ವೆನ್‍ ಲಾಕ್ ತುರ್ತು ದುರಸ್ಥಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ- ಜಿಲ್ಲಾಧಿಕಾರಿ  ಸಿಂಧು ಬಿ ರೂಪೇಶ್ 

Spread the love

ವೆನ್‍ ಲಾಕ್ ತುರ್ತು ದುರಸ್ಥಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ- ಜಿಲ್ಲಾಧಿಕಾರಿ  ಸಿಂಧು ಬಿ ರೂಪೇಶ್ 

ಮಂಗಳೂರು: ಜಿಲ್ಲಾ ಆಸ್ಪತ್ರೆಯ ಬಾಕಿ ಉಳಿದಿರುವ ತುರ್ತು ದುರಸ್ಥಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ನೀರಿನ ಓವರ್ ಹೆಡ್ ಟ್ಯಾಂಕ್‍ನ ಸಾಮಥ್ರ್ಯ ಪರಿಶೀಲನೆಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಬೇಕು ಎಂದು ದ.ಕ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಸೂಚಿಸಿದ್ದಾರೆ.

ಶನಿವಾರ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಕಾರ್ಯಕಾರಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದರು.

ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ವಿಭಾಗಕ್ಕೆ ಅಗತ್ಯವಾದ 2 ಟನ್ ಎಸಿ ಉಪಕರಣವನ್ನು ಆಸ್ಪತ್ರೆಯ ಇಂಜಿನಿಯರಿಂಗ್ ವಿಂಗ್‍ನಿಂದ ಪಡೆದು ತಕ್ಷಣವೇ ಅಳವಡಿಕೆಗೊಳಿಸಬೇಕು ಎಂದ ಅವರು, ಆಸ್ಪತ್ರೆಯ ರೋಗಿಗಳಿಗೆ ಅಗತ್ಯವಾಗಿ ಬೇಕಾಗಿರುವ ಸಲಕರಣೆಗಳನ್ನು ಟೆಂಡರ್ ಆಹ್ವಾನಿಸಲು ಅನುಮತಿ ನೀಡಿದರು.

ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ವಿಭಾಗ ಮತ್ತು ನೇತ್ರ ಚಿಕಿತ್ಸಾ ವಿಭಾಗಕ್ಕೆ ಹಾಗೂ ಇತರ ಕಾರ್ಯಕ್ರಮಗಳಿಗೆ ಅತೀ ಅಗತ್ಯವಾಗಿ ಬೇಕಾದ 25 ಸೀಟ್‍ಗಳ ಹವಾನಿಯಂತ್ರಿತ ಬಸ್ಸಿನ ಖರೀದಿಗಾಗಿ ಮೆಸ್ಕಾಂ ನೀಡಿರುವ ದೇಣಿಗೆಯ ಹಣದಿಂದ ಟೆಂಡರ್ ಮೂಲಕ ಖರೀದಿಸಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿರುತ್ತದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕಿ ರಾಜೇಶ್ವರಿ ದೇವಿ ಜಿಲ್ಲಾಧಿಕಾರಿಯವರಿಗೆ ವಿವರಣೆ ನೀಡಿದರು.

ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ 1959 ರಿಂದ 1962 ರವರೆಗೆ ಫಸ್ಟ್ ಲೀಡರ್/ಶಸ್ತ್ರ ಚಿಕಿತ್ಸಕರಾಗಿ ಕರ್ತವ್ಯ ನಿರ್ವಹಿಸಿದ ದಿ. ಡಾ| ಹೆಚ್ ಶ್ರೀನಿವಾಸನ್ 90 ನೇ ಹುಟ್ಟುಹಬ್ಬದ ಪ್ರಯುಕ್ತ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ವೆನ್‍ಲಾಕ್ ಆಸ್ಪತ್ರೆ ಟ್ರಾಮಾ ವಾರ್ಡ್‍ಗೆ ಅವರ ಹೆಸರನ್ನು ಇಡುವಂತೆ ಆರೋಗ್ಯ ರಕ್ಷಾ ಸಮಿತಿಯು ಜಿಲ್ಲಾಧಿಕಾರಿ ಕಡೆಯಿಂದ ಅನುಮತಿ ಪಡೆದುಕೊಂಡಿತು. 2019-20ನೇ ಆರ್ಥಿಕ ಸಾಲಿನ ಲೆಕ್ಕ ತಪಾಸಣೆಯನ್ನು ನಡೆಸಲು ಲೆಕ್ಕಪರಿಶೋಧಕರನ್ನು ನೇಮಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಲೇಡಿಗೋಷನ್ ಅಧೀಕ್ಷಕಿ ಸವಿತಾ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್, ಕೆ.ಎಂ.ಸಿ ಆಸ್ಪತ್ರೆ ಡೀನ್, ಮೆಸ್ಕಾಂ ಪ್ರತಿನಿಧಿಗಳು, ವೆನ್‍ಲಾಕ್ ಆಸ್ಪತ್ರೆಯ ಆರ್,ಎಂ.ಓ ಡಾ| ಜೂಲಿಯಾನ ಸಲ್ಡಾನ ಉಪಸ್ಥಿತರಿದ್ದರು.


Spread the love