ವಿದ್ಯಾರ್ಥಿಗಳು ಸ್ವಾವಲಂಬನೆಯ ಮೂಲಕ ಸಮಾಜಕ್ಕೆ ಬೆಳಕಾಗಬೇಕು – ಡಾ. ಸುಧಾಕರ ಶೆಟ್ಟಿ
ಉಡುಪಿ: ವಿದ್ಯಾರ್ಥಿ ಜೀವನದಲ್ಲಿ ಲವ್, ಮೊಬೈಲ್ ಬದಲು ಶಿಕ್ಷಣ, ಜ್ಞಾನ ಗಳಿಕೆ, ಬದುಕಿನ ಸ್ವಾವಲಂಬನೆಯ ಮೂಲಕ ಹಚ್ಚಿದ ದೀಪ ಆರುವುದರೊಳಗೆ ಸಮಾಜಕ್ಕೆ ಬೆಳಕಾಗಬೇಕು ಎಂದು ಶಿಕ್ಷಣ ತಜ್ಞ ಡಾ. ಸುಧಾಕರ ಶೆಟ್ಟಿ ಹೇಳಿದ್ದಾರೆ.
ಅವರು ಉಡುಪಿ ಜಿಲ್ಲೆಯ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ 1,500ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ 25ಲಕ್ಷ ರೂ. ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭವನ್ನು ಅಜ್ಜರಕಾಡು ಪುರಭವನದಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಹುಟ್ಟಿನಿಂದ ಯಾರೂ ದಡ್ಡ, ಕೆಟ್ಟವರಲ್ಲ. ಜ್ಞಾನಕ್ಕಿರುವ ಮರ್ಯಾದೆ, ಗೌರವ ಶ್ರೇಷ್ಠವಾಗಿದ್ದು ದಾನ, ಧರ್ಮಗಳಲ್ಲಿ ನಾನು ಎನ್ನುವ ಅಹಂಕಾರ ಸಲ್ಲದು, ನಾನೆನ್ನೋದು ರೋಗ. ಶಿಕ್ಷಣ, ಆರೋಗ್ಯಕ್ಕೆ ನೆರವು ನೀಡುವವರು ಸಮಾಜದ ದೊಡ್ಡ ಆಸ್ತಿ, ಶೈಕ್ಷಣಿಕ ನೆರವು ಪಡೆದವರು ಬದುಕಿನಲ್ಲಿ ಸಾಧಕರಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷರಾದ ಯಶಪಾಲ ಸುವರ್ಣ, ಸಹಕಾರಿ ಕ್ಷೇತ್ರದ ಸಂಸ್ಥೆಗಳು ಆರ್ಥಿಕವಾಗಿ ಸಧೃಡವಾಗಿ ಬೆಳೆದರೆ ಸಮಾಜಕ್ಕೆ ಅಸ್ತಿಯಾಗಲಿದೆ ಎಂಬುದಕ್ಕೆ ಕರಾವಳಿ ಭಾಗದ ಪ್ರತಿಷ್ಟಿತ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಹಾಲಕ್ಷ್ಮೀ ಬ್ಯಾಂಕ್ ಗ್ರಾಹಕರ, ಸದಸ್ಯರ ಸಹಕಾರದಿಂದ ನಿರಂತರ ಪ್ರಗತಿ ಸಾಧಿಸುತ್ತಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದೇ ಸಾಕ್ಷಿಯಾಗಿದೆ.
ದೇಶದ ಭವಿಷ್ಯ ರೂಪಿಸುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಸ್ಥೆಯ ಮೂಲಕ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಿ ಮುಂದಿನ ದಿನಗಳಲ್ಲಿ ಇತರ ವಿದ್ಯಾರ್ಥಿಗಳಿಗೆ ಸಹಕಾರ ನೀಡುವಂತಾಗಲಿ ಎಂಬುದೇ ಬ್ಯಾಂಕಿನ ಆಶಯವಾಗಿದೆ ಎಂದರು.
1978ರಲ್ಲಿ ಸ್ಥಾಪಿತ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಪ್ರತಿಷ್ಠಿತ ಪಟ್ಟಣ ಸಹಕಾರಿ ಬ್ಯಾಂಕಾಗಿದ್ದು 15ವರ್ಷಗಳಿಂದ ನಿರಂತರವಾಗಿ ಶೇ. 15ಡಿವಿಡೆಂಡ್ ನೀಡುತ್ತಿದೆ. ದೇಶ ಮತ್ತು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶೈಕ್ಷಣಿಕ ಪೆÇ್ರೀತ್ಸಾಹ ನೀಡುತ್ತಿದೆ. ಎಂಟು ಶಾಖೆ, 18ಜಿಲ್ಲೆಗಳಲ್ಲಿ ಬ್ಯಾಂಕ್ ಕಾರ್ಯವ್ಯಾಪ್ತಿ ಹೊಂದಿದ್ದು ರಾಜಧಾನಿ ಬೆಂಗಳೂರು ಸಹಿತ ಉತ್ತರ ಕರ್ನಾಟಕದಲ್ಲೂ ಶಾಖೆ ತೆರೆವ ಗುರಿಯಿದೆ ಎಂದರು.
ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ರಾಜ್ಯದ 46,000ಸಹಕಾರ ಸಂಸ್ಥೆಗಳಿದ್ದು ಗಳಿಸಿದ ಲಾಭದಲ್ಲಿ ಒಂದಂಶವನ್ನು ಸಮಾಜಕ್ಕೆ ನೀಡುವ ವಿರಳ ಸಂಸ್ಥೆಗಳಲ್ಲಿ ಮಹಾಲಕ್ಷ್ಮಿ ಬ್ಯಾಂಕ್ ಒಂದಾಗಿದ್ದು ವಿದ್ಯಾರ್ಥಿಗಳು ನೆರವು ನೀಡಿದವರನ್ನು ಮರೆಯದೆ ಆತ್ಮ ವಿಶ್ವಾಸ ಬೆಳೆಸಿಕೊಳ್ಳಿ ಎಂದು ಹೇಳಿದರು.
2025ನೇ ಸಾಲಿನ ಡೈರಿಯನ್ನು ಉದ್ಯಮಿ ಶಾಮಿಲಿ ನವೀನ್ ಬಿಡುಗಡೆ ಮಾಡಿದರು. ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಸಹಕಾರ ರತ್ನ ಪ್ರಶಸ್ತಿ ಪುರಸ್ಕøತರಾದ ನಾರಾಯಣ ಬಲ್ಲಾಳ್, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಉದಯ ಕುಮಾರ್ ಹಟ್ಟಿಯಂಗಡಿ ಇವರನ್ನು ಸನ್ಮಾನಿಸಲಾಯಿತು. ಉದ್ಯಮಿ ಆನಂದ ಸಿ. ಕುಂದರ್ ಮಾತನಾಡಿದರು.
ಉದ್ಯಮಿ ಹರಿಯಪ್ಪ ಕೋಟ್ಯಾನ್, ಅಜಯ್ ಪಿ. ಶೆಟ್ಟಿ, ಉಚ್ಚಿಲ ಮೊಗವೀರ ಮಹಾಜನ ಸಂಘದ ಜಯ ಸಿ. ಕೋಟ್ಯಾನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಆನಂದ ಪಿ. ಸುವರ್ಣ, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್ ಶೆಟ್ಟಿ, ರಾಮಚಂದ್ರ ಕುಂದರ್, ವಾಸುದೇವ ಸಾಲ್ಯಾನ್ ಉಪಸ್ಥಿತರಿದ್ದರು.