ವಿದ್ಯಾರ್ಥಿಗಳು ಪ್ರತಿಯೊಂದು ಅವಕಾಶವನ್ನು ಒಂದು ಸವಾಲಾಗಿ ಸ್ವೀಕರಿಸಿ; ಬಿಷಪ್ ಜೆರಾಲ್ಡ್ ಲೋಬೊ

Spread the love

ವಿದ್ಯಾರ್ಥಿಗಳು ಪ್ರತಿಯೊಂದು ಅವಕಾಶವನ್ನು ಒಂದು ಸವಾಲಾಗಿ ಸ್ವೀಕರಿಸಿ; ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವುದರ ಮೂಲಕ ತಮ್ಮ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ಪ್ರತಿಯೊಂದು ಅವಕಾಶವನ್ನು ಒಂದು ಸವಾಲಾಗಿ ಸ್ವೀಕರಿಸಬೇಕು ಎಂದು ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಭಾನುವಾರ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಸಭಾಂಗಣದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಹಾಗೂ ಜೋನ್ ಡಿ’ಸಿಲ್ವಾ ಫೌಂಡೇಶನ್ ಮುಂಬೈ ಇದರ ವತಿಯಿಂದ ಆಯೋಜಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕೆಥೊಲಿಕ್ ಸಮುದಾಯದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವ ನಿಟ್ಟಿನಲ್ಲಿ ನಿರಂತರ ತರಬೇತಿ ನೀಡುವುದರೊಂದಿಗೆ ಮುಂದಿನ ದಿನಗಳಲ್ಲಿ ಮಕ್ಕಳನ್ನು ಹೆಚ್ಚು ಸರಕಾರಿ ಸೇವೆಯತ್ತ ಆಕರ್ಷಿಸಲು ಪ್ರಯತ್ನಗಳು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಶಕ್ತರನ್ನಾಗಿಸಲು ಹೆತ್ತವರು ಪ್ರಯತ್ನಿಸುವುದರೊಂದಿಗೆ ಹೆಚ್ಚು ಸರಕಾರಿ ಸೇವೆಯನ್ನು ಆಯ್ಕೆ ಮಾಡಿಕೊಳ್ಳುವತ್ತ ಉತ್ತೇಜನ ನೀಡಬೇಕು ಎಂದರು.

ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಸಮಾರಂಭವನ್ನು ನೆರವೇರಿಸಿ ಪ್ರಧಾನ ಭಾಷಣ ಮಾಡಿದ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‍ಸಿ) ಸದಸ್ಯರಾದ ಡಾ. ರೋನಾಲ್ಡ್ ಅನಿಲ್ ಫೆರ್ನಾಂಡಿಸ್ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಲಭಿಸಿದ ಅವಕಾಶವನ್ನು ಗಳಿಸಿಕೊಂಡು ಯಶಸ್ಸು ಪಡೆಯುವತ್ತ ನಿರಂತರ ಪ್ರಯತ್ನ ಮುಂದುವರೆಸಬೇಕು. ಮೊದಲ ಪ್ರಯತ್ನದಲ್ಲಿ ಸೋತ ಕೂಡಲೇ ಧೃತಿಗೆಡದೆ ಮತ್ತೊಮ್ಮೆ ಪ್ರಯತ್ನಿಸಿದಾಗ ಯಶಸ್ಸು ಲಭಿಸುವುದು ಖಂಡಿತ ಎಂದರು.

ಮಣಿಪಾಲ ಆರೋಗ್ಯ ಕಾರ್ಡಿನ ಕುರಿತು ಮಾಹಿತಿ ನೀಡಿದ ಸಂಚಾಲಕಿ ವೆರೋನಿಕಾ ಕರ್ನೆಲಿಯೋ ಕಳೆದ ಬಾರಿ 13143 ಕುಟುಂಬಗಳು ಈ ಯೋಜನೆಯಡಿ ನೋಂದಾಯಿತರಾಗಿದ್ದು ಈ ಬಾರಿ 13641 ಕುಟುಂಬಗಳು ಯೋಜನೆಯ ಸದಸ್ಯರಾಗಿದ್ದು, ಸರಿಸುಮಾರು 1 ಕೋಟಿ ರೂಪಾಯಿ ಸಂಗ್ರಹವಾಗಿದ್ದು ಮಣಿಪಾಲ ಮಾಹೆಗೆ ಹಸ್ತಾಂತರಿಸಲಾಗಿದೆ. ಅದರಲ್ಲಿ ಈ ಬಾರಿ 114 ಬಡ ಕುಟುಂಬಗಳಿಗೆ ಕೆಥೊಲಿಕ್ ಸಭಾದ ಘಟಕಗಳು ಪ್ರಾಯೋಜಕತ್ವ ನೀಡಿ ಕಾರ್ಡಿನ ನೋಂದಣೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ 2017-18 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು ಅಲ್ಲದೆ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕೂಡ ವಿತರಿಸಲಾಯಿತು. ಗಣರಾಜ್ಯೋತ್ಸವ ಸಂದರ್ಭ ದೆಹಲಿಯಲ್ಲಿ ನಡೆದ ಎನ್.ಸಿಸಿ ಪರೇಡ್‍ನಲ್ಲಿ ಭಾಗವಹಿಸಿದ ಒಲಿವರ್ ಡಿಸೋಜಾ ಹಾಗೂ ಸಿಎ ಪರೀಕ್ಷೆಯಲ್ಲಿ ಉತ್ತಿರ್ಣರಾದ ಎಡ್ನಾ ಮಚಾದೊ ಅವರನ್ನು ಕೂಡ ಸನ್ಮಾನಿಸಲಾಯಿತು.

ಜಾನ್ ಡಿಸಿಲ್ವಾ ಫೌಂಡೇಶಣ್ ಇದರ ಮುಖ್ಯಸ್ಥರಾದ ಜೋನ್ ಡಿಸಿಲ್ವಾ ಮತ್ತು ಗ್ಲ್ಯಾಡಿಸ್ ಡಿಸಿಲ್ವಾ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಆಧ್ಯಾತ್ಮಿಕ ನಿರ್ದೇಶಕ ವಂ ಫರ್ಡಿನಾಂಡ್ ಗೊನ್ಸಾಲ್ವಿಸ್, ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಧರ್ಮಗುರು ವಂ ಸ್ಟ್ಯಾನಿ ಬಿ ಲೋಬೊ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ನಿಕಟಪೂರ್ವ ಅಧ್ಯಕ್ಷ ವಲೇರಿಯನ್ ಆರ್ ಫೆರ್ನಾಂಡಿಸ್ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದರು.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಕಾರ್ಯಕ್ರಮದ ಸಂಯೋಜಕ ಡಾ.ಜೆರಾಲ್ಡ್ ಪಿಂಟೊ, ವಿವಿಯನ್ ಕರ್ನೆಲಿಯೊ, ಉದ್ಯಾವರ ಘಟಕದ ಅಧ್ಯಕ್ಷ ರೊನಾಲ್ಡ್ ಡಿ ಆಲ್ಮೇಡಾ, ವಲಯ ಕಾರ್ಯದರ್ಶಿ ಸಂಜಯ್ ಅಂದ್ರಾದೆ ಉಪಸ್ಥಿತರಿದ್ದರು.

ವಲಯಾಧ್ಯಕ್ಷೆ ಮೇರಿ ಡಿಸೋಜಾ ಸ್ವಾಗತಿಸಿ, ಮ್ಯಾಕ್ಷಿಮ್ ಡಿಸೋಜಾ ವಂದಿಸಿದರು. ಜಸಿಂತಾ ಕುಲಾಸೊ ಫ್ಲೈವನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.


Spread the love