ಶಂಕರಪುರ – ಗದ್ದೆಯಲ್ಲಿ ಮಕ್ಕಳ ಹೆಜ್ಜೆ – “ನಮ್ಮ ನಡಿಗೆ ಕೃಷಿಯ ಕಡೆಗೆ” ಕೆಸರಿನಲ್ಲಿ ಕಲರವ
ಶಿರ್ವ:- ಶಂಕರಪುರ ಸೈಂಟ್ ಜೋನ್ಸ್ ಫ್ರೌಢ ಶಾಲಾ ಭಾರತ ಸೇವಾದಳ, ಸ್ಕೌಟ್, ಗೈಡ್ಸ್, ನೇಸರ ಹಸಿರುಪಡೆಯ 134 ವಿದ್ಯಾರ್ಥಿಗಳು ಶಂಕರಪುರ ಸಮೀಪದ ಕುರ್ಕಾಲು ಗರಡಿಮನೆ ಪ್ರಗತಿಪರ ಕೃಷಿಕ ವಸಂತ ಪೂಜಾರಿಯವರ ಗದ್ದೆಗೆ ಭೇಟಿ ನೀಡಿದರು.
ಟಿಲ್ಲರ್‍ನಲ್ಲಿ ಉಳುಮೆ ಮಾಡಿದ ಗದ್ದೆಗೆ ಇಳಿದರು. ಭಾರತ ಸೇವಾದಳದ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ “ಸಾರೇ ಜಾಹಾಂಸೆ ಅಚ್ಚಾ,,,, ಹಿಂದೂಸ್ತಾನ್ ಹಮಾರಾ..! ಗೀತೆಯನ್ನು ಸಾಮೂಹಿವಾಗಿ ಅಭಿನಯದ ಮೂಲಕ ಹಾಡಿದರು. ಗದ್ದೆಯಲ್ಲಿ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತಾ, ಸಂಭ್ರಮಿಸಿದರು. ಕೆಸರುಗದ್ದೆಯಲ್ಲಿ ಇಳಿದ ಪ್ರಥಮ ಅನುಭವದ ವಿದ್ಯಾರ್ಥಿಗಳು ಪ್ರಯಾಸ ಪಟ್ಟು ನಡೆದು ಹೊಸ ಅನುಭವ ಪಡೆದರು.
ಶಂಕರಪುರ ಚರ್ಚ್‍ನ ಸಹಾಯಕ ಧರ್ಮಗುರು ರೋಶನ್ ಡಿ ಕುನ್ಹಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾರತ ಸೇವಾದಳದ ಜಿಲ್ಲಾ ಸಂಘಟಕ ಪಕ್ಕೀರ ಗೌಡ, ಸೇವಾದಳದ ತಾಲೂಕು ಅಧಿನಾಯಕ ಎಸ್.ಎಸ್.ಪ್ರಸಾದ್, ತಾಲೂಕು ಸಮಿತಿ ಸದಸ್ಯ ರಾಯನ್ ಫೆರ್ನಾಂಡಿಸ್ ಸಾಥ್ ನೀಡಿದರು. ಗದ್ದೆಯ ಮಾಲಿಕ ಪ್ರಗತಿಪರ ಕೃಷಿಕ ವಸಂತ ಪೂಜಾರಿಯವರನ್ನು ಈ ಸಂದರ್ಭದಲ್ಲಿ ಶಾಲುಹೊದಿಸಿ, ಹಾರಹಾಕಿ ಸ್ಮರಣಿಕೆಯೊಂದಿಗೆ ಗೌರವಿಸಿದರು. ವಿದ್ಯಾರ್ಥಿಗಳು ಗದ್ದೆಯಲ್ಲಿ ನೇಜಿ ನಾಟಿ ಮಾಡಿದರು. ಭತ್ತದ ಬೆಳೆಯ ಪ್ರಾತಿಕ್ಷಕೆ ಮಾಹಿತಿಯನ್ನು ವಸಂತ ಪೂಜಾರಿಯವರು ನೀಡಿದರು.
ಶಾಲಾ ಮುಖ್ಯ ಶಿಕ್ಷಕ ಅಶ್ವಿನ್ ರೊಡ್ರಿಗಸ್, ಕೃತಜ್ಞತೆ ಸಲ್ಲಿಸಿದರು. ದೈಹಿಕ ಶಿಕ್ಷಣ ಹಾಗೂ ಭಾರತ ಸೇವದಳದ ಶಿಕ್ಷಕ ಡೋಮಿಯನ್ ಆರ್ ನೊರೋನ್ಹಾ, ಸಹ ಶಿಕ್ಷಕರು ಜೊತೆಗಿದ್ದರು. ಉಪಾಹಾರದೊಂದಿಗೆ ವಿದ್ಯಾರ್ಥಿಗಳು ಶಾಲೆಯತ್ತ ಹೆಜ್ಜೆ ಹಾಕಿದರು.