ವಿಹಿಂಪ, ಬಜರಂಗದಳ, ದುರ್ಗಾವಾಹಿನಿಗಳಿಂದ ಉಡುಪಿಯಲ್ಲಿ ಲವ್ ಜಿಹಾದ್ ಬಗ್ಗೆ ಜಾಗೃತಿ ಅಭಿಯಾನ
ಉಡುಪಿ: ವಿಶ್ವ ಹಿಂದೂ ಪರಿಷದ್, ಬಜರಂಗದಳ ಹಾಗೂ ದುರ್ಗಾವಾಹಿನಿ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಲವ್ ಜಿಹಾದ್ ವಿರುದ್ದ ಜಾಗೃತಿ ಅಭಿಯಾನಕ್ಕೆ ಸೋಮವಾರ ಉಡುಪಿಯ ಎಮ್ ಜಿ ಎಮ್ ಕಾಲೇಜಿನ ಬಳಿ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ವಿಲಾಸ್ ನಾಯಕ್ ಅವರು ಇತ್ತೀಚೆಗೆ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿದ್ದು, ಹತ್ತಾರು ಯುವತಿಯರು ಮನೆಯಿಂದ ನಾಪತ್ತೆಯಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಈ ಹಿನ್ನಲೆಯಲ್ಲಿ ಮನೆ ಮನೆಗೆ ತೆರಳಿ ಹಿಂದೂ ಯುವತಿಯರಿಗೆ ಲವ್ ಜಿಹಾದ್ನಿಂದಾಗುವ ತೊಂದರೆಗಳ ಬಗ್ಗೆ ತಿಳಿವಳಿಕೆ ಮೂಡಿಸಲು ಹಿಂದೂಪರ ಸಂಘಟನೆಗಳು ನಿರ್ಧರಿಸಿವೆ. ಜಾಗೃತಿಗಾಗಿ ಹಲವಾರು ತಂಡಗಳು ಸಿದ್ಧವಾಗಿದ್ದು ಕರಪತ್ರ ಹಂಚುವ ಮೂಲಕ, ಕಾಲೇಜು ವಿದ್ಯಾರ್ಥಿಗಳಿಗೆ ಲವ್ ಜಿಹಾದ್ನ ದುಷ್ಪರಿಣಾಮಗಳನ್ನು ಮನವರಿಕೆ ಮಾಡಲು ನಿರ್ಧರಿಸಿವೆ ಎಂದರು. ಪ್ರತಿಯೊಂದು ಕಾಲೇಜು ವಿದ್ಯಾರ್ಥಿಗಳಿಂದ ಲವ್ ಜಿಹಾದ್ ವಿರುದ್ದ ಸಹಿ ಸಂಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದರು.
ಹಿಂದೂ ಸಂಘಟನೆಗಳ ನಾಯಕರಾದ ಸುನೀಲ್ ಕೆ. ಆರ್, ದಿನೇಶ್ ಮೆಂಡನ್, ರಮಾ ಜೆ ರಾವ್, ಸಂತೋಷ್ ಸುವರ್ಣ ಬೊಳ್ಜೆ, ಸುಪ್ರಭಾ ಆಚಾರ್ಯ, ಭಾಗ್ಯಶ್ರೀ ಐತಾಳ ಹಾಗೂ ಇತರರು ಉಪಸ್ಥಿತರಿದ್ದರು.