅಮಾಸೆಬೈಲು ಠಾಣೆಯಲ್ಲಿ ಈಕೆಯ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಇವು ಬೆದರಿಕೆ, ಕರಪತ್ರ ಹಂಚಿಕೆಗೆ ಸಂಬಂಧಪಟ್ಟ ಪ್ರಕರಣಗಳಾಗಿವೆ.
ತೊಂಬಟ್ಟುವಿನ ಪಂಜು ಪೂಜಾರಿ ಮತ್ತು ಅಬ್ಬಕ್ಕ ಪೂಜಾರಿ ದಂಪತಿಯ ಆರು ಮಕ್ಕಳ ಪೈಕಿ ಈಕೆ ಐದನೆಯವಳಾಗಿದ್ದು, ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದಳು. ಬಳಿಕ ತನ್ನ ಗ್ರಾಮದ ಸಾಮಾಜಿಕ ಚಳುವಳಿಗಳಾದ ರಸ್ತೆ ಸಮಸ್ಯೆ, ಸಾರಾಯಿ ಅಂಗಡಿ ವಿರುದ್ಧ ಹೋರಾಟಗಳಲ್ಲಿ ಭಾಗಿಯಾಗಿದ್ದಳು. ನಕ್ಸಲ್ ಗುಂಪಿನಲ್ಲಿ ಹಾಡುಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದ ಲಕ್ಷ್ಮಿ ವಾರದಲ್ಲಿ ಶರಣಾಗುವ ಸಾಧ್ಯತೆಗಳಿವೆ ಎಂದು ಮಾಹಿತಿ ಲಭ್ಯವಾಗಿದೆ.