ವಿದ್ಯಾದಾನ, ಅನ್ನದಾನಗಿಂತಲೂ ಶ್ರೇಷ್ಠವಾದದ್ದು ಮತದಾನ: ನ್ಯಾ. ಬೀಳಗಿ

Spread the love

ವಿದ್ಯಾದಾನ, ಅನ್ನದಾನಗಿಂತಲೂ ಶ್ರೇಷ್ಠವಾದದ್ದು ಮತದಾನ: ನ್ಯಾ. ಬೀಳಗಿ

 

ಮಂಗಳೂರು: ವಿದ್ಯಾದಾನ,ಅನ್ನದಾನಗಿಂತಲೂ ಶ್ರೇಷ್ಠವಾದದ್ದು ಮತದಾನ. ಮತದಾನವು ಒಂದು ದೇಶ, ರಾಜ್ಯವನ್ನು ಸುಸ್ಥಿತಿಗೆ ತರುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಸ್. ಬೀಳಗಿ ಹೇಳಿದರು.

ಅವರು ನಗರದ ಪುರಭವನದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಚುನಾವಣೆಯ ಸಂದರ್ಭದಲ್ಲಿ ಯೋಗ್ಯರನ್ನು, ಗುರುತಿಸಿ ಮತದಾನ ಮಾಡಬೇಕು. ಮುಖ್ಯವಾಗಿ ಮೂರು ರೀತಿಯ ವಿಚಾರಗಳನ್ನು ಮನಸ್ಸಿನಲ್ಲಿಟ್ಟು ಕೊಂಡು ಮತದಾನ ಮಾಡಬೇಕಾಗಿದೆ. ವ್ಯಕ್ತಿ ಮತ್ತು ಪಕ್ಷದ ಚಾರಿತ್ರ್ಯತೆ, ಮತದಾನ ಸಂದರ್ಭದಲ್ಲಿ ಹಣಕಾಸಿನ ಆಮಿಷಕ್ಕೆ ಬಲಿಯಾಗದಿರುವುದು, ನಮ್ಮವರು, ನಮ್ಮ ಜಾತಿಯವರು, ನಮ್ಮ ಧರ್ಮದವರು ಎಂದು ಮತದಾನ ಮಾಡಬಾರದು. ಯೋಗ್ಯರಿಗೆ ಮತದಾನ ಮಾಡಿದಲ್ಲಿ ಮಾತ್ರ ದೇಶ ಕಟ್ಟಲು ಸಾಧ್ಯ ಎಂದರು.

ಒಂದು ದೇಶ, ಸಂಸ್ಕøತಿ ಹಾಳಾಗಲು ನಾವು ಕಾರಣರಾಗಬಾರದು. ಮತದಾನ ಮಾಡುವಾಗ ಯಾವುದೇ ಆಮಿಷಗಳಿಗೆ ಬಲಿಯಾಗದೆ, ಯೋಗ್ಯರಿಗೆ ಮತದಾನ ಮಾಡಿದರೆ ಅದುವೇ ಸಮಾಜಕ್ಕೆ ಕೊಡುವ ದೊಡ್ಡ ಗೌರವ. ಮತದಾನ ಮಾಡುವ ಹಕ್ಕನ್ನು ಸಂವಿಧಾನ ಕಲ್ಪಿಸಿದೆ,ಅದನ್ನು ನಾವು ನೀವು ಯೋಗ್ಯ ರೀತಿಯಲ್ಲಿ ಬಳಸಿದಾಗ ಮಾತ್ರ ಒಂದು ಸದೃಢವಾದ ದೇಶವನ್ನು ಕಟ್ಟಲು ಸಾಧ್ಯವಾಗುತ್ತz ಎಂದು ಅವರು ಹೇಳಿದರು.

ಹೊಸ ಪೀಳಿಗೆಯವರು ಹಿಂದಿನವರು ಮಾಡಿದ ತಪ್ಪನ್ನು ಮಾಡದೆ, ಒಂದು ಸದೃಢವಾದ ಹೆಜ್ಜೆಯನ್ನು ಇಟ್ಟರೆ, ಹೊಸದಾಗಿ ಬಂದಿರುವ ಮತದಾರರು ಪ್ರಾರಂಭದಲ್ಲಿಯೇ, ಯೋಗ್ಯರನ್ನು ಆಯ್ಕೆ ಮಾಡುವ ವಿಚಾರ ಮಾಡಿದರೆ, ದೇಶದ ಅಭಿವೃದ್ಧಿಯಲ್ಲಿ ನಿಮ್ಮ ಪಾಲೂ ಅತೀ ದೊಡ್ಡದಾಗಿರುತ್ತದೆ ಎಂದು ವಿದ್ಯಾರ್ಥಿಗಳನ್ನು ಉಧ್ದೇಶಿಸಿ ಕೆ.ಎಸ್. ಬೀಳಗಿ ಹೇಳಿದರು. ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಇಬ್ಬರು ವಿದ್ಯಾರ್ಥಿಗಳಿಗೆ ಮತದಾನ ಗುರುತು ಚೀಟಿಯನ್ನು ವಿತರಿಸಲಾಯಿತು.

“ನಾನು ಮತದಾರನೆಂದು ಹೆಮ್ಮೆಪಡುತ್ತೇನೆ. ನಾನು ಮತ ಚಲಾಯಿಸಲು ಸಿದ್ಧನಾಗಿದ್ದೇನೆ” ಎಂಬ ಧ್ಯೇಯದೊಂದಿಗೆ ಮತದಾನದ ಪ್ರಕ್ರಿಯೆ ನಡೆಯಲಿದೆ. ಈ ಐತಿಹಾಸಿಕ ದಿನದಲ್ಲಿ ಎಲ್ಲರೂ ಭಾಗಿಯಾಗಬೇಕಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲೆಯ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಹಿರಿಯ ಸಿವಿಲ್ ನ್ಯಾಯಾಧೀಶರು ಮಲ್ಲನ ಗೌಡ, ಮಂಗಳೂರು ಸಹಾಯಕ ಕಮೀಶನರ್ ಎ.ಸಿ.ರೇಣುಕಾ ಪ್ರಸಾದ್, ಮಂಗಳೂರು ಮಹಾನಗರಪಾಲಿಕೆ, ಆಯುಕ್ತ ಮಹಮ್ಮದ್ ನಝೀರ್ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು, ಪ್ರಾಂಶುಪಾಲರು ರಾಜಶೇಖರ್ ಹೆಬ್ಬರ್ ಸಿ. ಉಪಸ್ಥಿತರಿದ್ದರು.


Spread the love