ವಿಶ್ವಕರ್ಮರಿಗೆ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯತನದ ಅವಕಾಶ ನೀಡಿ : ನೇರಂಬಳ್ಳಿ ರಮೇಶ್ ಆಚಾರ್ಯ
ಉಡುಪಿ : ನಾವು ದೇಶ ರಾಜ್ಯದಲ್ಲಿ ದೇವಸ್ಥಾನವನ್ನು ಕಟ್ಟಿಸಿ ಕೊಡುತ್ತೇವೆ, ಅಲ್ಲಲ್ಲಿ ದೇವಸ್ಥಾನಗಳನ್ನು ಮಾಡಿಸಿಕೊಟ್ಟಿದ್ದೇವೆ, ಆದರೆ ನಮಗೆ ದೇವಸ್ಥಾನದಲ್ಲಿ ಅವಕಾಶಗಳು ಇಲ್ಲ, ಸರಕಾರ ನೇಮಿಸುವ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳಲ್ಲಿ ವಿಶ್ವಕರ್ಮ ಸಮುದಾಯದವರಾದ ನಮಗೆ ಅವಕಾಶಗಳೇ ಇಲ್ಲ, ದೇವಸ್ಥಾನ ಕಟ್ಟುವುದು, ಕೊನೆಗೆ ನಮಗೆ ಯಾವೂದೇ ಸ್ಥಾನಮಾನಗಳು ದೇವಸ್ಥಾನಗಳಲ್ಲಿ ಇಲ್ಲ, ದೇಶದಾದ್ಯಾಂತ ಪುರಾತನ ದೇವಸ್ಥಾನಗಳ ಸಹಿತ ಸಾವಿರಾರು ದೇವಸ್ಥಾನಗಳನ್ನು ವಿಶ್ವಕರ್ಮರಾದ ನಾವು ನಿರ್ಮಾಣ ಮಾಡಿದ್ದೇವೆ. ರಾಜ್ಯದ ಮುಜರಾಯಿ ಇಲಾಖೆಗೆ ಸೇರುವ ಯಾವೂದೇ ದೇವಸ್ಥಾನಗಳಲ್ಲಿ ನಮನ್ನು ಅವಕಾಶ ವಂಚಿತರಾಗಿ ಮಾಡಿ ದೂರ ಇಡುತ್ತಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಬ್ಬ ವಿಶ್ವಕರ್ಮರಿಗೆ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯತನದ ಅವಕಾಶ ನೀಡಬೇಕು. ರಾಜ್ಯದ “ಎ” ತರಗತಿಯ ಎಲ್ಲಾ ದೇವಸ್ಥಾನಗಳಲ್ಲೂ ಅವಕಾಶ ನೀಡಬೇಕು. ರಾಜ್ಯದ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಎಷ್ಟು ಜನ ವಿಶ್ವಕರ್ಮರಿಗೆ ಅವಕಾಶ ನೀಡಿದ್ದಾರೆ ಎಂದು ಉಡುಪಿ ಜಿಲ್ಲಾ ವಿಶ್ವಕರ್ಮ ಮಹಾಸಭಾದ ಜಿಲ್ಲಾ ಮುಖಂಡರಾದ ನೇರಂಬಳ್ಳಿ ರಮೇಶ್ ಆಚಾರ್ಯ ಪ್ರಶ್ನಿಸಿದರು.
ಈ ಬಗ್ಗೆ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಶಾಸಕರಾದ ಬೈಂದೂರಿನ ಬಿ.ಎಂ.ಸುಕುಮಾರ ಶೆಟ್ಟಿ ಅವರ ಗೆಲುವಿಗೆ ಬೈಂದೂರು ನಾರಾಯಣ ಆಚಾರ್ಯರ ನೇತ್ರತ್ವದಲ್ಲಿ ಸುಮಾರು 14 ಸಾವಿರ ವಿಶ್ವಕರ್ಮರು ಮತ ನೀಡಿ ಬೆಂಬಲಿಸಿ ಗೆಲ್ಲಿಸಿದ್ದಾರೆ. ಅವರು ನಮಗೆ ಎನು ಮಾಡಿದ್ದಾರೆ. ಕೊನೆಗೆ ನಮ್ಮ ಅಧ್ಯಕ್ಷರಾದ ಕೆ.ಪಿ.ನಂಜುಂಡಿ ಅವರು ಹೇಳಿದರೂ ಕೂಡ ಬೈಂದೂರು ನಾರಾಯಣ ಆಚಾರ್ಯರಿಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಅವಕಾಶವನ್ನೇ ನೀಡಿಲ್ಲ. ಇದು ಯಾವ ನ್ಯಾಯ, ಅವರಿಗೆ ಮತ ನೀಡಲು ನಾವು ಬೇಕು, ಜಯಗಳಿಸಿದ ಮೇಲೆ ವಿಶ್ವಕರ್ಮರಿಗೆ ಎಲ್ಲಾ ವಿಚಾರದಲ್ಲೂ ಅನ್ಯಾಯ, ಇದು ಯಾವ ನ್ಯಾಯ. ಮಾತೆತ್ತಿದರೇ ವಿಶ್ವಕರ್ಮರು ನಮ್ಮ ಜೊತೆ ಇದ್ದಾರೆ ಅಂತಾರೆ, ಹಾಗಾದರೇ ನಾವೆಲ್ಲ ಅವರ ಗುಲಾಮರ ?. ಹಾಗಾದರೇ ನಮಗೆ ಅರ್ಹತೆ ಇಲ್ಲವೆ, ಹೀಗೆ ಪರಿಸ್ಥಿತಿ ಮುಂದುವರಿದರೆ ಇಂತಹ ನಾಯಕರನ್ನು ನಾವು ದೂರ ಇಡುತ್ತೇವೆ. ಅವರಿಗೆ ತಕ್ಕ ಪಾಠ ಕಲಿಸಲು ನಾವು ಸದೃಡವಾಗಿದ್ದೇವೆ
ವಿಶ್ವಕರ್ಮ ಯುವಕರ ಕೈಗೆ ಉದ್ಯೋಗ ನೀಡಿ :
ಆ ಸಂಘ ಈ ಸಂಘ ಎಂದು ಯುವ ಸಮುದಾಯವನ್ನು ಮರಳು ಮಾಡಿ ಪ್ರಚೋದಿಸಿದರೇ ಸಾಲದು, ಯುವ ಸಮುದಾಯದವರಿಗೆ ಉದ್ಯೋಗ ನೀಡಿ ಅವರ ಬದುಕು ಗಟ್ಟಿಗೊಳಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಧರ್ಮ ಜಾತಿಯ ಹೆಸರಿನಲ್ಲಿ ಯುವಕರನ್ನು ಕೆರಳಿಸಿ ಪ್ರಚೋದಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪೃವೃತ್ತಿ ಬೇಡ. ದುಡಿಯುವ ಕೈಗಳಿಗೆ ಕೆಲಸ ಕೊಡಿ, ಯುವಕರ ಮನಸ್ಸು ಅರಳಿಸುವ ಕೆಲಸ ಮಾಡಿ ಮನಸ್ಸು ಕೆರಳಿಸಿ ದಾರಿ ತಪ್ಪಿಸಿ, ಯುವ ಸಮುದಾಯವನ್ನು ನಿಮಗೆ ಬೇಕಾದಂತೆ ಬಳಸಿಕೊಂಡು ಮತ್ತೇ ದಾರಿಯಲ್ಲಿ ಬಿಡಬೇಡಿ. ರಾಜ್ಯದಾದ್ಯಂತ ಲಕ್ಷಾಂತರ ವಿಶ್ವಕರ್ಮ ಸಮುದಾಯದ ಯುವಕರು ಉದ್ಯೋಗವಿಲ್ಲದೆ ಒದ್ದಾಡುತ್ತಿದ್ದಾರೆ. ಅವರಲ್ಲಿ ಕೌಶಲ್ಯವಿದೆ, ವಿಶೇಷ ಪ್ರಾವೀಣ್ಯತೆ ಇದೆ. ನಮ್ಮ ರಾಜ್ಯಾಧ್ಯಕ್ಷರೊಂದಿಗೆ ಚರ್ಚಿಸಿ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಮೂಲಕ ವಿಶೇಷ ಹೊಸ ಯೋಜನೆ ರೂಪಿಸಿ ಅತೀ ಶೀಘ್ರವಾಗಿ ಉದ್ಯೋಗ ಕೊಡಿ.
ಕಳೆದ ಹಲವಾರು ವರ್ಷಗಳಿಂದ ಉದ್ಯೋಗವಿಲ್ಲದೆ ನಮ್ಮವರು ದಿಕ್ಕು ತೋಚದಾಗಿದ್ದಾರೆ, ಇದೀಗ ಕೊರೊನಾ ಸಮಸ್ಯೆಯಿಂದಾಗಿ ಪರಿಸ್ಥಿತಿ ಮತ್ತಷ್ಟು ಕೈ ಮೀರಿದೆ, ಅತ್ಯಂತ ಸ್ವಾಭಿಮಾನಿಗಳಾದ ನಮ್ಮವರು ತಮ್ಮ ಸಮಸ್ಯೆಯನ್ನು ಯಾರಲ್ಲಿಯೂ ಹೇಳಿಕೊಳ್ಳುವುದಿಲ್ಲ, ನಮ್ಮ ಸೌಮ್ಯತನವನ್ನು ನಮ್ಮ ದುರ್ಬಲತೆ ಎಂದು ಭಾವಿಸಬೇಡಿ, ಕಳೆದ ಆರೇಳು ವರ್ಷದಲ್ಲಿ ರಾಜ್ಯದಲ್ಲಿ ಸುಮಾರು 18 ಸಾವಿರ ವಿಶ್ವಕರ್ಮರಿಗೆ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಮೂಲಕ 95 ಕೋಟಿ ರೂಪಾಯಿ ಸಾಲ ಸೌಲಭ್ಯ ನೀಡಲಾಗಿದೆ. ಅದರಲ್ಲಿ 7 ಲಕ್ಷ ರೂಪಾಯಿಯಷ್ಟು ಸಾಲವನ್ನು ಫಲಾನುಭವಿಗಳು ಮರುಪಾವತಿ ಮಾಡಿದ್ದಾರೆ. ಈಗ ಕೊರೊನಾ ಸಂಕಷ್ಟದಿಂದ ಯಾರೂ ಸಾಲ ಕಟ್ಟುವ ಸ್ಥಿತಿಯಲ್ಲೇ ಇಲ್ಲ. ನೇಕಾರರು, ಮೀನುಗಾರರ ಸಾಲ ಮನ್ನಾ ಮಾಡಿದಂತೆ ಅತೀ ಶೀಘ್ರವಾಗಿ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಗಳ ಸಾಲವನ್ನು ಮನ್ನಾ ಮಾಡಬೇಕು, ಜೊತೆಗೆ ವಿಶ್ವಕರ್ಮ ಸಮುದಾಯವನ್ನು ಸಂಕಷ್ಟದಿಂದ ಮೇಲೆತ್ತಲು ತುರ್ತಾಗಿ 300 ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು. ಉಡುಪಿ,ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಬಹುತೇಕ ವಿಶ್ವಕರ್ಮರು ಬಿಜೆಪಿಯನ್ನು ಬೆಂಬಲಿಸಿ ಮತ ನೀಡಿ ಶಾಸಕರಾಗಿ ಆಯ್ಕೆಗೊಳ್ಳುವಲ್ಲಿ ಸಹಕರಿಸಿದ್ದಾರೆ. 3 ಜಿಲ್ಲೆಗಳ ಶಾಸಕರು ಮುಖ್ಯಮಂತ್ರಿಯವರನ್ನು ಬೇಟಿ ಮಾಡಿ ಮನವರಿಕೆ ಮಾಡಿ ನಿಗಮದ ಸಾಲ ಮನ್ನಾ ಮತ್ತು 300 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಣೆಗೆ ಒತ್ತಾಯಿಸಬೇಕು. ಇಲ್ಲವಾದರೇ ಎಲ್ಲಾ ವಿಶ್ವಕರ್ಮರಿಗೆ ರಾಜಕೀಯ ಪ್ರಜ್ಞೆ ಮೂಡಿಸಿ ನಿಜಾಂಶ ಅರ್ಥವಾಗುವಂತೆ ಹೇಳಿ ಬೇರೆ ದಿಕ್ಕಿನತ್ತ ಯೋಚನೆ ಮಾಡುವ ಅನಿವಾರ್ಯತೆ ಇದೆ.
ಬ್ಯೆಂದೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ಆಚಾರ್ಯ ಬೈಂದೂರು, ಉಡುಪಿ ಜಿಲ್ಲಾ ವಿಶ್ವಕರ್ಮ ಮಹಾಸಭಾದ ಮುಖಂಡರಾದ ಎಚ್. ರಮೇಶ್ ಆಚಾರ್ಯ ಹೆಬ್ರಿ,ಬ್ಯೆಂದೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ಕೋಶಾಧಿಕಾರಿ ರಾಜೇಶ್ ಆಚಾರ್ಯ ಬೈಂದೂರು, ವಿಶ್ವಕರ್ಮ ಸಮಾಜದ ಹಿರಿಯರಾದ ಬಾರ್ಕೂರು ಗಂಗಾಧರ ಆಚಾರ್ಯ ಉಪಸ್ಥಿತರಿದ್ದರು.