ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ಪ್ರತಿಭಟನೆಯಲ್ಲಿ ಉಡುಪಿಯಿಂದ ಪ್ರಖ್ಯಾತ್ ಶೆಟ್ಟಿ ತಂಡ ಭಾಗಿ

Spread the love

ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ಪ್ರತಿಭಟನೆಯಲ್ಲಿ ಉಡುಪಿಯಿಂದ ಪ್ರಖ್ಯಾತ್ ಶೆಟ್ಟಿ ತಂಡ ಭಾಗಿ

ಮೂಲ್ಕಿ: ಮೂಲ್ಕಿಯ ಕಾರ್ನಾಡು ಗಾಂಧಿ ಮೈದಾನದಲ್ಲಿ ವಿಜಯ ಬ್ಯಾಂಕ್ ವಿಲೀನಗೊಳಿಸುವ ಕೇಂದ್ರ ಸರ್ಕಾರದ ಆದೇಶ ವನ್ನು ಹಿಂಪಡೆಯುವಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ನಾಗರಿಕರಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ನೇತೃತ್ವದ ತಂಡ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ ‘ವಿಜಯ ಬ್ಯಾಂಕ್ ಕರಾವಳಿಯ ಜೀವನಾಡಿ. ಗ್ರಾಮೀಣ ಕೃಷಿಕರ ಆಶೋತ್ತರಗಳಿಗೆ ಸ್ಪಂದಿಸಿ, ಜನರ ಪ್ರೀತಿಗೆ ಪಾತ್ರವಾಗಿ ಲಾಭದಾಯಕವಾಗಿ ಮುನ್ನಡೆಯುತ್ತಿರುವ ವಿಜಯಾ ಬ್ಯಾಂಕ್ ಉಳಿಸುವ ಜತೆಗೆ ಸಂಸ್ಥಾಪಕರಲ್ಲಿ ಒಬ್ಬರಾದ ಮೂಲ್ಕಿ ಸುಂದರರಾಮ ಶೆಟ್ಟಿಯವರ ಸಾಧನೆ ಮರೆಯಾಗದಂತೆ ಮಾಡುವ ಕರ್ತವ್ಯ ನಮ್ಮದಾಗಿದೆ’ ಎಂದು ಹೇಳಿದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ‘ಗ್ರಾಮೀಣ ಬಡ ವರ್ಗದ ಜನರಿಗೆ ಪೂರಕವಾಗಿದ್ದ ಬ್ಯಾಂಕ್, ಇನ್ನೊಂದು ಬ್ಯಾಂಕಿನೊಂದಿಗೆ ಸೇರುವಾಗ ಬ್ಯಾಂಕ್ ಮೂಲ ಉದ್ದೇಶ ಬದಲಾಗುವ ಕಾರಣ ನಾವು ವಿರೋಧಿಸಬೇಕಾಗಿದೆ’ ಎಂದರು.

ಮಾಜಿ ಸಚಿವ ಅಮರನಾಥ ಶೆಟ್ಟಿ ಮಾತನಾಡಿ, ಸಂಘಟಿತ ಹೋರಾಟ ದಿಂದ ಮಾತ್ರ ವಿಜಯಾ ಬ್ಯಾಂಕ್ ಉಳಿಸಲು ಸಾಧ್ಯವಿದ್ದು, ಜನಪ್ರತಿನಿ ಧಿಗಳು ಹಾಗೂ ಜನನಾಯಕರು ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ವಿಜಯ ಬ್ಯಾಂಕ್ ಅಗತ್ಯತೆ ಬಗ್ಗೆ ಮನಗಾಣಿಸಬೇಕು ಎಂದರು.

ಆಶೀರ್ವಚನ ನೀಡಿದ ಕೇಮಾರು ಶ್ರೀ ಸಾಂದೀಪನೀ ಸಾಧನಾಶ್ರಮದ ಈಶ ವಿಠ್ಠಲದಾಸ ಸ್ವಾಮೀಜಿ ಮಾತನಾಡಿ. ತುಳುನಾಡಿನ ಹರಿಕಾರ ಮೂಲ್ಕಿ ಸುಂದರರಾಮ ಶೆಟ್ಟಿ ಹೆಸರಿಗೆ ಮಸಿ ಬಳಿಯುವ ತಂತ್ರ ಇದಾಗಿದೆ. ಇದರ ವಿರುದ್ಧ ಸತತ ಹೋರಾಟದ ಅಗತ್ಯವಿದೆ. ನಾವೆಲ್ಲರೂ ಮಾತಿಗೆ ಹೆಚ್ಚು ಅವಕಾಶ ನೀಡದೆ ಸಂಘಟಿತ ಪ್ರಯತ್ನದಿಂದ ಸಾಧನೆ ಸಾಧ್ಯ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಜಾಗತಿಕ ಬಂಟರ ಒಕ್ಕೂಟದ ಸದಸ್ಯ ಕರ್ನಿರೆ ವಿಶ್ವನಾಥ ಶೆಟ್ಟಿ, ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು. ಮೂಲ್ಕಿ ಬ್ಲಾಕ್ ಜೆಡಿಎಸ್ ಅಧ್ಯಕ್ಷ ಜೀವನ್ ಶೆಟ್ಟಿ, ಮಹಿಳಾ ಅಧ್ಯಕ್ಷೆ ಸುಮತಿ ಹೆಗ್ಡೆ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಇದ್ದರು.

ಪ್ರತಿಭಟನಾ ಸಮಿತಿ ಅಧ್ಯಕ್ಷ ದಿನೇಶ್ ಹೆಗ್ಡೆ ಉಳೆಪಾಡಿ ಪ್ರಸ್ತಾವಿಸಿದರು. ಮಾನವ ಹಕ್ಕುಗಳ ಸಂಘದ ಅಧ್ಯಕ್ಷ ಕೊಲ್ಲಾಡಿ ಬಾಲಕೃಷ್ಣ ರೈ ನಿರೂಪಿಸಿದರು.


Spread the love