ವಿಧಾನಸಭಾ ಚುನಾವಣೆ; ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್ ಗೆಲುವು ಖಚಿತ; ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ
ಉಡುಪಿ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಗೆಲ್ಲುವಂತಹ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಖಂಡಿತವಾಗಿ ಜೆಡಿಎಸ್ ಪಕ್ಷ ಗೆಲ್ಲುವ ವಿಶ್ವಾಸವನ್ನು ಹೊಂದಿದೆ ಎಂದು ಜಾತ್ಯಾತೀತ ಜನತಾದಳದ ಉಡುಪಿ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ ಹೇಳಿದರು.
ಅವರು ಗುರುವಾರ ನಗರದ ಪ್ರೆಸ್ ಕ್ಲಬ್ಬಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, 2018 ಕರ್ನಾಟಕ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ನಾವಿದ್ದು, ಕರ್ನಾಟಕ ನೆಲ, ಜಲ, ಭಾಷೆಗಳನ್ನು ರಕ್ಷಿಸಲು ಎರಡೂ ರಾಷ್ಟ್ರೀಯ ಪಕ್ಷಗಳು ವಿಫಲರಾಗಿದ್ದು, ಕರ್ನಾಟಕದ ಪ್ರಾದೇಶಿಕ ಪಕ್ಷವಾದ ಜನತಾದಳ (ಜಾತ್ಯಾತೀತ) ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ್ಲಿ ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬಲ್ಲರು.
ಈ ಹಿಂದೆ 20 ತಿಂಗಳು ಕರ್ನಾಟಕದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ವಿಧಾನಸಭೇಯ 3 ನೇ ಮಹಡಿಯಲ್ಲಿ ಕೂತು ಕೆಲಸ ಮಾಡಿದವರಲ್ಲ. ಸರಕಾರವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಮೂಲಕ ಆಡಳಿತವನ್ನು ಜನರ ನಡುವೆ ನಡೆಸಿದವರು. ಸಮಾಜದ ಕಟ್ಟಕಡೆಯ ನಾಗರಿಕನಿಗೂ ಕೂಡ ಸರಕಾರದ ಸೌಲಭ್ಯ ಸಿಗುವಂತೆ ಮಾಡಿದ ಜನನಾಯಕ ಕುಮಾರಸ್ವಾಮಿ. ಈ ಹಿಂದೆ ಕಂಡತಹ ದಿನಗಳು ಪುನಃ ರಾಜ್ಯದಲ್ಲಿ ಮರುಕಳಿಸಬೇಕಾದರೆ ಮತ್ತೊಮ್ಮೆ ಕುಮಾರಸ್ವಾಮಿಯ ಸರಕಾರ ಕರ್ನಾಟಕಕ್ಕೆ ಅಗತ್ಯವಾಗಿದೆ ಎಂದರು.
ಅಧಿಕಾರಕ್ಕೆ ಬಂದು ಕೇವಲ 24 ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲಮನ್ನಾ, ಅಂಗನವಾಡಿ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ 18 ಸಾವಿರ ಮಾಸಿಕ ವೇತನ ನಿಗದಿ, ಅಂಗವಿಕಲರಿಗೆ ಮಾಸಾಶನವನ್ನು ಮಾಸಿಕ ರೂ 2500 ಕ್ಕೆ ಏರಿಸುವುದು, ಹಿರಿಯ ನಾಗರಿಕರಿಗೆ 5000 ಗೌರವ ಧನ, ಬಾಣಂತಿ ಮಹಿಳೆಯರಿಗೆ 6 ತಿಂಗಳ ಕಾಲ ತಿಂಗಳಿಗೆ 6000 ದಂತೆ ಪೌಷ್ಟಿಕ ಆರೋಗ್ಯ ಭತ್ತೆ ಮತ್ತು ಇತ್ತೀಚೆಗೆ ಇಸ್ರೇಲ್ ಪ್ರವಾಸ ಮಾಡಿಅಲ್ಲಿನ ಆಧುನಿಕ ಕೃಷಿ ನಿಯಮವನ್ನು ಇಲ್ಲಿ ತಂದು ಸಣ್ಣ ಕೃಷಿ ಭೂಮಿ ಹೊಂದಿರುವ ರೈತರು ಮುಂದೆ ಕೃಷಿ ಸಾಲದ ಕೂಪಕ್ಕೆ ಬೀಳದಂತೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುವಲ್ಲಿ ಉಡುಪಿ ಜಿಲ್ಲೆಯಲ್ಲಿ ಕೂಡ ಕೊಡುಗೆ ನೀಡುವ ಪ್ರಮುಖ ಪ್ರಯತ್ನವನ್ನು ಪಕ್ಷ ಮಾಡುತ್ತಿದೆ. ಈಗಾಗಲೇ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಸವಿತಾ ಸಮಾಜದ ಪ್ರಮುಖ ಮುಖಂಡ ಗಂಗಾದರ ಬಿರ್ತಿಯವರನ್ನು ಕಣಕ್ಕಿಳಿಸಿದ್ದು ಉಡುಪಿಯಲ್ಲಿ ಪ್ರಬಲ ಸ್ಪರ್ಧೆಯನ್ನು ನೀಡಲಿದ್ದೇವೆ. ಬೈಂದೂರು ಕ್ಷೇತ್ರಕ್ಕೆ ಕಾರ್ಮಿಕ ಮುಖಂಡ ಸಂಘಟನಾಕಾರ ರವಿ ಶೆಟ್ಟಿ ಸ್ಪರ್ಧಿಸುತ್ತಿದ್ದು, ಬೈಂದೂರು ಕ್ಷೇತ್ರದ ಚಿತ್ರಣವೇ ಬದಲಾಗುವ ನಂಬಿಕೆ ಇದೆ. ಕುಂದಾಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ ಇವರನ್ನು ಜಿಲ್ಲಾ ಸಮಿತಿ ಅಭ್ಯರ್ಥಿಯಾಗಿ ಅಂತಿಮಗೊಳಿಸಿದ್ದು, ಹೈಕಮಾಂಡ್ ಒಪ್ಪಿಗೆಗೆ ಕಳುಹಿಸಲಾಗಿದೆ. ಪ್ರಕಾಶ್ ಶೆಟ್ಟಿ ಕೂಡ ಉತ್ತಮ ಸಂಘಟನಾಕಾರರಾಗಿದ್ದು, ಕುಂದಾಪುರದಲ್ಲಿ ಜೆಡಿಎಸ್ ಬಾವುಟವನ್ನು ಎತ್ತಿ ಹಿಡಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸದೃಢವಾಗಿದ್ದು, ಎಲ್ಲಾ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯ ಕಾರ್ಯಕ್ರಮವನ್ನು ಮುಗಿಸಿದ್ದು ಅಲ್ಲಿ ಅಭ್ಯರ್ಥಿಯನ್ನು ಸದ್ಯವೇ ಘೋಷಿಸಲಾಗುವುದು. ಇನ್ನು ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ಹೈಕಮಾಂಡ್ ತೀರ್ಮಾನದಂತೆ ಮಿತ್ರ ಪಕ್ಷ ಬಹುಜನ ಸಮಾಜ ಪಾರ್ಟಿಗೆ ಬಿಟ್ಟು ಕೊಟ್ಟಿದ್ದು ಅಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಎಸ್ಪಿ ಪರವಾಗಿ ಕೆಲಸ ಮಾಡಲಿದ್ದಾರೆ ಎಂದರು.
ಇನ್ನೂ ಉಡುಪಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಎಸ್ಪಿ ಜೆಡಿಎಸ್ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದ್ದು, ಇದರಿಂದ ಆ ಚುನಾವಣಾ ಕ್ಷೇತ್ರಗಳ ಮೇಲೆ ಉತ್ತಮ ಪರಿಣಾಮ ಬೀರಲಿದೆ.
ಉಡುಪಿ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು, ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸವುದು, ಜಿಲ್ಲೆಯಲ್ಲಿ ತಲೆನೋವಾಗಿರುವ ಅಕ್ರಮ ಮರಳುಗಾರಿಕೆಯನ್ನು ಕೊನೆಗೊಳಿಸಿ ಸೂಕ್ತ ಮರಳು ನೀತಿಯನ್ನು ಜಾರಿಗೆ ತರುವುದು, ಕುಡಿಯುವ ನೀರಿನ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಮಾಡುವುದು, ಕಡಲತಡಿಯಲ್ಲಿ ಮಾರಕವಾಗಿರುವ ಕಡಲಕೊರೆತಕ್ಕೆ ಶಾಶ್ವತ ತಡೆಗೊಡೆ ನಿರ್ಮಾಣಕ್ಕೆ ಕ್ರಮ, ಉಡುಪಿ ನಗರದಲ್ಲಿ ಡ್ರೈನೇಜ್ ಸಮಸ್ಯೆಗೆ ಸೂಕ್ತ ಕ್ರಮ ಎಲ್ಲಾ ತಾಲೂಕು ಕೆಂದ್ರಗಳಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆ ನಿರ್ಮಾಣ, ಹೀಗೆ ಹತ್ತು ಹಲವಾರು ಯೋಜನೆಗಳನ್ನು ಮುಂದಿಟ್ಟುಕೊಂಡು ಜಿಲ್ಲೆಯಲ್ಲಿ ಚುನಾವಣೆ ಎದುರಿಸಲು ಜೆಡಿಎಸ್ ಬದ್ದವಾಗಿದ್ದು ಜನರ ಸೂಕ್ತ ಬೆಂಬಲ ಸಿಗುವ ನಂಬಿಕೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬೈಂದೂರು ಅಭ್ಯರ್ಥಿ ರವಿ ಶೆಟ್ಟಿ, ಉಡುಪಿ ಅಭ್ಯರ್ಥಿ ಗಂಗಾಧರ ಬಿರ್ತಿ, ಕುಂದಾಪುರ ಸಂಭಾವ್ಯ ಅಭ್ಯರ್ಥಿ ಪ್ರಕಾಶ್ ಶೆಟ್ಟಿ, ಬಿಎಸ್ಪಿಯ ಉದಯಕುಮಾರ್ ತಲ್ಲೂರು ಉಪಸ್ಥಿತರಿದ್ದರು.