ವೆನ್‌ಲಾಕ್ ವಿಭಾಗೀಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಸರಕಾರದ ಒಪ್ಪಿಗೆ: ಐವನ್ ಡಿಸೋಜಾ
ಮಂಗಳೂರು: ನಗರದ ವೆನ್ ಲಾಕ್ ಆಸ್ಪತ್ರೆಯನ್ನು ವಿಭಾಗೀಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸರಕಾರ ಒಪ್ಪಿಗೆ ನೀಡಿದ್ದು, ಬಜೆಟ್‌ನಲ್ಲಿಯೂ ಅನುದಾನ ಮೀಸಲಿರಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಆಸ್ಪತ್ರೆಗೆ ದಕ ಹಾಗೂ ಸುತ್ತಮುತ್ತಲಿನ ಹಲವು ಜಿಲ್ಲೆಗಳ ಜನರು ಚಿಕಿತ್ಸೆಗಾಗಿ ಬರುತ್ತಿದ್ದು, ಈ ಆಸ್ಪತ್ರೆಯನ್ನು ವಿಭಾಗೀಯ ಆಸ್ಪತ್ರೆಯನ್ನಾಗಿಸುವ ಮೂಲಕ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಅವಕಾಶ ನೀಡುವಂತೆ ಗುರುವಾರ ವಿಧಾನ ಪರಿಷತ್ ಅಧಿವೇಶನದಲ್ಲಿ ಗಮನ ಸೆಳೆದಿದ್ದೆ. ಈ ಬಗ್ಗೆ ಆರೋಗ್ಯ ಸಚಿವರು ಒಪ್ಪಿಗೆ ಸೂಚಿಸಿದ್ದರು ಎಂದು ಹೇಳಿದರು.
ಬಜೆಟ್‌ನಲ್ಲಿ ದಾವಣಗೆರೆ ಹಾಗೂ ಮಂಗಳೂರಿನ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಗಳು, ಮಾಲೂರು, ಮಾಗಡಿ, ಕುಶಾಲನಗರ, ಕೊರಟಗೆರೆ, ಜಗಳೂರು, ಸವಣೂರು, ದಾಮದುರ್ಗ ಮತ್ತು ಸವದತ್ತಿ ತಾಲೂಕು ಮಟ್ಟದ ಆಸ್ಪತ್ರೆಗಳ ನವೀಕರಣಕ್ಕೆ ಒಟ್ಟು 650 ಕೋಟಿ ರೂ. ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಲಾಗಿದೆ. ಜಿಲ್ಲಾಸ್ಪತ್ರೆಯಾಗಿರುವ ವೆನ್‌ಲಾಕ್‌ಗೆ ಗರಿಷ್ಟ 250 ಕೋಟಿ ರೂ.ಗಳಾದರೂ ಬಿಡುಗಡೆಯಾಗುವ ಸಾಧ್ಯತೆ ಇದೆ. 15 ಜಿಲ್ಲೆಗಳ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ವೆನ್‌ಲಾಕ್ ಹಾಗೂ ಲೇಡಿಗೋಶನ್ ಆಸ್ಪತ್ರೆಯನ್ನು ಸ್ಪೆಷಲೈಸ್ಡ್ ಆಸ್ಪತ್ರೆಯಾಗಿ ಮಾರ್ಪಡಿಸಬೇಕಿದೆ. ವೆನ್‌ಲಾಕ್‌ನಲ್ಲಿ ದಿನಕ್ಕೆ 1500ರಿಂದ 1800ರವರೆಗೆ ಹೊರ ರೋಗಿಗಳಾಗಿ, ಸುಮಾರು 200ರಷ್ಟು ಒಳ ರೋಗಿಗಳಾಗಿ ದಾಖಲಾಗುತ್ತಾರೆ. ಕ್ಯಾನ್ಸರ್ ರೋಗ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕಿದ್ವಾಯಿ ಆಸ್ಪತ್ರೆ ಮಾದರಿಯಲ್ಲಿ ವೆನ್‌ಲಾಕ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕಾಗಿದೆ. ಇದರಿಂದ ಹೆಚ್ಚಿನ ಹಾಗೂ ಅಗತ್ಯ ಸಿಬ್ಬಂದಿ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯಲಿದ್ದು, ಇದು ಜಿಲ್ಲೆಗೆ ಬಹುದೊಡ್ಡ ಕೊಡುಗೆಯಾಗಲಿದೆ ಎಂದು ಐವನ್ ಡಿಸೋಜಾ ಸಂತಸ ವ್ಯಕ್ತಪಡಿಸಿದರು.
ಕ್ರೈಸ್ತ ಅಭಿವೃದ್ಧಿ ನಿಗಮಕ್ಕೆ ಪ್ರತ್ಯೇಕ ನಿರ್ದೇಶನಾಲಯ ಅಗತ್ಯ
ದ.ಕ. ಮತ್ತು ಒಟ್ಟು ಕರ್ನಾಟಕದ ಜನಸಂಖ್ಯೆಯ ಶೇ. 3.5ರಷ್ಟು ಕ್ರೈಸ್ತ ಸಮುದಾಯದವರಿದ್ದು, ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂಬುದು ನಮ್ಮ ಪ್ರಮುಖ ಆಗ್ರಹವಾಗಿತ್ತು. 2014 ರಲ್ಲಿ ಮೊದಲ ಬಾರಿಗೆ ನಾನು ಕ್ರೈಸ್ತ ಅಭಿವೃದ್ಧಿ ನಿಗಮದ ಬಗ್ಗೆ ಪ್ರಸ್ತಾಪಿಸಿದ್ದೆ. 2019 ನೇ ಸಾಲಿನಲ್ಲಿ ಮಂಜೂರು ಮಾಡಿದರೂ ಕಾರ್ಯಗತ ಆಗಿರಲಿಲ್ಲ. ಈಗ ಬಜೆಟ್ ನಲ್ಲಿ ಘೋಷಣೆ ಜೊತೆಗೆ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. 250 ಕೋಟಿ ಅನುದಾನ ನೀಡಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟಕ್ಕೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ನಿಗಮದಲ್ಲಿ ಮಾಡುವ ತೀರ್ಮಾನಗಳು, ದುಡ್ಡಿನ ಹಂಚಿಕೆ ನೇರವಾಗಿ ನಿರ್ದೇಶನಾಲಯದ ಮೂಲಕ ಮಾಡುವ ಜತೆಗೆ ಮ್ಯಾಚಿಂಗ್ ಗ್ರಾಂಟ್ ಕೂಡಾ ಒದಗಿಸಲು ಸಾಧ್ಯ ಆಗಲಿದೆ. ಸದ್ಯ ಅಲ್ಪಸಂಖ್ಯಾತ ನಿರ್ದೇಶನಾಲಯದಡಿ ಇದು ಒಳಪಡುತ್ತಿದ್ದು, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಪ್ರತ್ಯೇಕ ನಿರ್ದೇಶನಾಲಯವಿದೆ ಎಂದು ಅವರು ಹೇಳಿದರು.
ಇತರ ಪಕ್ಷದ ಕಾರ್ಯಕರ್ತರನ್ನು ಹೀಯಾಳಿಸುವುದನ್ನು ಬಿಡಿ
ಶಾಸಕರಾಗಿ ವೇದವ್ಯಾಸ ಕಾಮತ್‌ರವರು ಹೋದ, ಬಂದಲೆಲ್ಲಾ, ಕಾಂಗ್ರೆಸ್ ಸೇರಿದಂತೆ ಇತರ ಪಕ್ಷದ ಸದಸ್ಯರನ್ನು ಹೀಯಾಳಿಸುವುದನ್ನು ಬಿಡಬೇಕು. ಅವರು ಕ್ಷೇತ್ರದ ಎಲ್ಲಾ ಜನರ ಶಾಸಕರು ಎಂಬುದನ್ನು ಅರಿತು ಜವಾಬ್ಧಾರಿಯಿಂದ ವರ್ತಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.
ಶಕ್ತಿನಗರದ ಭಜನಾ ಮಂದಿರದ ಕಾರ್ಯಕ್ರಮವೊಂದರಲ್ಲಿ ಪಕ್ಷದ ಕಾರ್ಯಕರ್ತ ಯಶವಂತ ಪ್ರಭು ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವಿಧಾನಸಭೆಯಲ್ಲಿ ವೇದವ್ಯಾಸ ಕಾಮತ್‌ರವರು ಸುಳ್ಳು ಹೇಳಿದ್ದಾರೆ. ನಾನು ಹೊಡೆದಿದ್ದು ಆದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಶಾಸಕರು ಹಲ್ಲೆ ನಡೆಸಿದ್ದಾರೆಂದು ಎಫ್‌ಐಆರ್‌ನಲ್ಲೂ ದೂರು ನೀಡಿದವರು ಹೇಳಿಲ್ಲ. ಬದಲಾಗಿ ಶಾಸಕರ ಪ್ರಚೋದನೆಯ ಮೇರೆಗೆ ಹಲ್ಲೆ ನಡೆದಿದೆ ಎಂದು ಅವರ ಮೇಲಿರುವ ಆರೋಪ. ಕಾರ್ಯಕ್ರಮಕ್ಕೆ ಆಗಮನದ ವೇಳೆ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಅಣಕಿಸಿದ್ದು ಮಾತ್ರವಲ್ಲದೆ, ಭಾಷಣದಲ್ಲೂ ಆ ಮಾತುಗಳನ್ನು ಪುನರಾವರ್ತಿಸಿದ್ದಾರೆ. ಈ ಬಗ್ಗೆ ಕಾರ್ಯಕ್ರಮ ಆಗಿ ಹಿಂತಿರುಗುವ ವೇಳೆ ವಿಚಾರಿಸಿದ ಕಾರ್ಯಕರ್ತರ ಮೇಲೆ ಅವರ ಜತೆಗಿದ್ದವರು ಹಲ್ಲೆ ನಡೆಸುವಾಗ ಅವರನ್ನು ತಡೆಯುವ ಬದಲು ಹಲ್ಲೆಗೆ ಪ್ರಚೋದನೆ ನೀಡಿದ್ದಾರೆ. ನಾನು ಅದೇ ಕಾರ್ಯಕ್ರಮಕ್ಕೆ ಬಂದು ಹೋದ ನಂತರ ಈ ಹಲ್ಲೆ ಘಟನೆ ನಡೆದಿದ್ದರೂ, ನನ್ನ ಪ್ರಚೋದನೆ ಮೇಲೆ ಶಾಸಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಮತ್ತೊಂದು ಸುಳ್ಳು ಹೇಳಲಾಗಿದೆ. ಇಂತಹ ಕಾರ್ಯ ಶಾಸಕರಾದವರಿಗೆ ಶೋಭೆ ತರುವುದಿಲ್ಲ. ನನ್ನ ಮನೆ ಮೇಲೆ ಕಲ್ಲು ತೂರಾಟವಾದ ಪ್ರಕರಣದ ಸಂದರ್ಭದಲ್ಲಿಯೂ ಶಾಸಕರು ನಾನಾಗದ್ದರೆ ಐವನ್ ತಲೆಗೆ ಕಲ್ಲು ಬಿಸಾಡುತ್ತಿದ್ದೆ ಎಂಬ ಹೇಳಿಕೆ ನೀಡಿದ್ದರು. ಕಾಮತ್ ಅವರು ಹೇಳಿಸಿ ಕಲ್ಲು ತೂರಾಟ ನಡೆಸಲಾಗಿದೆ ಎಂದು ಎಲ್ಲಿಯೂ ಹೇಳಿಲ್ಲ. ನಾನು ಪ್ರಕರಣವನ್ನು ಕಾನೂನುನಾತ್ಮಕವಾಗಿ ತೆಗೆದುಕೊಂಡಿದ್ದೆನೇ ವಿನಹ, ದ್ವೇಷದಿಂದ ವರ್ತಿಸಿಲ್ಲ. ನಮ್ಮ ಕಾರ್ಯಕತರಿಗೆ ದಬ್ಬಾಳಿಕೆಗೆ ಮುಂದಾದರೆ ನಾವು ಸುಮ್ಮನಿರುವುದಿಲ್ಲ ಎಂದು ಐವನ್ ಡಿಸೋಜಾ ಹೇಳಿದರು.
ಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಶಾಲೆಟ್ ಪಿಂಟೋ, ಸುರೇಂದ್ರ ಕಾಂಬ್ಳಿ, ವಿಕಾಸ್ ಶೆಟ್ಟಿ, ಸುಧಾಕರ ಜೋಗಿ, ಯಶವಂತ ಪ್ರಭು ಮೊದಲಾದವರು ಉಪಸ್ಥಿತರಿದ್ದರು.