ಶನಿವಾರದಿಂದ ಲಾಕ್ ಡೌನ್ ಮತ್ತಷ್ಟು ಬಿಗಿ: ಇಂದಿರಾ ಕ್ಯಾಂಟೀನ್ ನಿಂದ ಪುಡ್ ಪ್ಯಾಕೆಟ್ ವಿತರಣೆ- ಮುಖ್ಯಮಂತ್ರಿ ಯಡಿಯೂರಪ್ಪ

Spread the love

ಶನಿವಾರದಿಂದ ಲಾಕ್ ಡೌನ್ ಮತ್ತಷ್ಟು ಬಿಗಿ: ಇಂದಿರಾ ಕ್ಯಾಂಟೀನ್ ನಿಂದ ಪುಡ್ ಪ್ಯಾಕೆಟ್ ವಿತರಣೆ- ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು: ಕೊರೋನಾವೈರಸ್ ವಿರುದ್ಧದ ಸಮರದ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಾಗಿದ್ದರೂ ಜನರು ಮಾತ್ರ ಗಂಭೀರವಾಗಿ ಪರಿಗಣಿಸಿಲ್ಲ.ಹಾಗಾಗಿ ಶನಿವಾರದಿಂದ ಲಾಕ್ ಡೌನ್ ನ್ನು ಮತ್ತಷ್ಟು ಬಿಗಿಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ,ಲಾಕ್ ಡೌನ್ ಜಾರಿಯಲ್ಲಿದ್ದರೂ ಜನರು ಗಂಭೀರವಾಗಿ ಪರಿಗಣಿಸದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮೊಂದಿಗೆ ಮಾತನಾಡಿದ್ದು, ನಾಳೆಯಿಂದ ಲಾಕ್ ಡೌನ್ ಮತ್ತಷ್ಟು ಬಿಗಿಗೊಳಿಸಲಾಗುವುದು, ಜಿಲ್ಲೆಗಳಲ್ಲಿನ ಲಾಕ್ ಡೌನ್ ಗೆ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿಸಿದರು.

ಸಂಕಷ್ಟದಲ್ಲಿರುವ ಬಡಜನರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ನಿಂದ ಪುಡ್ ಪ್ಯಾಕೆಟ್ ವಿತರಣೆ ಮಾಡಲು ನಿರ್ಧರಿಸಲಾಗಿದೆ.ಇಂದಿರಾ ಕ್ಯಾಂಟೀನ್ ಗಳಲ್ಲಿ ಪುಡ್ ಪ್ಯಾಕೆಟ್ ಮಾದರಿಯಲ್ಲಿ ಆಹಾರವನ್ನು ವಿತರಿಸಲು ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.

ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಅಗತ್ಯ ವಸ್ತುಗಳಾದ ಆಹಾರ ಧಾನ್ಯ, ಬೆಳೆ, ದಿನಸಿ, ಮಾಂಸ, ಔಷಧಿ ಮತ್ತಿತರ ವಸ್ತುಗಳಿಗೆ ತೊಂದರೆಯಾಗದಂತೆ ಗಮನ ಹರಿಸಲಾಗಿದೆ. ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ನಿರತರಾಗಿರುವವರಿಗೆ ಯಾವುದೇ ರೀತಿಯ ತೊಂದರೆ ನೀಡದಂತೆ ನೆರವು ನೀಡಬೇಕಾಗಿದೆ. ರಾಜ್ಯದಲ್ಲಿ ಸಾಕಷ್ಟು ಆಹಾರ ಧಾನ್ಯಗಳ ಸಂಗ್ರಹವಿದ್ದು, ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೊರೋನಾಪಾಸಿಟಿವ್ ಇದ್ದರೂ ಅನೇಕ ಮಂದಿ ಗುಣಮುಖರಾಗಿದ್ದು, ಇದರ ನಿಯಂತ್ರಣಕ್ಕೆ ಸರ್ಕಾರ ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದೆ. ಔಷಧಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.


Spread the love