ವಿಶ್ವಕೊಂಕಣಿ ಸಮಾರೋಹ 2024, ವಿಶ್ವ ಕೊಂಕಣಿ ವಾರ್ಷಿಕ ಪುರಸ್ಕಾರ ಪ್ರದಾನ
ಭಾಷೆಗೆ ಹಿನ್ನಡೆಯಾದರೆ ನಮ್ಮ ಬದುಕಿಗೆ ಹಿನ್ನಡೆಯಾದಂತೆ.ಭಾಷೆಯನ್ನು ಧರ್ಮದಂತೆ ಗೌರವಿಸುವ ಅಗತ್ಯವಿದೆ. ಕಲಿಕೆ ಎನ್ನುವುದು ಜಾಗತಿಕವಾಗಿ ವಿಸ್ತರಿಸಿರುವಾಗ ಭೌತಿಕ ಕಟ್ಟಡಗಳ ವಿಸ್ತರಣೆಗೆ ಒತ್ತು ನೀಡುವ ಬದಲು ವರ್ಚುವಲ್ ವಿಶ್ವವಿದ್ಯಾಲಯವಾಗಿ ಬೆಳೆಯುವ ಚಿಂತನೆ ನಮ್ಮದಾಗಬೇಕು ಎಂದು ಗೋವಾ ಉದ್ಯಮಿ, ಫೊಮೆಂಟೋ ಗ್ರೂಫ್ ಆಫ್ ಇಂಡಸ್ಟಿಸ್ ಅಧ್ಯಕ್ಷ ಅವಧೂತ್ ತಿಂಬ್ಲೊ ಹೇಳಿದರು.
ಅವರು ನಗರದ ವಿಶ್ವಕೊಂಕಣಿ ಕೇಂದ್ರದಲ್ಲಿ ದಿ. ೦೫ ಮತ್ತು ೦೬ ನವೆಂಬರ್ ೨೦೨೪ ಎರಡು ದಿನಗಳ ವಿಶ್ವಕೊಂಕಣಿ ಸಮಾರೋಹ , ವಿಶ್ವ ಕೊಂಕಣಿ ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದರು. ಕರಾವಳಿಯ ನೆಲ, ಪರಿಸರದಲ್ಲಿ ಸಾಹಿತ್ಯ, ಭಾಷೆಯ ಸೊಡಗು ಶ್ರೀಮಂತವಾಗಿದೆ. ಇದಕ್ಕೆ ಸಾಕ್ಷಿಯೆಂಬ೦ತೆ ಕವಿ ರವೀಂದ್ರನಾಥ ಟಾಗೋರರು ತಮ್ಮ ಗೀತಾಂಜಲಿ ಕೃತಿಯನ್ನು ಕಾರವಾರದ ನೆಲದಲ್ಲಿ ರಚಿಸಿದ್ದರು ಎನ್ನಲಾದ ಸಂದರ್ಭವನ್ನು ಅವರು ವಿವರಿಸಿದರು.ಉದ್ಯಮಿ ಡಾ.ಪಿ. ದಯಾನಂದ ಪೈ , ಟಿ.ವಿ. ಮೋಹನದಾಸ ಪೈ ಅವರ ಶುಭಾಶಂಸನೆಯ ಸಂದೇಶವನ್ನು ನೇರ ಪ್ರಸಾರಿಸಲಾಯಿತು.
ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ: ದಿ. ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ದಿ ಸಮ್ಮಾನ ಪ್ರಶಸ್ತಿಯನ್ನು ಗೋವಾದ ಹಿರಿಯ ಚಿಂತಕ ವಂದನೀಯ ಮೌಜಿನೊ ದೆ ಅಟೈದೆ, ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರವನ್ನು ಗೋವಾದ ಕವಿ ಪ್ರಕಾಶ ಡಿ. ನಾಯಕ್ ಅವರ ‘ಮೊಡಕೂಳ್’ ಎಂಬ ಕೃತಿಗೆ ನೀಡಿ ಗೌರವಿಸಲಾಯಿತು. ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರವನ್ನು ಮುಂಬಯಿನ ವೀಣಾ ಅಡಿಗೆ ಹಾಗೂ ಮಂಗಳೂರಿನ ಸೇವಾ ಭಾರತಿ ಸಂಸ್ಥೆಯ ಪರವಾಗಿ ನಾಗರಾಜ್ ಭಟ್ ಇವರಿಗೆ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಆಧ್ಯಕ್ಷ ನಂದಗೋಪಾಲ್ ಶೆಣೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಕೊಂಕಣಿ ಭಾಷಿಗರ ಅಂದಿನ ವಲಸೆಗಿಂತ ಇಂದು ಉದ್ಯೋಗ ನಿಮಿತ್ತ ತಾಯ್ನೆಲ, ಸಂಸ್ಕೃತಿಯಿ೦ದ ದೂರವಾಗುತ್ತಿರುವವರ ಸಂಖ್ಯೆ ಹೆಚ್ಚಿದೆ. ಆರ್ಥಿಕವಾಗಿ ದೇಶ ಉನ್ನತ ಸ್ಥಾನಕ್ಕೇರುವಾಗ ನಮ್ಮ ಕೊಂಕಣಿ ಸಮುದಾಯವೂ ಉನ್ನತ ಸ್ಥಾನಕ್ಕೇರುವ ನಿಟ್ಟಿನಲ್ಲಿ ನಾವು ತ್ಪರಿತವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ ,ಡಾ.ಕಿರಣ್ ಬುಡ್ಕುಳೆ, ಗಿಲ್ಬರ್ಟ್ ಡಿಸೋಜಾ,,ಕೋಶಾಧಿಕಾರಿ ಬಿ.ಆರ್.ಭಟ್, ವಿಶ್ವಸ್ಥ ಮಂಡಳಿಯ ಸದಸ್ಯರು, ಆಡಳಿತಾಧಿಕಾರಿ ಡಾ. ಬಿ. ದೇವದಾಸ ಪೈ ಉಪಸ್ಥಿತರಿದ್ದರು. ಸ್ಥಾಪಕ ಟ್ರಸ್ಟಿ ವಿಲಿಯಂ ಡಿಸೊಜ ಅವರನ್ನು ಗೌರವಿಸಲಾಯಿತು. ವಿಧುಷಿ ಮೇಘಾ ಪೈ ಕೊಂಕಣಿ ಆಶಯಗೀತೆ ಹಾಡಿದರು. ಡಾ.ಕಿರಣ್ ಬುಡ್ಕುಳೆ, ಸುಚಿತ್ರಾ ಶೆಣೈ , ವತಿಕಾ ಕಾಮತ್ ಅತಿಥಿಗಳನ್ನು ಪರಿಚಯಿಸಿದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ಡಾ| ಕಸ್ತೂರಿ ಮೋಹನ್ ಪೈ ವಂದಿಸಿದರು.
ಸಂಭ್ರಮದ ಸಮಾರೋಹ: ಮಾಹೆ ವಿ.ವಿ.ಯ ಕುಲಾಧಿಪತಿ ಡಾ. ದಿಲೀಪ್ ಜಿ. ನಾಯಕ್ ವಿಶ್ವಕೊಂಕಣಿ ಸಮಾರೋಹವನ್ನು ಉದ್ಘಾಟಿಸಿ ಕೊಂಕಣಿ ಕೀರ್ತಿ ಮಂದಿರದಲ್ಲಿ ಚಲನಚಿತ್ರ ಕಲಾವಿದೆ ಪಂಢರಿಬಾಯಿ ಅವರ ಭಾವಚಿತ್ರ ಅನಾವರಣ ಮಾಡಿದರು. ಗೋವಾದ ರಂಗಕರ್ಮಿ ಪುಂಡಲೀಕ ನಾಯಕ್, ಗೋವಾ ವಿ.ವಿ. ಕೊಂಕಣಿ ವಿಭಾಗದ ಪ್ರಾಧ್ಯಾಪಕ ಡಾ| ಹನುಮಂತ ಚೊಪ್ಡೇಕರ್ ಸಂಪಾದಕತ್ವದ ‘ಕೊಂಕಣಿ ರಂಗ ಭೂಮಿಯ ಇತಿಹಾಸ’ ಸಂಶೋಧನಾ ಕೃತಿ, ಡಾ. ಬಿ. ದೇವದಾಸ ಪೈ ಅವರ ಕೊಂಕಣಿ ಭಾಷಾ ವಿಜ್ಞಾನದ ದೀರ್ಘಾವಧಿ ಸಂಶೋಧನೆಯ ಪ್ರಥಮ ಹಂತದ ಸಂಶೋಧನಾ ವರದಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ವಿಶ್ವ ಕೊಂಕಣಿ ಕೇಂದ್ರದ ಅಂತರ್ಜಾಲ ಚಾನೆಲ್ ಮೂಲಕ ಸಹಸ್ರಾರು ಕಾರ್ಯಕ್ರಮಗಳನ್ನು ರೂಪಿಸಿದ ಶ್ರಮಿಸಿದ ಶಕುಂತಲಾ ಆರ್.ಕಿಣಿ, ಬಸ್ತಿಶೋಭಾ ಶೆಣೈ, ಸುಚಿತ್ರಾ ಎಸ್. ಶೆಣೈ ಅವರನ್ನು ಗೌರವಿಸಲಾಯಿತು.ಎರಡು ದಿನಗಳ ಈ ಸಮಾರೋಹ ಸಂಭ್ರಮದಲ್ಲಿ ಕೊಂಕಣಿ ಭಾಷೆಗೆ ಸಂಬ೦ಧಿಸಿದ೦ತೆ ವಿಚಾರಗೋಷ್ಠಿಗಳು, ಸಂವಾದ, ಸಾಂಸ್ಕೃತಿಕ ನೃತ್ಯ ವೈಭವ, ಕವಿತಾ ಟ್ರಸ್ಟ್ ಸಹಯೋಗದಲ್ಲಿ ಅಖಿಲ ಭಾರತ ಕೊಂಕಣಿ ಕವಿತಾ ಸ್ಪರ್ಧೆಗಳು ಜರಗಿದವು. ವಿಶ್ವ ಕೊಂಕಣಿ ಸರದಾರ ಸ್ವರ್ಗೀಯ ಬಸ್ತಿ ವಾಮನ ಶೆಣೈ ಅವರ ೯೦ನೇ ಜನ್ಮ ಜಯಂತಿಯ ಸಂದರ್ಭದಲ್ಲಿ ಬಸ್ತಿಯವರ ಪುತ್ಥಳಿಗೆ ಹಾರಾರ್ಪಣೆಗೈದು ಸಂಭ್ರಮಿಸಿದರು.