ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯದೊಂದಿಗೆ ಶಿಕ್ಷಣ ನೀಡುವುದು ಸರಕಾರದ ಇಚ್ಛೆ – ಪ್ರಮೋದ್ ಮಧ್ವರಾಜ್
ಉಡುಪಿ: ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯದೊಂದಿಗೆ ಶಿಕ್ಷಣ ನೀಡಿ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ಗುರಿ ಸರಕಾರಕ್ಕಿದೆ. ವಿದ್ಯಾರ್ಥಿಗಳು ಚೆನ್ನಾಗಿ ಪಾಠ ಕಲಿತು ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಬರಬೇಕು ಎಂದು ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್ ನುಡಿದರು.
ಶುಕ್ರವಾರದಂದು ಉಡುಪಿ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ 6 ತರಗತಿ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಹೊಸ ಕಟ್ಟಡಕ್ಕೆ ಸರ್ ಎಂ, ವಿಶ್ವೇಶ್ವರಯ್ಯನವರ ಹೆಸರು ಇಡಬಹುದೆಂದು ಸೂಚಿಸಿದರು.
ಸ್ಥಳೀಯ ನಗರ ಸಭಾ ಸದಸ್ಯರಾದ ಗೀತಾ ರವಿ ಶೇಟ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮೀನಾಕ್ಷಿ ಮಾಧವ ಬನ್ನಂಜೆ ( ಅಧ್ಯಕ್ಷರು, ಉಡುಪಿ ನಗರ ಸಭೆ), ನಳಿನಿ ಪ್ರದೀಪ್ ರಾವ್ ( ಅಧ್ಯಕ್ಷರು, ಉಡುಪಿ ತಾಲೂಕು ಪಂಚಾಯತ್), ಪ್ರೌಢಶಾಲಾ ಎಸ್. ಡಿ. ಎಮ್. ಸಿ. ಉಪಾಧ್ಯಕ್ಷೆ ಲ| ಇಂದು ರಮಾನಂದ ಭಟ್, ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮೃತ್ ಶೆಣೈ, ಪ್ರಾಥಮಿಕ ಶಾಲಾ ಎಸ್. ಡಿ. ಎಮ್. ಸಿ. ಅಧ್ಯಕ್ಷ ನಾಗಭೂಷಣ ಶೇಟ್ ಪ್ರಾಥಮಿಕ ಶಾಲಾ ಮುಖ್ಯಸ್ಥೆ ಕುಸುಮ ಹಾಗೂ ಎಸ್. ಡಿ. ಎಮ್. ಸಿ. ಸದಸ್ಯರು ಉಪಸ್ಥಿರಿದ್ದರು.
ಈ ಸಂದರ್ಭದಲ್ಲಿ ನೂತನ ಸಚಿವ ಪ್ರಮೋದ್ ಮಧ್ವರಾಜ್, ನಗರ ಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅವರನ್ನು ಸನ್ಮಾನಿಸಲಾಯಿತು. ಕಟ್ಟಡದ ಗುತ್ತಿಗೆದಾರರಾದ ಸ್ಟಾರ್ ಬಿಲ್ಡರ್ಸ್, ಬೆಂಗಳೂರಿನ ಪ್ರವೀಣ್ ಹಾಗೂ ಮಂಜುನಾಥ್ ಅವರನ್ನು ಗೌರವಿಸಲಾಯಿತು. ಕಟ್ಟಡದ ಉದ್ಘಾಟನೆ ಸಂದರ್ಭದಲ್ಲಿ ರಂಗೋಲಿ ಸ್ಫರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಿರ್ಮಲ ಬಿ. ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ನಚಿಕೇತ, ಕಿಶನ್ ನಾಯಕ್ ಮತ್ತು ಶಿಕ್ಷಕಿ ಬಾಬಿ ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲಾ ಶಿಕ್ಷಕಿ ರೂಪರೇಖಾ ಧನ್ಯವಾದವಿತ್ತರು.