ವಿಕಸಿತ ಭಾರತದ ಸದೃಢ ಆರ್ಥಿಕತೆಗೆ ಮುನ್ನುಡಿ ಬರೆಯಲಿರುವ ಬಜೆಟ್ : ಯಶ್ಪಾಲ್ ಸುವರ್ಣ
ಉಡುಪಿ: ಕಳೆದ ಹತ್ತು ವರ್ಷಗಳಿಂದ ನಿರಂತರ ಪ್ರಗತಿ ಸಾಧಿಸುತ್ತಾ ವಿಶ್ವದ ಸದೃಢ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಭಾರತಕ್ಕೆ ಈ ಬಾರಿಯ ಬಜೆಟ್ ಮುನ್ನುಡಿ ಬರೆಯಲಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.
ಮುಂದಿನ 5 ವರ್ಷಗಳಲ್ಲಿ ಸಬ್ ಕಾ ವಿಕಾಸ್ ಆಶಯ ಸಾಕಾರಗೊಳಿಸುವ ನಿಟ್ಟಿನಲ್ಲಿ ಆದಾಯ ತೆರಿಗೆ ಮಿತಿಯನ್ನು 12 ಲಕ್ಷಕ್ಕೆ ಏರಿಕೆ ಮಾಡಿ ಮಧ್ಯಮ ವರ್ಗದ ಜನತೆಗೆ ಆರ್ಥಿಕ ಹೊರೆ ಇಳಿಸಿದೆ.
ನಗರಾಭಿವೃದ್ಧಿಗೆ 1 ಲಕ್ಷ ಕೋಟಿ, ಮೀನುಗಾರಿಕಾ ವಲಯಕ್ಕೆ 60 ಸಾವಿರ ಕೋಟಿ, ಜಲಜೀವನ ಮಿಶನ್ ಯೋಜನೆ 2028 ವರೆಗೆ ವಿಸ್ತರಣೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು, ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ 5 ಲಕ್ಷಕ್ಕೆ ಏರಿಕೆ, ರಾಜ್ಯಗಳಿಗೆ ಬಡ್ಡಿರಹಿತ ಸಾಲಕ್ಕೆ 1.50 ಲಕ್ಷ ಕೋಟಿ ಮೀಸಲು, ಗ್ರಾಮೀಣ ಶಾಲೆಗಳಿಗೆ ಹೈಸ್ಪೀಡ್ ಇಂಟರ್ ನೆಟ್ ಸೌಲಭ್ಯ, ಕ್ಯಾನ್ಸರ್ ಸಹಿತ ಮಾರಣಾಂತಿಕ ಕಾಯಿಲೆಗಳ ಔಷಧಿಗಳ ತೆರಿಗೆ ಕಡಿತ ಮಾಡುವ ಮೂಲಕ ಅಭಿವೃದ್ಧಿಗೆ ಪೂರಕ ಜನಸಾಮಾನ್ಯರ ಬಜೆಟ್ ಮಂಡಿಸಿದ ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಯವರಿಗೆ ದೇಶದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.