ವಿದ್ಯಾರ್ಥಿಯಿಂದ ಪ್ರಾಂಶುಪಾಲರ ಮೇಲೆ ಹಲ್ಲೆ: ಅಮುಕ್ತ್ ಖಂಡನೆ
ಮಂಗಳೂರು: ಹಾಜರಾತಿ ಕೊರತೆ ವಿಚಾರದಲ್ಲಿ ವಿದ್ಯಾರ್ಥಿಯೋರ್ವ ಮಂಗಳೂರು ಮಿಲಾಗ್ರೆಸ್ ಕಾಲೇಜಿನ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿರುವ ಹೇಯ ಕೃತ್ಯವನ್ನು ಅಮುಕ್ತ್ ಉಗ್ರವಾಗಿ ಖಂಡಿಸುತ್ತದೆ.
ವಿದ್ಯಾವಂತರು, ಬುದ್ಧಿವಂತರು, ನೀತಿ-ನಿಯತ್ತಿಗೆ, ಉತ್ತಮ ಶಿಕ್ಷಣಕ್ಕೆ ಹೆಸರಾಗಿರುವ ಕರಾವಳಿಯ ಜಿಲ್ಲೆಯೊಂದರಲ್ಲಿ ನಡೆದಿರುವ ಇಂತಹ ಅನಾಗರಿಕ ಕೃತ್ಯವನ್ನು ಜಿಲ್ಲೆಯ ಎಲ್ಲಾ ಪ್ರಜ್ಣಾವಂತ ನಾಗರೀಕರು ಖಂಡಿಸಲೇ ಬೇಕಾಗಿದೆ. ತರಗತಿಗೆ ಹಾಜರಾಗದ ಇಂತಹ ವಿದ್ಯಾರ್ಥಿಗಳು ಸಮಾಜಘಾತುಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮುಂದೆ ಸಮಾಜ ಕಂಟಕರಾಗುವ ಅಪಾಯವಿದೆ. ಆದುದರಿಂದ ಸಂಬಂಧಪಟ್ಟವರ ಮೇಲೆ ಅಧಿಕಾರಿಗಳು ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇತ್ತೀಚಿನ ದಿವಸಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಅಕ್ರಮ, ಅನೀತಿಗಳು ಪ್ರವೇಶಿಸುತ್ತಿರುವುದು ಜಿಲ್ಲೆಯ ಪ್ರಜ್ಣಾವಂತ ಸಂಸ್ಕೃತಿಗೆ ಮಸಿ ಬಳಿಯುವಂತಾಗಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ನಿಯಂತ್ರಿಸುವಲ್ಲಿ ಮುಂದಿನ ದಿವಸಗಳಲ್ಲಿ ವಿಶ್ವವಿದ್ಯಾನಿಲಯ ಹಾಗೂ ಶಿಕ್ಷಣ ಇಲಾಖೆಗಳು ಗಂಭೀರ ಕ್ರಮಕೈಗೊಳ್ಳಬೇಕು. ಶಾಲಾ/ಕಾಲೇಜುಗಳ ಶಿಕ್ಶಕರು, ಮುಖ್ಯಸ್ಥರಿಗೆ ಈ ಬಗ್ಗೆ ಸಂಪೂರ್ಣ ಸ್ವಾತಂತ್ರ್ಯ ಹಾಗೂ ಪೂರ್ಣರಕ್ಷಣೆಯು ದೊರೆಯದಿದ್ದಲ್ಲಿ ಮುಂದೊಂದು ದಿವಸ ಇಡೀ ಕರಾವಳಿಯ ಶೈಕ್ಷಣಿಕ ವಾತಾವರಣವು ಅಪಾಯಕ್ಕೊಳಗಾಗಬಹುದು. ಆದುದರಿಂದ ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಸೂಕ್ತಕ್ರಮ ಕೈಗೊಳ್ಳಬೇಕು ಹಾಗೂ ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸಬೇಕು. ಇಂತಹ ವಿಚಾರದಲ್ಲಿ ಅಮುಕ್ತ್ ಯಾವತ್ತೂ ಕಾಲೇಜಿನ ಪ್ರಾಂಶುಪಾಲರ, ಶಿಕ್ಷಕರ ಬೆಂಬಲಕ್ಕಿದೆ ಎಂದು ಅಮುಕ್ತ್ ಅಧ್ಯಕ್ಷರಾದ ಡಾ ಉಮ್ಮಪ್ಪ ಪೂಜಾರಿ ಹಾಗೂ ಪ್ರಧಾನ ಕಾರ್ಯದರ್ಶಿ ಡಾ. ಕುಮಾರ್ ಹೆಗ್ಡೆ ಯವರ ಜಂಟೀ ಹೇಳಿಕೆಯಲ್ಲಿ ತಿಳಿಸಿದ್ದಾರೆ.