ವಿ ಎಸ್ ಆಚಾರ್ಯ ಸ್ಮರಣಾರ್ಥ ಮೀನುಗಾರಿಕಾ ತರಬೇತಿ ಕೇಂದ್ರ ಸ್ಥಾಪನೆಗೆ ಮನವಿ : ಯಶ್ಪಾಲ್ ಸುವರ್ಣ
ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ವತಿಯಿಂದ ರಾಜ್ಯ ಸರಕಾರದ ಜಂಟಿ ಆಶ್ರಯದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಆಧುನಿಕ ಮತ್ತು ಮೂಲಭೂತ ಸೌಕರ್ಯಗಳನ್ನೊಳಗೊಂಡ ಡಾ| ವಿ.ಎಸ್ ಆಚಾರ್ಯ ಸ್ಮರಣಾರ್ಥ ಬಹುಮಹಡಿ ತರಬೇತಿ ಕೇಂದ್ರಕ್ಕೆ ಮುಂಬರುವ ಬಜೆಟ್ನಲ್ಲಿ ಅನುದಾನ ಒದಗಿಸುವಂತೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ, ಮೀನುಗಾರಿಕಾ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕರಾದ ಶ್ರೀ ಕೆ ರಘುಪತಿ ಭಟ್ ರವರಿಗೆÉ ಮನವಿ ಸಲ್ಲಿಸಿರುವುದಾಗಿ ಫೆಡರೇಷನ್ ಅಧ್ಯಕ್ಷರಾದ ಶ್ರೀ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ಕರಾವಳಿ ಭಾಗದ ಮೀನುಗಾರಿಕೆಯ ಅಭಿವೃದ್ಧಿಯ ದೃಷ್ಟಿಯಿಂದ ಮೀನುಗಾರರಿಗೆ ಮತ್ತು ಮೀನುಗಾರಿಕಾ ಸಹಕಾರಿ ಸಂಘಗಳು ವೈಜ್ಞಾನಿಕ ಮತ್ತು ಆಧುನಿಕ ರೀತಿಯ ಮೀನುಗಾರಿಕೆ ನಡೆಸುವ ಕುರಿತು ಪೂರಕ ತರಬೇತಿ ಪಡೆಯಲು ದ.ಕ ಜಿಲ್ಲೆಯ ಮಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ತರಬೇತಿ ಕೇಂದ್ರವನ್ನು ಸ್ಥಾಪಿಸಲು ಫೆಡರೇಷನ್ ಆಡಳಿತ ಮಂಡಳಿ ಸಭೆ ಮತ್ತು ವಾರ್ಷಿಕ ಮಹಾಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಕರ್ನಾಟಕ ಸರಕಾರದ ಸಚಿವರಾಗಿ ಕರಾವಳಿ ಭಾಗದ ಮೀನುಗಾರರ ಅಭಿವೃದ್ದಿಗೆ ಬಹುದೊಡ್ಡ ಕೊಡುಗೆ ನೀಡಿರುವ ದಿವಂಗತ ಡಾ| ವಿ ಎಸ್ ಆಚಾರ್ಯ ರವರ ಗೌರವಾರ್ಥವಾಗಿ ಈ ತರಬೇತಿ ಕೇಂದ್ರಕ್ಕೆ ಡಾ| ವಿ.ಎಸ್ ಆಚಾರ್ಯ ಸ್ಮರಣಾರ್ಥ ಬಹುಮಹಡಿ ತರಬೇತಿ ಕೇಂದ್ರ ಎಂದು ಹೆಸರಿಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಸಮುದ್ರ ಮೀನುಗಾರಿಕೆಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯಿಂದ ಆಧುನಿಕ ಯಾಂತ್ರೀಕೃತ ಮೀನುಗಾರಿಕೆಯಲ್ಲಿ ಬಹಳಷ್ಟು ಕ್ರಾಂತಿಕಾರಿ ಬದಲಾವಣೆಯಾಗಿರುವುದರಿಂದ ಬದಲಾವಣೆಗೆ ಅನುಗುಣವಾಗಿ ನೂತನ ಪರಿಕರಗಳನ್ನು ಮತ್ತು ತಾಂತ್ರಿಕತೆಯನ್ನು ಬಳಸುವುದು ಇಂದಿನ ಪೈಪೋಟಿಯುತ ಮೀನುಗಾರಿಕೆಯಲ್ಲಿ ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ಅಗತ್ಯವಾಗಿರುವ ಈ ತರಬೇತಿ ಕೇಂದ್ರಕ್ಕೆ ರಾಜ್ಯ ಸರಕಾರ ಈ ಬಾರಿಯ ಬಜೆಟ್ನಲ್ಲಿ ಅನುದಾನ ಒದಗಿಸುವಂತೆ ಸಮಸ್ತ ಮೀನುಗಾರರ ಪರವಾಗಿ ಮನವಿ ಸಲ್ಲಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.