ವಿಶ್ವ ಕೊಂಕಣಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ
ಮಂಗಳೂರು: ರಾಷ್ಟ್ರೀಯ ಮಕ್ಕಳ ದಿನಾಚರಣೆಯ ಸಂಭ್ರಮ ಎಲ್ಲೆಲ್ಲೂ ಮಕ್ಕಳ ಕಲರವ. ಜೆಪ್ಪು ಭಗಿನಿ ಸಮಾಜ, ಕಂಕನಾಡಿ ಈಶ್ವರಾನಂದ ಮಹಿಳಾ ಸೇವಾಶ್ರಮ, ನಳಂದಾ ಶಾಲೆ, ಚಿನ್ಮಯ ಶಾಲೆಗಳ ವಿವಿಧ ವಯಸ್ಸಿನ ಬಾಲಕ ಬಾಲಕಿಯರಿಗೆ ವೈವಿಧ್ಯಮಯ ಕಾರ್ಯಕ್ರಮ. ಹೆಣ್ಣು ಮಕ್ಕಳಿಗೆ ಆರೋಗ್ಯ ಸಮಾಲೋಚನೆ, ಪುಟ್ಟಮಕ್ಕಳಿಗೆ ಬಣ್ಣದ ಚಿತ್ರಕಲೆ, ಹಾಡು, ಅಭಿನಯಗೀತೆ, ಕಥೆ ಹೇಳುವುದು ಬಣ್ಣ ಬಣ್ಣದ ಬಲೂನು ಶೃಂಗಾರ ಇವುಗಳ ನಡುವೆ ಸುಮಾರು ನೂರು ಇನ್ನೂರು ಪುಟಾಣಿಗಳು ಮಕ್ಕಳ ದಿನಾಚರಣೆಯಲ್ಲಿ ಸಂಭ್ರಮಿಸಿದ್ದು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ. ಈ ಸಂಧರ್ಭದಲ್ಲಿ ಮಕ್ಕಳಿಗೆ ಸಾಧನಾ ಪ್ರೇರಕ ವಿಡಿಯೋ ಪ್ರದರ್ಶನವನ್ನೂ ವ್ಯವಸ್ಥೆಗೊಳಿಸಲಾಗಿತ್ತು.
ಕೇಂದ್ರದ ಅಧ್ಯ್ಕ್ಷಕ್ಷ ಹಿರಿಯ ಲೆಕ್ಕ ಪರಿಶೋಧಕರಾದ ನಂದಗೋಪಾಲ ಶೆಣೈಯವರು ದಿ. ಬಸ್ತಿ ವಾಮನ ಶೆಣೈ ಅವರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ದ್ವೀಪ ಪ್ರಜ್ವಲನೆಯ ಮೂಲಕ ಮಕ್ಕಳ ಉತ್ಸವವನ್ನು ಉದ್ಘಾಟಿಸಿದರು,ಎಲ್ಲರನ್ನೂ ಸ್ವಾಗತಿಸಿದರು.
ಉಷಾ ಮೋಹನ ಪೈ, ಸುಮತಿ ಪೈ, ವಂದನಾ ಕಾಮತ, ರಾಧಿಕಾ ಪೈ, ಕುಡ್ಪಿ ವಿದ್ಯಾ ಶೆಣೈ, ಪಂಚಮಹಲ್ ಪ್ರೀತಮ್ ಕಾಮತ್ ಮುಂತಾದವರು ಬೇರೆ ಬೇರೆ ವಯೋಮಿತಿಯ ಮಕ್ಕಳಿಗೆ ಸರಿಹೊಂದುವ ಸಾಂಸ್ಕೃತಿಕ ಚಟುವಟಿಕೆ ನಡೆಸಿ ಕೊಟ್ಟರು. ಕುದ್ರೋಳಿ ಗಣೇಶ್ ಇವರಿಂದ ಅತ್ಯಾಕರ್ಷಕ ಮ್ಯಾಜಿಕ್ ಶೋ, ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ರುಚಿ ಸುಚಿ ಉಪಹಾರ, ಭೋಜನ ವ್ಯವಸ್ಥೆಯೊಂದಿಗೆ ಎಲ್ಲಾ ಪುಟಾಣಿಗಳು ಮಕ್ಕಳ ದಿನದ ಆನಂದವನ್ನು ಸವಿದರು.
ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ಗಿಲ್ಬರ್ಟ್ ಡಿಸೋಜಾ, ಖಜಾಂಚಿ ಬಿ. ಆರ್ ಭಟ್, ಟ್ರಸ್ಟಿಗಳಾದ ಕಸ್ತೂರಿ ಮೋಹನ ಪೈ, ವಿಲಿಯಂ ಡಿಸೋಜಾ, ರಮೇಶ್ ಡಿ ನಾಯಕ, ಶಕುಂತಲಾ ಆರ್ ಕಿಣಿ, ಮೆಲ್ವಿನ್ ರೊಡ್ರಿಗಸ್ ಹಾಗೂ ಬಸ್ತಿ ಮಾಧವ ಶೆಣೈ ಕುಟುಂಬಸ್ಥರು ಭಾಗವಹಿಸಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಡಾ ಬಿ ದೇವದಾಸ್ ಪೈಯವರು ವಂದಿಸಿದರು.