ವೈದ್ಯರ ಮುಷ್ಕರಕ್ಕೆ ಮಂಗಳೂರು ಕಾಲೇಜು ವಿದ್ಯಾರ್ಥಿನಿ ಬಲಿ
ಪುತ್ತೂರು: ಕಿಡ್ನಿ ವೈಪಲ್ಯದಿಂದ ಬಳಲುತಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳು ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿರುವ ಘಟನೆ ಪುತ್ತೂರಿನಲ್ಲಿ ಇಂದು ಬೆಳಗ್ಗೆ ವರದಿಯಾಗಿದೆ. ಇಲ್ಲಿನ ವಿದ್ಯಾಪುರ ನಿವಾಸಿ ಪೂಜಾ ಸಾವನ್ನಪ್ಪಿದ ದುರ್ದೈವಿ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಪೂಜಾಗೆ ವಾರಕ್ಕೆ ಎರಡು ಬಾರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬೆಳಗ್ಗೆ ಕಿಡ್ನಿ ಸಮಸ್ಯೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಕೂಡಲೇ ಮನೆಯವರು ಆಸ್ಪತ್ರೆಗೆ ಕರೆತಂದಿದ್ದರು.
ಆದರೆ ಆಸ್ಪತ್ರೆಯಲ್ಲಿ ವೈದ್ಯರ ಮುಷ್ಕರ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿ ಮಂಗಳೂರು ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದರು. ಬಳಿಕ ಪೂಜಾಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾಳೆ.
ವಿದ್ಯಾಪುರ ನಿವಾಸಿಯಾಗಿರುವ ಪೂಜಾ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ.ವಿದ್ಯಾರ್ಥಿನಿಯಾಗಿದ್ದರು.