ವೈಭವದ ಪಲಿಮಾರು ಪರ್ಯಾಯ ಮೆರವಣಿಗೆಗೆ ಸಾಕ್ಷಿಯಾದ ಜನಸ್ತೋಮ

Spread the love

ವೈಭವದ ಪಲಿಮಾರು ಪರ್ಯಾಯ ಮೆರವಣಿಗೆಗೆ ಸಾಕ್ಷಿಯಾದ ಜನಸ್ತೋಮ

ಉಡುಪಿ: ಎಂಟು ಶತಮಾನಗಳ ಹಿಂದೆ ಆಚಾರ್ಯ ಮಧ್ವರು ಸ್ಥಾಪಿಸಿದ ಉಡುಪಿ ಶ್ರೀಕೃಷ್ಣ ಮಠದಲ್ಲಿ ಗುರುವಾರ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಗಳು ಪಲಿಮಾರು ಶ್ರೀ ವಿದ್ಯಾದೀಶ ತೀರ್ಥರಿಗೆ   ಶ್ರೀಕೃಷ್ಣ ದ್ವೈವಾರ್ಷಿಕ ಪೂಜಾ ಕೈಂಕರ್ಯ ಮತ್ತು ಮಠದ ಆಡಳಿತವನ್ನು (ಪರ್ಯಾಯ) ಹಸ್ತಾಂತರಿಸುವುದಕ್ಕೂ ಮುನ್ನ ವೈಭವದ ಪರ್ಯಾಯ ಮೆರವಣಿಗೆ ನಡೆಯಿತು.

 ಆಕಾಶದಲ್ಲಿ ನಕ್ಷತ್ರಗಳ ಮಿಂಚನ್ನು ಮೀರಿ ಮಿರಮಿರ ಮಿಂಚುವ ವಿದ್ಯುತ್ ದೀಪಾಲಂಕಾರಗಳು. ಅದರ ನಡುವೆ ಗಂಟೆ, ಜಾಗಟೆ, ನೃತ್ಯ, ಭಜನೆ, ಮಂತ್ರಘೋಷಗಳು. ಮಧ್ಯೆ ಪರ್ಯಾಯ ಪೀಠವೇರುವ ಪಲಿಮಾರು ಶ್ರೀಪಾದರು ಸೇರಿದಂತೆ ಇತರ ಸ್ವಾಮೀಜಿಗಳ ವೈಭವದ ಮೆರವಣಿಗೆಯನ್ನು ರಸ್ತೆಯುದ್ದಕ್ಕೂ ಸಾಲು ಸಾಲಾಗಿ ನಿಂತಿದ್ದ ಜನ ನೋಡಿ ಕಣ್ತುಂಬಿಕೊಂಡರು.

ಪ್ರಾತಃಕಾಲ  ಪಲಿಮಾರು ಶ್ರೀಗಳು ದಂಡತೀರ್ಥಕ್ಕೆ ತೆರಳಿ ಪವಿತ್ರ ಸ್ನಾನ ಮತ್ತು ಇತರ ಧಾರ್ಮಿಕ ವಿಧಿವಿಧಾನ ಮುಗಿಸಿದ ನಂತರ ಜೋಡುಕಟ್ಟೆ ವೃತ್ತಕ್ಕೆ  ಆಗಮಿಸಿದರು.

 ಅಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ನಂತರ,   ವೈಭವದ ಪರ್ಯಾಯ ಮೆರವಣಿಗೆ ಆರಂಭವಾಯಿತು. ದೇಶ, ವಿದೇಶದಿಂದ ಬಂದ ಲಕ್ಷಾಂತರ ಮಂದಿ ಭಕ್ತಾದಿಗಳು ಪರ್ಯಾಯ ಉತ್ಸವಕ್ಕೆ ಸಾಕ್ಷಿಯಾದರು.  ವಿವಿಧ ಟ್ಯಾಬ್ಲೋಗಳು, ಚಂಡೆ, ಡೊಳ್ಳುಕುಣಿತ, ಹುಲಿವೇಷ, ನಾಸಿಕ್ ಬ್ಯಾಂಡ್ ಮುಂತಾದವು ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.


Spread the love