ವೈಭವದ ಶೋಭಾಯಾತ್ರೆಯೊಂದಿಗೆ ಉಚ್ಚಿಲ ದಸರಾ ಸಂಪನ್ನ
ಉಡುಪಿ: ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಹತ್ತು ದಿನಗಳ ಕಾಲ ಜರಗಿದ ಉಚ್ಚಿಲ ದಸರಾ ಉತ್ಸವದ ಪ್ರಯುಕ್ತ ಜರಗಿದ ವೈಭವದ ಶೋಭಾಯಾತ್ರೆಗೆ ಉಚ್ಚಿಲ ದಸರಾ ರೂವಾರಿ ಡಾ| ಜಿ. ಶಂಕರ್ ಮಂಗಳವಾರ ಸಂಜೆ ಗಣ್ಯರ ಜತೆಗೂಡಿ ಚಾಲನೆ ನೀಡಿದರು.
ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆಗೆ ಮಹಾಮಂಗಳಾರತಿ ಬೆಳಗಿ, ವಿಸರ್ಜನ ಪೂಜೆ ನಡೆಸಿದರು.
ವಿವಿಧ ಟ್ಯಾಬ್ಲೋಗಳೊಂದಿಗೆ ಉಚ್ಚಿಲದಿಂದ ಕಾಲ್ನಡಿಗೆ ಮೂಲಕ ಹೊರಟ ಶೋಭಾಯಾತ್ರೆಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರ್ಮಾಳು, ಉಚ್ಚಿಲ, ಮೂಳೂರು, ಕೊಪ್ಪಲಂಗಡಿಗೆ ಬಂದು ಕಾಪು ಬೀಚ್ನಲ್ಲಿ ಸಮುದ್ರ ಮಧ್ಯದಲ್ಲಿ ಜಲಸ್ತಂಭನಗೊಳಿಸಲಾಯಿತು.
ಕಾಪು ಬೀಚ್ನಲ್ಲಿ ಕಾಶಿಯಲ್ಲಿ ಗಂಗಾನದಿ ತಟದಲ್ಲಿ ಗಂಗಾರತಿ ಬೆಳಗುವ ಪುರೋಹಿತರ ಮೂಲಕ ಬೃಹತ್ ರಥಾರತಿ ಮತ್ತು ಗಂಗಾರತಿ ಬೆಳಗಲಾಯಿತು. ಗಂಗಾರತಿಗೂ ಪೂರ್ವದಲ್ಲಿ ಸಮುದ್ರ ತೀರದಲ್ಲಿ ಹತ್ತು ಸಾವಿರ ಸುಮಂಗಲೆಯರಿಂದ ಸಾಮೂಹಿಕ ಮಹಾ ಮಂಗಳಾರತಿ ನೆರವೇರಿಸಲಾಯಿತು. ಸಮುದ್ರ ಮಧ್ಯದಲ್ಲಿ 50ಕ್ಕೂ ಅಧಿಕ ಮೀನುಗಾರಿಕಾ ಬೋಟ್ಗಳನ್ನು ಜೋಡಿಸಿ ಕೃತಕ ದ್ವೀಪ ಸೃಷ್ಟಿ ಮಾಡಲಾಗಿದ್ದು, ಅಲ್ಲಿ ನಡೆದ ಸುಡುಮದ್ದು ಪ್ರದರ್ಶನ ಜನಾಕರ್ಷಣೆಗೆ ಕಾರಣವಾಯಿತು.
ಅಂಬಾರಿ ಹೊತ್ತ ಆನೆ, ನವದುರ್ಗೆಯರು ಮತ್ತು ಶಾರದೆಯ ವಿಗ್ರಹಗಳನ್ನೊಳಗೊಂಡ ಟ್ಯಾಬ್ಲೋಗಳ ಸಹಿತವಾಗಿ, ಸಾಮಾಜಿಕ ಜಾಗೃತಿಯ ಸಂದೇಶ ಸಾರುವ ಟ್ಯಾಬ್ಲೋಗಳು, ವಿವಿಧ ಕುಣಿತ ಭಜನ ತಂಡಗಳು, ತೈಯ್ಯಂ, ಮೀನು, ಕೇರಳ ಭೂತ, ಬಟರ್ಫ್ಲೆ$ç ಸಹಿತ ವಿವಿಧ ವೇಷ ಭೂಷಣಗಳು, ಹುಲಿ ವೇಷ ತಂಡಗಳು, ಚಂಡೆ ಬಳಗ, ನಾದ ಸ್ವರ, ವಾದ್ಯ ಸಹಿತ ನಾಸಿಕ್ ಬ್ಯಾಂಡ್ ತಂಡಗಳು ಶೋಭಾಯಾತ್ರೆಯನ್ನು ಸ್ಮರಣೀಯಗೊಳಿಸಿತು.
ಹರಿಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ನಿರ್ಮಿಸಲಾಗಿರುವ ಬೃಹತ್ ಕರಿಯಾನೆಯು ಮಹಾಲಕ್ಷ್ಮೀ ದೇವರ ಬಲಿಮೂರ್ತಿಯನ್ನು ಹೊತ್ತುಕೊಂಡು ಉಚ್ಚಿಲ ದಸರಾ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದು ಈ ಬಾರಿಯ ವಿಶೇಷತೆ. ಫೈಬರ್ ಗ್ಲಾಸ್ ಮತ್ತು ಮೆಟಲ್ ಬಳಸಿ ನಿರ್ಮಿಸಲಾಗಿರುವ ಆನೆಯು ಅಂಬಾರಿ ಸಹಿತವಾಗಿ 1 ಟನ್ನಷ್ಟು ತೂಕ ಹೊಂದಿದ್ದು ಸುಮಾರು 15 ಅಡಿ ಎತ್ತರವಿದೆ.
ಶಿಸ್ತುಬದ್ಧ ಶೋಭಾಯಾತ್ರೆ: ಹತ್ತು ಕಿ.ಮೀ.ವರೆಗೆ ಸಾಗಿ ಬಂದ ಶೋಭಾಯಾತ್ರೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡರು. ಕಾಲ್ನಡಿಗೆ ಮೂಲಕ ಸಾಗಿ ಬಂದ ಶೋಭಾಯಾತ್ರೆ ಶಿಸ್ತುಬದ್ಧವಾಗಿ, ಸಾರ್ವಜನಿಕರಿಗೆ ಯಾವುದೇ ತೊಂದರೆಗಳಿಲ್ಲದಂತೇ ನಡೆದಿದೆ. ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳೂ ಸೇರಿದಂತೆ ಡಿವೈಎಸ್ಪಿ, ಇಬ್ಬರು ವೃತ್ತ ನಿರೀಕ್ಷಕರು, 12 ಮಂದಿ ಎಸ್ಐಗಳು ಸೇರಿದಂತೆ 200ಕ್ಕೂ ಅಧಿಕ ಮಂದಿ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದರು.
ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಯಶ್ಪಾಲ್ ಸುವರ್ಣ, ಎಂಆರ್ಜಿ ಗ್ರೂಫ್ನ ಆಡಳಿತ ನಿರ್ದೇಶಕ ಪ್ರಕಾಶ್ ಶೆಟ್ಟಿ ಬಂಜಾರ, ಮಾಜಿ ಶಾಸಕ ರಘುಪತಿ ಭಟ್, ಉಚ್ಚಿಲ ದಸರಾ ರೂವಾರಿ ಡಾ| ಜಿ. ಶಂಕರ್, ಉದ್ಯಮಿ ಪ್ರಸಾದ್ರಾಜ್ ಕಾಂಚನ್, ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಅಮೀನ್, ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ಬಗ್ವಾಡಿ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಉದಯ್ ಕುಮಾರ್ ಹಟ್ಟಿಯಂಗಡಿ, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ, ನಯನಾ ಗಣೇಶ್, ಶಿಲ್ಪಾ ಜಿ. ಸುವರ್ಣ, ಹರಿಯಪ್ಪ ಕೋಟ್ಯಾನ್, ಶ್ರೀಪತಿ ಭಟ್ ಹಾಗೂ ಇತರರು ಪಾಲ್ಗೊಂಡಿದ್ದರು.