ವಿಶ್ವ ಕೊಂಕಣಿ ಕೇಂದ್ರಕ್ಕೆ ಅಮೇರಿಕಾದ ಡಾ. ಗೋಪಾಲ ಭಂಡಾರಕಾರ ಭೇಟಿ
ಅಮೇರಿಕಾದ ‘ಕೊಂಕಣಿ ಚಾರಿಟೇಬಲ ಫಂಡ್’ ಅಧ್ಯಕ್ಷ ಡಾ. ಗೋಪಾಲ ಭಂಡಾರಕಾರ ಅವರು ದಿನಾಂಕ 20-02-2019 ರಂದು ವಿಶ್ವ ಕೊಂಕಣಿ ಕೇಂದ್ರ ಕ್ಕೆ ಭೇಟಿ ನೀಡಿದರು. ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ಜರುಗುವ ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ಯೋಜನೆ, ಯುವ ವಿದ್ಯಾರ್ಥಿಗಳಿಗೆ ನೀಡುವ ‘ಕ್ಷಮತಾ’ ಮತ್ತು ‘ಕ್ಷಮತಾ ಯು ಗೆಟ್ ಇನ್’ ತರಬೇತಿ ಯೋಜನೆ ಮುಂತಾದ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವ ಕೊಂಕಣಿ ಕೇಂದ್ರದ ಕ್ಷಮತಾ ಅಕಾಡೆಮಿಯ ಕೌಶಲ್ಯ ತರಬೇತಿ ಶಿಬಿರದ ತಾಂತ್ರಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ. ಭಂಡಾರಕಾರರವರು ನಮ್ಮ ತಾಯ್ನಾಡು ಭಾರತವು ದೇಶದಲ್ಲಿ ಅತೀ ದೊಡ್ಡ ಅರ್ಥವ್ಯವಸ್ಥೆಯಲ್ಲಿ ಮುಂದುವರೆಯುವ ದಿವಸಗಳನ್ನು ನೋಡಲು ಬಯಸುತ್ತೇನೆ. ಅಮೇರಿಕಾ ಕೊಂಕಣಿ ಚಾರಿಟೇಬಲ್ ಫಂಡ್ ವತಿಯಿಂದ ವರ್ಷ ವರ್ಷ ಕರಾವಳಿ ಕರ್ನಾಟಕದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ ಮತ್ತು ಸಮಾಜದ ಅನಾಥ ವಯೋಮಾನದವರಿಗೆ, ವೃದ್ಧಾಶ್ರಮಗಳಿಗೆ ಸೇರ್ಪಡೆ ಹಾಗೂ ಅನಾರೋಗ್ಯ ಸುಧಾರಣೆ ಮುಂತಾದ ಯೋಜನೆಗಳಿಗಾಗಿ ಅಮೇರಿಕಾದಿಂದ 25 ಲಕ್ಷ ಡಾಲರ್ ದೇಣಿಗೆ ನೀಡಲಾಗುತ್ತಿದೆ ಎಂದು ಹೇಳಿದರು.
ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈಯವರು ಅಧ್ಯಕ್ಷೀಯ ಭಾಷÀಣ ಮಾಡಿದರು. ಈ ಸಂಧರ್ಭದಲ್ಲಿ ಡಾ. ಭಂಡಾರಕಾರ ರವರಿಗೆ ಗೋವಾ ದೇವಾಲಯಗಳ ಅಲ್ಬಂನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು. ವಿಶ್ವ ಕೊಂಕಣಿ ಕೇಂದ್ರ ವಿದ್ಯಾರ್ಥಿ ವೇತನ ನಿಧಿ ಕಾರ್ಯದರ್ಶಿ ಶ್ರೀ ಪ್ರದೀಪ ಜಿ. ಪೈ ಸ್ವಾಗತಿಸಿ, ಅಮೇರಿಕಾದ ಕೊಂಕಣಿ ಚಾರಿಟೇಬಲ್ ಫಂಡ್ ವತಿಯಿಂದ ಡಾ. ಗೋಪಾಲ ಭಂಡಾರಕಾರರವರು ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿಗೆ ನೀಡುವ ಕೊಡುಗೆಗಾಗಿ ಹೃತ್ಪೂರ್ವಕವಾಗಿ ವಂದಿಸಿದರು. ಕ್ಷಮತಾ ಅಕಾಡೆಮಿ ತರಬೇತುದಾರರಾದ ಪ್ರೊ. ಭಾರತಿ ಶೇವಗೂರ, ವಿಶ್ವ ಕೊಂಕಣಿ ಭಾಷಾ ಸಂಸ್ಥಾನ ನಿರ್ದೇಶಕ ಶ್ರೀ ಗುರುದತ್ತ ಬಂಟವಾಳಕರ, ವಿಶ್ವ ಕೊಂಕಣಿ ಕೇಂದ್ರ ಕಾರ್ಯದರ್ಶಿ ಬಿ. ಪ್ರಭಾಕರ ಪ್ರಭು ಉಪಸ್ಥಿತರಿದ್ದರು.